ಬೆಂಗಳೂರು: ರಾಜ್ಯದಲ್ಲಿ ಬಡ ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಗುರಿ ಯಾಗಿಸಿಕೊಂಡು, ಔಷಧ ವೈದ್ಯಕೀಯ ಉಪಕರಣಗಳು ಮತ್ತು ಕನ್ಸ್ಯೂಮೆಬಲ್ಸ್ʼಗಳ ಮೇಲೆ ಅತಿಯಾದ ಗರಿಷ್ಠ ಮಾರಾಟ ಬೆಲೆ ನಿಗದಿಪಡಿಸಿ ದೋಚುತ್ತಿದ್ದ ಜಾಲವನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಇಲಾಖೆ ಬಯಲಿಗೆಳೆದಿದೆ. ಆಸ್ಪತ್ರೆಗಳು ಹಾಗೂ ಪೂರೈಕೆದಾರರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ಔಷಧಗಳನ್ನು ರೋಗಿಗಳಿಗೆ ಶೇ.60 ರಿಂದ 90 ಪಟ್ಟು ಹಾಗೂ ಕೆಲ ಜೀವರಕ್ಷಕ ಗಂಭೀರ ಕಾಯಿಲೆಗಳ ಔಷಧಗಳಿಗೆ ಶೇ.1000 ಪಟ್ಟು ಹೆಚ್ಚು ಅಂತರದ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಹೊರಬಿದ್ದಿದೆ.
ಎಫ್ʼಡಿಎ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ, ಔಷಧಗಳ ಉತ್ಪಾದನಾ, ಲ್ಯಾಂಡಿಂಗ್ ವೆಚ್ಚಕ್ಕೂ ಹಾಗೂ ಆಸ್ಪತ್ರೆಗಳು-ಔಷಧ ಮಳಿಗೆಗಳು ರೋಗಿಗಳಿಗೆ ವಿಧಿಸುವ ಎಂಆರ್‌ಪಿ ಬೆಲೆಗೂ ಭಾರಿ ವ್ಯತ್ಯಾಸ ಬೆಳಕಿಗೆ ಬಂದಿದೆ. 86 ರು.ಗೆ ಖರೀದಿಸಿದ ಸಾಮಾನ್ಯ ಔಷಧ-1 ರ ಎಂಆರ್‌ಪಿ ಬೆಲೆ 4528 ರು. ನಿಗದಿಪಡಿಸಲಾಗಿದೆ.
ಇದು ಮೂಲ ಬೆಲೆಗಿಂತ 52 ಪಟ್ಟು ಹೆಚ್ಚಾಗಿದೆ. ಸಾಮಾನ್ಯ ಔಷಧ-2 ರ 160 ರು. ಮೌಲ್ಯದ ಔಷಧಕ್ಕೆ ನಿಗದಿಯಾಗಿದ್ದ ಎಂಆರ್‌ಪಿ 7110 ರು. ನಂತೆ ಮಾರಾಟ ಮಾಡಲಾಗಿದೆ. ಇದು ಮೂಲ ಬೆಲೆಗಿಂತ 44 ಪಟ್ಟು ಹೆಚ್ಚಾಗಿದೆ. ಕ್ಯಾನ್ಸರ್ ಔಷಧವಾದ ಸೈಟ್ಯಾಕ್ಸ್ 100 ಎಂ.ಜಿಯ ಲ್ಯಾಂಡಿಂಗ್ ವೆಚ್ಚ 342 ರು. ಇದ್ದರೆ, ಎಂಆರ್‌ಪಿ 3836 ರು. ನಿಗದಿಯಾಗಿದೆ.
ಇದನ್ನೂ ಓದಿ: Poor-quality medicines: ರಾಜ್ಯದಲ್ಲಿ 40,48,436 ರೂ. ಮೌಲ್ಯದ ಕಳಪೆ ಔಷಧ ಜಪ್ತಿ: ದಿನೇಶ್ ಗುಂಡೂರಾವ್
ಇದು ಮೂಲ ಬೆಲೆಗಿಂತ 1021 ಪಟ್ಟು ಹೆಚ್ಚಾಗಿದೆ. ನ್ಯೂಕೈನ್ 300 ಎಂ.ಜಿಯ ಲ್ಯಾಂಡಿಂಗ್ ವೆಚ್ಚ 112 ರು. ಇದ್ದರೆ, ಎಂಆರ್‌ಪಿ 1239 ರು. ನಿಗದಿಪಡಿಸಲಾಗಿದೆ. ಇದು ಮೂಲ ಬೆಲೆಗಿಂತ 1006 ಪಟ್ಟು ಹೆಚ್ಚು. ಬಿವಾಟಾಸ್ 400 ಎಂ.ಜಿಯ ಇಂಜೆಕ್ಷನ್ ಲ್ಯಾಂಡಿಂಗ್ ವೆಚ್ಚ 5850 ರು. ಇದ್ದರೆ, ಎಂಆರ್‌ಪಿ 62,690 ರು. ನಿಗದಿಯಾಗಿದೆ. ಇದು ಮೂಲ ಬೆಲೆಗಿಂತ 971 ಪಟ್ಟು ಹೆಚ್ಚಾಗಿದೆ. ಕಾನ್ಸೆಟ್ ಲ್ಯಾಂಡಿಂಗ್ ವೆಚ್ಚ 340 ರು. ಇದ್ದರೆ ಎಂಆರ್‌ಪಿ 3699 ರು. ನಿಗದಿಪಡಿಸಲಾಗಿದೆ.
ಎನ್‌ಪಿಪಿಎಗೆ ಎಫ್ʼಡಿಎ ಆಯುಕ್ತರ ಪತ್ರ
ರಾಜ್ಯದಲ್ಲಿ ಭಾರಿ ಲಾಭ ಗಳಿಸುತ್ತಿರುವ 254 ಔಷಧ ತಯಾರಿಕಾ ಕಂಪನಿಗಳ ಸಂಪೂರ್ಣ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ, ರಾಷ್ಟ್ರೀಯ ಔಷಧಿಯ ಬೆಲೆ ಪ್ರಾಧಿಕಾರಕ್ಕೆ ಹಾಗೂ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗೆ ಎಫ್ʼಡಿಎ ಪತ್ರ ಬರೆದಿದೆ. ಡ್ರಗ್ಸ್ ಪ್ರೈಸೆಸ್ ಕಂಟ್ರೋಲ್ ಆರ್ಡರ್-2013ರ ನಿಯಮಗಳಡಿಯಲ್ಲಿ ಈ 254 ಕಂಪನಿಗಳ ಉತ್ಪನ್ನಗಳ ದರವನ್ನು ತಕ್ಷಣವೇ ನಿಯಂತ್ರಣಕ್ಕೆ ತರಬೇಕು.
ಅತಿಯಾದ ‘ಟ್ರೇಡ್ ಮಾರ್ಜಿನ್’ ಪ್ರಮಾಣಕ್ಕೆ ತಕ್ಷಣ ಬೆಲೆ ಮಿತಿ ಹೇರಬೇಕು. ಔಷಧಗಳ ಮಾದರಿಯ 24 ಪ್ರಮುಖ ವಿಭಾಗಗಳ ವೈದ್ಯಕೀಯ ಉಪಕರಣ ಗಳು ಮತ್ತು ಕನ್ಸ್ಯೂಮಬಲ್ಸ್‌ಗಳಿಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಲೆ ನಿಯಂತ್ರಣ ಚೌಕಟ್ಟು ತರಬೇಕು. ಆಸ್ಪತ್ರೆಗಳಲ್ಲಿ ರೋಗಿಗಳು ಚೌಕಾಶಿ ಮಾಡಲು ಸಾಧ್ಯವಾಗುವುದಿಲ್ಲ. ಈ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಶೇ.1000ಕ್ಕಿಂತಲೂ ಹೆಚ್ಚು ಲಾಭ ಮಾಡಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಹಾಗೂ ಅಮಾನವೀಯ. ಇದಕ್ಕೆ ತಕ್ಷಣವೇ ಕೇಂದ್ರ ಮಟ್ಟದಲ್ಲಿ ಕಡಿವಾಣ ಬೀಳಬೇಕು ಎಂದು ಎಫ್ʼಡಿಎ ಪತ್ರದಲ್ಲಿ ಒತ್ತಾಯಿಸಿರುವುದು ತಿಳಿದು ಬಂದಿದೆ.