SSLC Exam Result 2026: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ 45,415 ವಿದ್ಯಾರ್ಥಿಗಳು ಫೇಲ್: ಸಚಿವ ಮಧು ಬಂಗಾರಪ್ಪ
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅನುತ್ತೀರ್ಣರಾದ ಅಥವಾ ಅಂಕಗಳನ್ನು ಸುಧಾರಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ಮೇ 18 ರಿಂದ ಮೇ 25 ರವರೆಗೆ ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆ ನಡೆಯಲಿದೆ. ಕಳೆದ ವರ್ಷದಂತೆಯೇ ಈ ಬಾರಿಯೂ ಪರೀಕ್ಷಾ ಶುಲ್ಕವನ್ನು ಸರ್ಕಾರವೇ ಭರಿಸಲಿದೆ.
ಸಚಿವ ಮಧು ಬಂಗಾರಪ್ಪ. -
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಫೇಲ್ ಆಗಿರುವ ವಿದ್ಯಾರ್ಥಿಗಳು ಪರೀಕ್ಷೆ-2 ಅನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದು ಎಂಬ ಉದ್ದೇಶದಿಂದ ಕಳೆದ ವರ್ಷದಂತೆಯೇ ಈ ಬಾರಿಯೂ ಪರೀಕ್ಷಾ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. ಇದರ ಜತೆಗೆ, ತಾವು ಪಡೆದಿರುವ ಫಲಿತಾಂಶವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗೂ ಈ 2ನೇ ಪರೀಕ್ಷೆಗೆ ಹಾಜರಾಗಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಷಯವಾರು ವಿದ್ಯಾರ್ಥಿಗಳು ಫೇಲ್ ಆಗಿರುವ ಅಂಕಿಅಂಶಗಳನ್ನೂ ಸಚಿವರು ಪ್ರಕಟ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಲ್ಲಿ 45,415 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. 1 ವಿಷಯದಲ್ಲಿ 20,691 ವಿದ್ಯಾರ್ಥಿಗಳು, 2 ವಿಷಯದಲ್ಲಿ 10,509 ವಿದ್ಯಾರ್ಥಿಗಳು, 3 ವಿಷಯದಲ್ಲಿ 6,103 ವಿದ್ಯಾರ್ಥಿಗಳು, 4 ವಿಷಯದಲ್ಲಿ 3,799 ವಿದ್ಯಾರ್ಥಿಗಳು, 5 ವಿಷಯದಲ್ಲಿ 2,552 ವಿದ್ಯಾರ್ಥಿಗಳು, ಎಲ್ಲಾ ವಿಷಯದಲ್ಲಿ 1,716 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯವನ್ನು ಉಜ್ಜಲಗೊಳಿಸುವುದು ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ನಮ್ಮೆಲ್ಲರ ಹೊಣೆಯಾಗಿದೆ. ಪರೀಕ್ಷೆಯ ಫಲಿತಾಂಶದಿಂದಾಗಿ ಯಾವುದೇ ವಿದ್ಯಾರ್ಥಿಯು ನಿರಾಸೆಗೊಂಡು ತನ್ನ ಶಿಕ್ಷಣವನ್ನು ಮೊಟಕುಗೊಳಿಸಬಾರದು ಎಂಬುದು ನನ್ನ ಹಾಗೂ ಸರ್ಕಾರದ ದೃಢವಾದ ಆಶಯವಾಗಿದೆ.
ಈ ಹಿನ್ನೆಲೆಯಲ್ಲಿ, ಅನುತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಮುಂಬರುವ ‘ಪರೀಕ್ಷೆ-2’ಕ್ಕೆ ಕಡ್ಡಾಯವಾಗಿ ನೋಂದಾಯಿಸಿ, ಅವರನ್ನು ಶೈಕ್ಷಣಿಕವಾಗಿ ಸಜ್ಜುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ಉಪ ನಿರ್ದೇಶಕರುಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಮೇ 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅನುತ್ತೀರ್ಣರಾದ ಅಥವಾ ಅಂಕಗಳನ್ನು ಸುಧಾರಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ಮೇ 18 ರಿಂದ ಮೇ 25 ರವರೆಗೆ ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಮೂರನೇ ಪರೀಕ್ಷೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಎರಡು ಪರೀಕ್ಷೆಗಳ ಅವಕಾಶ ಮಾತ್ರ ಲಭ್ಯವಿರಲಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ವೇಳಾಪಟ್ಟಿ
- 18-5-26 ಪ್ರಥಮ ಭಾಷೆ: ಕನ್ನಡ, ತೆಗಲು, ಹಿಂದಿ, ಇಂಗ್ಲೀಷ್, ಮರಾಠಿ, ಉರ್ದು, ಸಂಸ್ಕೃತ.
- 19-5-26: (ಕೋರ್ ಸಬ್ಜೆಕ್ಟ್) ಪೊಲಿಟಿಕಲ್ ಸೈನ್ಸ್,.
- 20-5-26 ದ್ವಿತೀಯ ಭಾಷೆ: ಇಂಗ್ಲೀಷ್, ಕನ್ನಡ.
- 21-5-26: (ಕೋರ್ ಸಬ್ಜೆಕ್ಟ್) ಗಣಿತ, ಸಮಾಜಶಾಸ್ತ್ರ,.
- 22 5-26: ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಕೊಂಕಣಿ, ತುಳು,ಮರಾಠಿ, ಸಂಸ್ಕೃತ.
- 23-5-26: ಕೋರ್ ಸಬ್ಜೆಕ್ಟ್: ಸೋಷಿಯಲ್ ಸೈನ್ಸ್
- 25-5-26: ಜೆಟಿಎಸ್ ವಿಷಯಗಳು