ಬೆಂಗಳೂರು: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದಾದರೂ, ಭಾರತದ ಯುವ ಜನರಲ್ಲಿ ಬಹುಪಾಲು ಮಂದಿ ತಮ್ಮ ಭಾವನಾತ್ಮಕ ಸಂಕಷ್ಟಗಳನ್ನು ಇನ್ನೂ ಒಬ್ಬರೇ ಎದುರಿಸುತ್ತಿದ್ದಾರೆ ಎಂದು ಎಂಪವರ್ ನಡೆಸಿದ ಹೊಸ ಸಮೀಕ್ಷೆ ತಿಳಿಸಿದೆ.
ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಸಂಸ್ಥೆ ಹಾಗೂ ಮಾನಸಿಕ ಆರೋಗ್ಯ ಸೇವಾ ಸಂಸ್ಥೆಯಾದ ಎಂಪವರ್, ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ‘ಅನ್‌ಪ್ಯಾಕ್ ಯೂರ್ ಎಮೋಷನಲ್ ಬ್ಯಾಗೇಜ್: ಭಾವನಾತ್ಮಕ ಸಂಕಷ್ಟದ ಸಂದರ್ಭದಲ್ಲಿ ನೆರವು ಪಡೆಯಲು ಭಾರತೀಯ ಯುವಜನರಿಗೆ ಕರೆ’ ಎಂಬ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ.
18ರಿಂದ 25 ವರ್ಷ ವಯಸ್ಸಿನ ಯುವಜನರನ್ನು ಒಳಗೊಂಡ ಈ ಅಧ್ಯಯನವನ್ನು ಮುಂಬೈ, ಪುಣೆ, ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ, ಬೆಂಗಳೂರು, ಕೋಲ್ಕತ್ತಾ, ಅಹಮದಾಬಾದ್, ಗೋವಾ, ಹೈದರಾಬಾದ್, ಚೆನ್ನೈ ಮತ್ತು ಜೈಪುರ ಸೇರಿದಂತೆ ದೇಶದ 10 ಪ್ರಮುಖ ಪ್ರದೇಶಗಳಲ್ಲಿ ನಡೆಸಲಾಗಿದೆ.
ಯುವಜನರಲ್ಲಿ ಭಾವನಾತ್ಮಕ ಒತ್ತಡಕ್ಕೆ ಕಾರಣವಾಗುವ ಅಂಶಗಳು, ಅದನ್ನು ನಿಭಾಯಿಸುವ ವಿಧಾನಗಳು ಹಾಗೂ ಸಂಕಷ್ಟದ ಸಂದರ್ಭದಲ್ಲಿ ಸುತ್ತಮುತ್ತಲಿನವರ ಪ್ರತಿಕ್ರಿಯೆಗಳ ಕುರಿತು ಸಮೀಕ್ಷೆ ಅಧ್ಯಯನ ನಡೆಸಿದೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದರೂ, ನೆರವು ಪಡೆಯುವ ಮನೋಭಾವ ಮತ್ತು ವಾಸ್ತವವಾಗಿ ಸಹಾಯ ಪಡೆಯುವ ಸಾಮರ್ಥ್ಯದ ನಡುವೆ ದೊಡ್ಡ ಅಂತರ ಇರುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.
ಸಮೀಕ್ಷೆಯ ಪ್ರಕಾರ, ಶೇ 49.5ರಷ್ಟು ಯುವಜನರು ತಮ್ಮ ಕಷ್ಟಕರ ಭಾವನೆಗಳನ್ನು ಇತರರಿಂದ ಮರೆಮಾಚಿ, ಸಮಸ್ಯೆಗಳನ್ನು ಸಂಪೂರ್ಣವಾಗಿ ತಾವೇ ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. ವೃತ್ತಿಪರ ಮಾನಸಿಕ ಆರೋಗ್ಯ ನೆರವು ಪಡೆದಿರುವವರು ಕೇವಲ ಶೇ 9.2ರಷ್ಟು ಮಾತ್ರ.
ಭಾವನಾತ್ಮಕ ಸಂಕಷ್ಟದಲ್ಲಿದ್ದರೂ ಅದನ್ನು ಹೊರಗೆ ತೋರಿಸಿಕೊಳ್ಳದ ಪ್ರವೃತ್ತಿಯೂ ಯುವಜನ ರಲ್ಲಿ ಹೆಚ್ಚಾಗಿದೆ. ಶೇ 40.9ರಷ್ಟು ಮಂದಿ ತಾವು ಚೆನ್ನಾಗಿಲ್ಲದಿದ್ದರೂ ಇತರರ ಮುಂದೆ ‘ನಾನು ಚೆನ್ನಾಗಿದ್ದೇನೆ’ ಎಂದು ಹೇಳುವುದಾಗಿ ತಿಳಿಸಿದ್ದಾರೆ. ಅನೇಕರು ತಮ್ಮ ಭಾವನೆಗಳ ಬಗ್ಗೆ ಮಾತ ನಾಡುವುದನ್ನೇ ತಪ್ಪಿಸುವುದು ಅಥವಾ ಸಮಸ್ಯೆಯಿಂದ ಗಮನ ಬೇರೆಡೆಗೆ ಹರಿಸಲು ಸದಾ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಯುವಜನರು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಾಗಲೂ ಅವರಿಗೆ ಸಿಗುವ ಪ್ರತಿಕ್ರಿಯೆ ಬಹುಪಾಲು ಸಮಾಧಾನಕರವಾಗಿಲ್ಲ ಎಂದು ಅಧ್ಯಯನ ಹೇಳಿದೆ. ಶೇ 40.4ರಷ್ಟು ಮಂದಿಗೆ ‘ಗಟ್ಟಿಯಾಗಿರು’ ಎಂಬ ಪ್ರತಿಕ್ರಿಯೆ ದೊರೆತಿದೆ. ಇದಲ್ಲದೆ, ‘ಅತಿಯಾಗಿ ಯೋಚಿಸಬೇಡ’, ‘ಕೆಲಸ ಅಥವಾ ಓದಿನ ಮೇಲೆ ಗಮನಕೊಡು’ ಎಂಬ ಸಲಹೆಗಳು ಸಾಮಾನ್ಯವಾಗಿವೆ.
ಇದಕ್ಕೆ ವಿರುದ್ಧವಾಗಿ, ತಮ್ಮ ಮಾತನ್ನು ಯಾವುದೇ ತೀರ್ಪು ನೀಡದೆ ಆಲಿಸಿ, ಬೆಂಬಲ ನೀಡಿದವರು ಇದ್ದಾರೆ ಎಂದು ಹೇಳಿದ ಯುವಜನರ ಪ್ರಮಾಣ ಕೇವಲ ಶೇ 13.6 ಮಾತ್ರವಾಗಿದೆ.
ಎಂಪವರ್‌ನ ಮುಖ್ಯ ವೈದ್ಯಕೀಯ ಸಲಹೆಗಾರ ಹಾಗೂ ಮಕ್ಕಳು, ಕಿಶೋರರು ಮತ್ತು ಕುಟುಂಬ ಮನೋವೈದ್ಯರಾದ ಡಾ. ಜಿರಾಕ್ ಮಾರ್ಕರ್ ಮಾತನಾಡಿ, “ಮಾನಸಿಕ ಆರೋಗ್ಯ ಎಂದರೆ ಕೇವಲ ಖಿನ್ನತೆ ಅಥವಾ ಆತಂಕದಂತಹ ವೈದ್ಯಕೀಯ ಸ್ಥಿತಿಗಳಷ್ಟೇ ಅಲ್ಲ. ನಮ್ಮ ಒಳಗಿನ ಆಲೋಚನೆ ಗಳನ್ನು ಹೇಗೆ ನಿಭಾಯಿಸುತ್ತೇವೆ, ಸಂಬಂಧಗಳನ್ನು ಹೇಗೆ ಬೆಳೆಸುತ್ತೇವೆ ಮತ್ತು ಭಾವನಾತ್ಮಕ ನೋವನ್ನು ಹೇಗೆ ಹೊರಹಾಕುತ್ತೇವೆ ಎಂಬುದೂ ಮಾನಸಿಕ ಆರೋಗ್ಯದ ಭಾಗವಾಗಿದೆ,” ಎಂದು ಹೇಳಿದರು.
“ಯುವಜನರಿಗೆ ನಿರಂತರವಾಗಿ ‘ಗಟ್ಟಿಯಾಗಿರು’, ‘ಕೆಲಸದ ಮೇಲೆ ಗಮನಕೊಡು’, ‘ಅತಿಯಾಗಿ ಯೋಚಿಸಬೇಡ’ ಎಂದು ಹೇಳಿದಾಗ ಅವರ ನೋವನ್ನು ಗಂಭೀರವಾಗಿ ಪರಿಗಣಿಸದಂತಾಗುತ್ತದೆ. ಸಂಕಷ್ಟವನ್ನು ಮರೆಮಾಚುವುದು ಮತ್ತು ಭಾವನೆಗಳನ್ನು ಒಳಗೇ ಹೂತುಹಾಕುವುದು ಅಪಾಯಕಾರಿ ಮಾನಸಿಕ ಒತ್ತಡವನ್ನು ಸೃಷ್ಟಿಸಬಹುದು. ತೀವ್ರ ಸಂದರ್ಭಗಳಲ್ಲಿ ಇದು ಅತಿಯಾದ ನಿರಾಶೆ ಮತ್ತು ಆತ್ಮಹತ್ಯೆಯ ಅಪಾಯಕ್ಕೂ ಕಾರಣವಾಗಬಹುದು,” ಎಂದು ಅವರು ಎಚ್ಚರಿಸಿದರು.
“ಆತ್ಮಹತ್ಯೆ ತಡೆಗಟ್ಟುವಿಕೆ ಎಂದರೆ ಸಂಕಷ್ಟ ಉಂಟಾದ ನಂತರ ಮಾತ್ರ ಕ್ರಮ ಕೈಗೊಳ್ಳುವುದಲ್ಲ. ಎಲ್ಲಾ ತರಗತಿಗಳ ಶಾಲಾ ಪಠ್ಯಕ್ರಮದಲ್ಲಿಯೇ ಮಾನಸಿಕ ಆರೋಗ್ಯ ಶಿಕ್ಷಣವನ್ನು ಅಳವಡಿಸು ವುದು ಅಗತ್ಯ. ಬಾಲ್ಯದಿಂದಲೇ ಸಹಾನುಭೂತಿ ಮತ್ತು ಸ್ವೀಕಾರದ ಮನೋಭಾವವನ್ನು ಬೆಳೆಸಿದಾಗ ಮಾತ್ರ ಯುವಜನರಿಗೆ ಸುರಕ್ಷಿತ ವಾತಾವರಣ, ಗೌರವ ಮತ್ತು ಅಗತ್ಯವಾದ ವೃತ್ತಿಪರ ನೆರವು ಒದಗಿಸಬಹುದು,” ಎಂದರು.
ಮಹಿಳೆಯರಲ್ಲಿ ಆಂತರಿಕ ಒತ್ತಡ, ಪುರುಷರಲ್ಲಿ ಉದ್ಯೋಗ-ಹಣಕಾಸಿನ ಚಿಂತೆ ಹೆಚ್ಚು ಭಾವನಾ ತ್ಮಕ ಒತ್ತಡದ ಸ್ವರೂಪದಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಸ್ಪಷ್ಟ ವ್ಯತ್ಯಾಸ ವಿರುವುದನ್ನೂ ಸಮೀಕ್ಷೆ ಗುರುತಿಸಿದೆ.
ಮಹಿಳೆಯರಲ್ಲಿ ನಿರಂತರ ಅತಿಯಾದ ಯೋಚನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ 60ರಷ್ಟು, ಆತ್ಮಸಂಶಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ 56ರಷ್ಟು ಹಾಗೂ ದೇಹದ ರೂಪದ ಕುರಿತ ಚಿಂತೆಯಲ್ಲಿ ಶೇ 69ರಷ್ಟು ಮಹಿಳೆಯರ ಪಾಲು ಕಂಡುಬಂದಿದೆ.
ಇನ್ನೊಂದೆಡೆ, ಉದ್ಯೋಗ ಸಂಬಂಧಿತ ಒತ್ತಡದ ಪ್ರಕರಣಗಳಲ್ಲಿ ಶೇ 57ರಷ್ಟು ಪುರುಷರು ಹಾಗೂ ಹಣಕಾಸಿನ ಅಸ್ಥಿರತೆಯ ಚಿಂತೆ ಹೊಂದಿರುವವರಲ್ಲಿ ಶೇ 54ರಷ್ಟು ಪುರುಷರು ಇದ್ದಾರೆ.
ತಮಗೆ ಏನೋ ಸಮಸ್ಯೆ ಇದೆ ಎಂಬುದನ್ನು ಮತ್ತೊಬ್ಬರು ಗಮನಕ್ಕೆ ತಂದ ನಂತರವೇ ಅರಿತು ಕೊಳ್ಳುವವರಲ್ಲಿ ಶೇ 60ರಷ್ಟು ಮಂದಿ ಪುರುಷರು ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಯುವ ಪುರುಷರಲ್ಲಿ ತಮ್ಮ ಭಾವನಾತ್ಮಕ ಸ್ಥಿತಿಯನ್ನು ಗುರುತಿಸುವ ಅರಿವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಮೀಕ್ಷೆ ಸೂಚಿಸಿದೆ.
ದಿನನಿತ್ಯದ ಬದುಕಿನ ಮೇಲೂ ಪರಿಣಾಮ
ಭಾವನಾತ್ಮಕ ಸಂಕಷ್ಟವು ದೈನಂದಿನ ವರ್ತನೆ ಮತ್ತು ಜೀವನಶೈಲಿಯ ಮೇಲೂ ಪರಿಣಾಮ ಬೀರುತ್ತಿದೆ. ಶೇ 47ರಷ್ಟು ಮಂದಿ ತಾವು ಸುಲಭವಾಗಿ ಕೋಪಗೊಳ್ಳುವುದು ಅಥವಾ ಕಿರಿಕಿರಿ ಗೊಳ್ಳುವುದಾಗಿ ತಿಳಿಸಿದ್ದಾರೆ.
ಶೇ 36.7ರಷ್ಟು ಮಂದಿಗೆ ಏಕಾಗ್ರತೆ ಕಷ್ಟವಾಗುವುದು ಅಥವಾ ಸಾಮಾನ್ಯವಾಗಿ ಸಂತೋಷ ನೀಡುವ ಸಂಗತಿಗಳಲ್ಲಿ ಆಸಕ್ತಿ ಕಡಿಮೆಯಾಗುವುದು ಕಂಡುಬಂದಿದೆ. ಶೇ 31.3ರಷ್ಟು ಮಂದಿ ತಮ್ಮ ದಿನನಿತ್ಯದ ಕೆಲಸ ಅಥವಾ ನಿಯಮಿತ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಎಂಪವರ್ ಸಮೀಕ್ಷೆಯ ಪ್ರಕಾರ, ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದಷ್ಟೇ ಈಗ ಸಾಕಾಗುವುದಿಲ್ಲ. ಯುವಜನರು ಸಂಕಷ್ಟದ ಸಂದರ್ಭದಲ್ಲಿ ನೆರವು ಕೇಳಲು ಸುರಕ್ಷಿತವೆಂದು ಭಾವಿಸುವಂತಹ ವಾತಾವರಣವನ್ನು ನಿರ್ಮಿಸುವುದು ಮುಖ್ಯವಾಗಿದೆ.
ಆತ್ಮಹತ್ಯೆ ತಡೆಗಟ್ಟುವಿಕೆ ಗಂಭೀರ ಸಂಕಷ್ಟದ ಹಂತಕ್ಕೆ ತಲುಪಿದ ನಂತರ ಆರಂಭವಾಗಬಾರದು. ಯುವಜನರನ್ನು ಮೌನವಾಗಿ ಸಂಕಷ್ಟ ಅನುಭವಿಸುವಂತೆ ಮಾಡುವ ಅಪಮಾನ ಭಾವನೆ, ತೀರ್ಪು ನೀಡುವ ಮನೋಭಾವ ಮತ್ತು ಸಮಸ್ಯೆಯನ್ನು ಲಘುವಾಗಿ ಪರಿಗಣಿಸುವ ಪ್ರತಿಕ್ರಿಯೆ ಗಳನ್ನು ಕಡಿಮೆ ಮಾಡುವುದರಿಂದಲೇ ತಡೆಗಟ್ಟುವಿಕೆ ಆರಂಭವಾಗಬೇಕು ಎಂದು ಸಮೀಕ್ಷೆ ಹೇಳಿದೆ.
ತ್ವರಿತವಾಗಿ ಸಮಸ್ಯೆಯನ್ನು ತಳ್ಳಿಹಾಕುವ ಪ್ರತಿಕ್ರಿಯೆಗಳ ಬದಲು, ಸಹಾನುಭೂತಿಯುತವಾಗಿ ಆಲಿಸುವುದು ಮತ್ತು ಯಾವುದೇ ತೀರ್ಪು ನೀಡದೆ ಬೆಂಬಲ ನೀಡುವುದು ಜಾಗೃತಿ ಮತ್ತು ನೆರವು ಪಡೆಯುವಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಬಹುದು. ಯಾವುದೇ ಯುವಕ ಅಥವಾ ಯುವತಿಗೆ ತಮ್ಮ ಭಾವನಾತ್ಮಕ ಭಾರವನ್ನು ಒಬ್ಬರೇ ಹೊರುವುದೇ ಏಕೈಕ ಮಾರ್ಗ ಎಂಬ ಭಾವನೆ ಮೂಡದಂತೆ ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಸಮೀಕ್ಷೆ ಒತ್ತಿಹೇಳಿದೆ.