50 ಬಾರಿ ಪ್ರಯತ್ನಿಸಿಯೂ ಸರ್ಕಾರಿ ಕೆಲಸ ಸಿಗದ ಹತಾಶೆ; ಎಂಜಿನಿಯರಿಂಗ್‌ನಲ್ಲಿ ಗೋಲ್ಡ್ ಮೆಡಲ್ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ
Uttar Pradesh News: ಸರ್ಕಾರಿ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಬಿ.ಟೆಕ್‌ನಲ್ಲಿ ಚಿನ್ನದ ಪದಕ ಪಡೆದ 23 ವರ್ಷದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಆನಂದ್ ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಲಖನೌ, ಜು. 19: ಸರ್ಕಾರಿ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಬಿ.ಟೆಕ್‌ನಲ್ಲಿ ಚಿನ್ನದ ಪದಕ ಪಡೆದ 23 ವರ್ಷದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ (Self Harming). ಹಲವು ಬಾರಿ ಪ್ರಯತ್ನಿಸಿದರೂ ಸರ್ಕಾರಿ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ ಆನಂದ್ ಕಾನ್ಪುರದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಅನೇಕರು ಮರುಗಿದ್ದಾರೆ.
ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಆನಂದ್ ಉತ್ತರ ಪ್ರದೇಶದ ಖಾಸಗಿ ಎಂಜನಿಯರಿಂಗ್ ಕಾಲೇಜಿನಲ್ಲಿ ಉತ್ತಮ ಅಂಕಗಳೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪ್ರೋಗ್ರಾಂನಲ್ಲಿ 2024ರಲ್ಲಿ ಬಿ.ಟೆಕ್ ಪೂರೈಸಿದ್ದರು. ಅಲ್ಲದೆ ಇಡೀ ರಾಜ್ಯಕ್ಕೆ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್ ಗಳಿಸಿದ್ದರು. ಅದೇ ವರ್ಷ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದ್‌ಗೆ ಚಿನ್ನದ ಪದಕ ವಿತರಿಸಲಾಗಿತ್ತು. ಆದರೆ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿಯ ಮೃತದೇಹ ಪತ್ತೆ
ಸಹೋದರನ ಮದುವೆ ಮಾತುಕತೆಗಾಗಿ ಮನೆಯವರು ಬಿಹಾರಕ್ಕೆ ತೆರಳಿದ ವೇಳೆ ಆನಂದ್ ಗೋವಿಂದ ನಗರದಲ್ಲಿರುವ ಗಜೈನಿ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡೆತ್‌ನೋಟ್ ಲಭ್ಯ
ಆನಂದ್ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಡೆತ್‌ನೋಟ್ ಲಭ್ಯವಾಗಿದ್ದು, ಇದರಲ್ಲಿ ಈ ನಿರ್ಧಾರದ ಕಾರಣವನ್ನು ವಿವರಿಸಿದ್ದಾರೆ. ಜತೆಗೆ ಈ ಕೃತ್ಯಕ್ಕಾಗಿ ತಂದೆಯ ಬಳಿ ಕ್ಷಮೆಯನ್ನೂ ಕೋರಿದ್ದಾರೆ. ಪೊಲೀಸರ ಪ್ರಕಾರ ಆನಂದ್ ತಮ್ಮ ರೂಮ್‌ನ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಡೆತ್‌ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ʼʼಸಾರಿ ಪಪ್ಪ. ನಾನು ಸರ್ಕಾರಿ ಕೆಲಸಕ್ಕಾಗಿ 50 ಬಾರಿ ಪ್ರಯತ್ನಿಸಿದೆ. ಆದರೆ ವಿಫಲನಾದೆ. ದಯವಿಟ್ಟು ನನ್ನನ್ನು ಕ್ಷಮಿಸಿʼʼ ಎಂದು ಬರೆದುಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಆನಂದ್ ಅವರ ತಂದೆ ರಾಜ್‌ಕುಮಾರ್ ಮಾತನಾಡಿ, ಮಗ 1 ವರ್ಷದ ಅಪ್ರೆಂಟಿಸ್‌ಶಿಪ್ ಕೂಡ ಮುಗಿಸಿದ್ದಾಗಿ ಹೇಳಿದ್ದಾರೆ. ʼʼಆನಂದ್ ರೈಲ್ವೆ, ಎಸ್‌ಎಸ್‌ಸಿ, ಬ್ಯಾಂಕ್, ಶಿಕ್ಷಣ ಇಲಾಖೆ ಆಯೋಜಿಸುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದ. ಆದರೆ ಯಾವುದರಲ್ಲಿಯೂ ತೇರ್ಗಡೆಯಾಗಿರಲಿಲ್ಲ. ಇದೇ ಕಾರಣಕ್ಕೆ ಕೆಲವು ದಿನಗಳಿಂದ ತೀವ್ರ ಒತ್ತಡದಲ್ಲಿದ್ದʼʼ ಎಂದು ವಿವರಿಸಿದ್ದಾರೆ.
ಶಿಕ್ಷಕರಿಂದ ಕಿರುಕುಳ; ಬಿಲ್ಡಿಂಗ್‌ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ 7 ನೇ ತರಗತಿ ವಿದ್ಯಾರ್ಥಿ!
ಮರಣೋತ್ತರ ಪರೀಕ್ಷೆಯ ವರದಿ ಬಳಿಕ ನೈಜ ಕಾರಣ ಬಹಿರಂಗ
ಆನಂದ್ ರೂಮ್‌ನಲ್ಲಿ ಡೆತ್‌ನೋಟ್ ಪತ್ತೆಯಾಗಿರುವುದನ್ನು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ʼʼಸರ್ಕಾರಿ ಕೆಲಸ ದೊರೆತಿಲ್ಲ ಎನ್ನುವ ಒತ್ತಡದಿಂದ ಆನಂದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ಗೊತ್ತಾಗಿದೆ. ಅದಾಗ್ಯೂ ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕ ಸಾವಿನ ನಿಜವಾದ ಕಾರಣ ಹೊರ ಬರಲಿದೆʼʼ ಎಂದು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.