ಬೆಂಗಳೂರು: ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಮುಂದೆ ಬಂದು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೆ ಕೈಜೋಡಿಸ ಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಕರೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್ಆರ್) ಪ್ರತಿನಿಧಿಗಳ ಸಭೆಯಲ್ಲಿ ’ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಸುಮಾರು 6 ಸಾವಿರ ಪಂಚಾಯಿತಿಗಳಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ಮೊದಲ ಹಂತದಲ್ಲಿ 1 ಸಾವಿರ ಸರಕಾರಿ ಶಾಲೆ ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಗುರಿ ಹೊಂದಲಾಗಿದೆ. ಒಟ್ಟಾರೆ 2 ಸಾವಿರ ಶಾಲೆಗಳನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸುವ ಚಿಂತನೆಯಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಈ ಪ್ರಯತ್ನದ ಫಲಿತಾಂಶ ಕಾಣಿಸಲಿದೆ ಎಂದರು.
ಖಾಸಗಿ ಶಾಲೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ದೊಡ್ಡ ಮೊತ್ತದ ಹಣ ನೀಡಲೇಬೇಕೆಂದಿಲ್ಲ. ತಮ್ಮ ಶಾಲೆಗಳಲ್ಲಿರುವ ನುರಿತ ಶಿಕ್ಷಕರನ್ನು ಸರಕಾರಿ ಶಾಲೆಗಳಿಗೆ ನಿಯೋಜಿಸುವುದು, ಕಂಪ್ಯೂಟರ್, ಪ್ರಯೋಗಾಲಯದ ಉಪಕರಣಗಳು ಹಾಗೂ ಶಾಲಾ ಬಸ್ಗಳನ್ನು ಒದಗಿಸುವ ಮೂಲಕವೂ ನೆರವಾಗಬಹುದು. ಒಂದು ಖಾಸಗಿ ಶಾಲೆ ಗರಿಷ್ಠ ಮೂರು ಸರಕಾರಿ ಶಾಲೆ ದತ್ತು ಪಡೆಯಲು ಅವಕಾಶವಿದೆ. ಯಾವ ಶಾಲೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಖಾಸಗಿ ಆಡಳಿತ ಮಂಡಳಿಗಳೇ ನಿರ್ಧರಿಸಬಹುದು ಎಂದರು.
ಸರಕಾರಿ ಶಾಲೆಗಳಿಗೆ ಸಿಎಸ್ಆರ್ ನಿಧಿ ಆದ್ಯತೆ: ರಾಜ್ಯದಲ್ಲಿ ವಾರ್ಷಿಕ ಸುಮಾರು 8800 ಕೋಟಿ ರು. ಸಿಎಸ್ಆರ್ ನಿಧಿ ಲಭ್ಯವಿದ್ದು, ಕಂಪನಿಗಳು ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಈ ನಿಧಿ ಆದ್ಯತೆಯಾಗಿ ಬಳಸುವಂತೆ ಮನವಿ ಮಾಡಲಾಗಿದೆ. ಈಗಾಗಲೇ ಹಲವು ಕಂಪನಿಗಳು ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿವೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೂ ಈ ಕಾರ್ಯದಲ್ಲಿ ಪಾಲುದಾರರಾಗಬೇಕು. ಸಿಎಸ್ಆರ್ ನಿಧಿಯ ಬಳಕೆಯಲ್ಲಿ ನಡೆಯುತ್ತಿರುವ ಕೆಲವು ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೂ ತರಲಾಗಿದೆ. ಬೇರೆಡೆ ಕಚೇರಿ ಹೊಂದಿರುವ ಕಂಪನಿ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡು, ಇಲ್ಲಿ ಗಳಿಸಿದ ಹಣವನ್ನು ಬೇರೆಡೆ ವಿನಿಯೋಗಿಸುತ್ತಿರುವುದರ ಬಗ್ಗೆ ಚರ್ಚಿಸ ಲಾಗಿದೆ ಎಂದರು.
ಸಿಎಸ್ಆರ್ ಪಾಲುದಾರರು ಕೈಜೋಡಿಸಿ: ಈ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ(Madhu Bangarappa) ಮಾತನಾಡಿ, ಸರಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾಲುದಾರರು ಸರಕಾರದೊಂದಿಗೆ ಕೈಜೋಡಿಸಬೇಕು. ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಕಲಿಕಾ ಸೌಲಭ್ಯಗಳ ಅಭಿವೃದ್ಧಿಗೆ ಖಾಸಗಿ ವಲಯದ ಸಹಕಾರ ಅಗತ್ಯವಿದೆ ಎಂದರು. ಈ ವೇಳೆ ಉಪಸಭಾಪತಿ ಮಂಕಾಳ್ ವೈದ್ಯ, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, ಮುಖ್ಯಮಂತ್ರಿಗಳ ಪ್ರಧಾನ ಸಲಹೆಗಾರ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಇನ್ನಿತರರು ಇದ್ದರು.
ಶಾಲೆಗಳಿಗೆ ಸಂಸ್ಥೆಗಳ ಹೆಸರು ಇಡಲು ಅವಕಾಶ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕಂಪನಿಗಳ ಸಿಎಸ್ಆರ್ ನಿಧಿ ಬಳಸಲಾಗುತ್ತಿದೆ. ಈ ಪೈಕಿ ಶೇ.10ರಷ್ಟು ಶಾಲೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಎಂಟು ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 12 ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಟೊಯೊಟಾ ಕಂಪನಿ ರಾಮನಗರ ಜಿಲ್ಲೆಯಲ್ಲಿ 23 ಶಾಲೆಗಳ ನಿರ್ಮಾಣಕ್ಕೆ ನೆರವು ನೀಡುತ್ತಿದ್ದು, ಪ್ರತಿ ಶಾಲೆಗೆ 10ರಿಂದ 15 ಕೋಟಿ ರು. ಹೂಡಿಕೆ ಮಾಡುತ್ತಿದೆ. ಸರಕಾರಿ ಶಾಲೆ ಅಭಿವೃದ್ಧಿಪಡಿಸುವ ಖಾಸಗಿ ಸಂಸ್ಥೆಗಳು ತಮ್ಮ ಹೆಸರನ್ನು ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಬಹುದು. ಸಿಎಸ್ ಆರ್ ನಿಧಿ ಸರಕಾರ ನೇರವಾಗಿ ಪಡೆಯುವುದಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
![]()
ಸರಕಾರಿ ಶಾಲೆಗಳ ಶಿಕ್ಷಕರ ಕೊರತೆ ನೀಗಿಸಲು ಮುಂದಿನ ಶೈಕ್ಷಣಿಕ ವರ್ಷದೊಳಗೆ 18 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ 43,553 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆ ಯಾಗದಂತೆ ಕ್ರಮ ವಹಿಸಲಾಗಿದೆ.
-ಮಧು ಬಂಗಾರಪ್ಪ, ಸಚಿವ
![]()
ವಿಶ್ವಬ್ಯಾಂಕ್ನಿಂದ 2 ಸಾವಿರ ಕೋಟಿ ರು. ಸಾಲ ಪಡೆದು ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಸರಕಾರಿ ಶಾಲೆಗಳ ಶಿಕ್ಷಕರಿಗೆ 70 ಸಾವಿರದಿಂದ 1.5 ಲಕ್ಷ ರು.ವರೆಗೆ ವೇತನ ನೀಡುತ್ತಿದ್ದರೂ ಶಿಕ್ಷಣದ ಗುಣಮಟ್ಟ ಮತ್ತಷ್ಟು ಸುಧಾರಿಸಬೇಕಿದೆ. ಶಿಕ್ಷಕರ ನೇಮಕಾತಿಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
-ಡಿ.ಕೆ.ಶಿವಕುಮಾರ್, ಸಿಎಂ