ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್‌ಗಳು ಇರುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು (B.PAC) ಮೌಂಟ್ ಕಾರ್ಮೆಲ್ ಕಾಲೇಜು ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಬುಧವಾರ ಬೆಂಗಳೂರು ಅಭಿವೃದ್ಧಿ, ಪರಿವರ್ತನೆ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವಾರು ದಶಕಗಳಿಂದ ಬೆಂಗಳೂರಿನಲ್ಲಿ ಅನೇಕ ಸವಾಲುಗಳಿವೆ. ಜಿಬಿಎಯನ್ನು ಪರಿಚಯಿಸಲು ಇದು ಸೂಕ್ತ ಸಮಯ ಎಂದು ಅನಿಸಿದ್ದೇಕೆ ಎಂದು ಕೇಳಿದಾಗ, ʼನಾವೆಲ್ಲರೂ ಬೆಂಗಳೂರಿನ ನಾಗರಿಕರು. ನಗರೀಕರಣ ಯಾವುದೇ ದೇಶ ಅಥವಾ ನಗರಕ್ಕೆ ದೊಡ್ಡ ಸವಾಲು. ಜನ ಬೆಂಗಳೂರಿಗೆ ವಲಸೆ ಬರುವುದು ಶಿಕ್ಷಣ, ಉದ್ಯೋಗ ಹಾಗೂ ಉತ್ತಮ ಜೀವನ ಕಟ್ಟಿಕೊಳ್ಳುವ ಆಸೆಯಿಂದ. ಯಾವುದೇ ನಗರದ ಜನಸಂಖ್ಯೆ ಹೆಚ್ಚಿದಾಗ ಸಮಸ್ಯೆಗಳು ಹೆಚ್ಚಾಗುತ್ತವೆ. ಶಿಕ್ಷಣದ ವಿಚಾರದಲ್ಲಿ ಬೆಂಗಳೂರು ದೇಶದ ಇತರೇ ನಗರಗಳಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ಉದ್ಯೋಗಿಗಳು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿದೆʼ ಎಂದರು.
ಕೆಂಪೇಗೌಡರು ಎಲ್ಲಾ ಸಮುದಾಯಗಳಿಗೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು ಬೆಂಗಳೂರನ್ನು ನಿರ್ಮಿಸಿದರಾದರೂ ಬೆಂಗಳೂರು ಯೋಜಿತ ನಗರವಲ್ಲ. ಅನೇಕ ವಿಚಾರಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಆಕರ್ಷಣೆಯಾಗಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲವಿದೆ ಎಂಬ ಕಾರಣಕ್ಕೆ ಇಲ್ಲಿ ಎಚ್ಎಎಲ್, ಐಟಿಐ, ಬೆಮೆಲ್ ಸೇರಿದಂತೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿವೆ. ನಮ್ಮ ರಾಜ್ಯದಲ್ಲಿ 270ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜು, 70 ಮೆಡಿಕಲ್ ಕಾಲೇಜು, 1,400 ನರ್ಸಿಂಗ್ ಕಾಲೇಜುಗಳಿವೆ. ಆದರೂ ಸಂಚಾರ, ಕಸ ವಿಲೇವಾರಿ, ಕುಡಿಯುವ ನೀರಿನಂತಹ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಪರಿಣಾಮಕಾರಿ ಆಡಳಿತ, ಪರಿಣಾಮಕಾರಿ ಸೇವೆ, ಸಮನ್ವಯತೆ ಸಾಧಿಸುವ ಉದ್ದೇಶದಿಂದ ಜಿಬಿಎ ಅಸ್ತಿತ್ವಕ್ಕೆ ತರಲಾಗಿದೆ. ನಾಗರಿಕರು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರದಲ್ಲಿ ಕೆಲಸ ಮಾಡುವವರೆಗೂ ಬೆಂಗಳೂರಿನ ಪ್ರಗತಿ ಅಸಾಧ್ಯ ಎಂದು ತಿಳಿಸಿದರು.
ಬೆಂಗಳೂರು 198 ವಾರ್ಡ್‌ಗಳೊಂದಿಗೆ ದೊಡ್ಡ ಪ್ರಮಾಣದಲ್ಲಿತ್ತು. ಎಲ್ಲಾ ವಾರ್ಡ್‌ಗಳನ್ನು ನಿರ್ವಹಣೆ ಮಾಡಲು ಕೇವಲ ಒಬ್ಬರೇ ಆಯುಕ್ತರಿದ್ದರು. ಒಬ್ಬರಿಂದ ಇಷ್ಟೆಲ್ಲಾ ನಿರ್ವಹಣೆ ಕಷ್ಟ. ಮುಂದಿನ 10-15 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 2 ಕೋಟಿ ತಲುಪಲಿದೆ. ಸಂಚಾರ ದಟ್ಟಣೆ ಸೇರಿದಂತೆ ಇತರೆ ಸಮಸ್ಯೆಗಳನ್ನು ನಿಭಾಯಿಸಲು ನಾನು ಮೊದಲು ಬೆಂಗಳೂರಿನ ಪಾಲಿಕೆಗಳನ್ನು ವಿಂಗಡಿಸಿ, ಉತ್ತಮ ಆಡಳಿತ ನೀಡಲು ಐದು ಪಾಲಿಕೆಗಳನ್ನು ಮಾಡಿ 368 ವಾರ್ಡ್‌ಗಳನ್ನು ರಚಿಸಲಾಗಿದೆ. ಸ್ವಚ್ಛತೆ, ಸಂಚಾರ ಸುಧಾರಣೆಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಸಮಸ್ಯೆಗಳು ಮಾತ್ರ ದೊಡ್ಡದಾಗಿ ಸದ್ದು ಮಾಡಲಾಗಿದೆ. ನಮ್ಮಲ್ಲಿ ಮಾಧ್ಯಮಗಳು ಸ್ವತಂತ್ರ್ಯವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಅವಕಾಶ ಇಲ್ಲ ಎಂದು ತಿಳಿಸಿದರು.
ಕಸ ನಿರ್ವಹಣೆಯಲ್ಲಿ ಜನರಲ್ಲಿ ನಾಗರಿಕ ಪ್ರಜ್ಞೆ ಇರಬೇಕು
ಬೆಂಗಳೂರು ನಗರದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ, ಹೀಗಾಗಿ ಜಿಬಿಎ ಮೂಲಕ ಹೇಗೆ ಸಮನ್ವಯತೆ ಸಾಧಿಸಲಾಗುವುದು ಎಂದು ಕೇಳಿದಾಗ ʼನಮಗೆ ಹಸಿರು ಹಾಗೂ ಸ್ವಚ್ಛ ಬೆಂಗಳೂರು ಬೇಕು. ಆದರೆ ಪ್ರತಿ ಮನೆಯಲ್ಲಿ ಎರಡು ಮೂರು ವಾಹನಗಳಿವೆ. ಮನೆಯೊಳಗೆ ನಿಲ್ಲಿಸಲು ಜಾಗವಿಲ್ಲ ಎಂದು ರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಬೆಂಗಳೂರಿನ ಜನರಲ್ಲಿ ಒಂದು ವರ್ಗ ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ನೋಡಿದರೆ, ಮತ್ತೆ ಕೆಲವು ವರ್ಗಗಳಿಗೆ ಜ್ಞಾನ ಇಲ್ಲ. ಕೆಲವರು ವಾಹನದಲ್ಲಿ ಕಸ ತಂದು ರಸ್ತೆಯಲ್ಲಿ ಹಾಕಿ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಏನು ಮಾಡಲು ಸಾಧ್ಯ. ಹೀಗಾಗಿ ಜನರಲ್ಲಿ ನಾಗರಿಕ ಪ್ರಜ್ಞೆ ಬಹಳ ಮುಖ್ಯ. ಬೆಂಗಳೂರಿನ ಹೊರ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದಾರೆ. ಹೀಗಾಗಿ ಈ ರೀತಿ ಕಸ ಎಸೆಯುವ ಎಲ್ಲಾ ವಾಹನ ಮಾಲೀಕರಿಗೆ ನೋಟೀಸ್ ನೀಡುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಳೆದ ಎರಡೂವರೆ ವರ್ಷಗಳಿಂದ ನಾನು ಕಸ ವಿಲೇವಾರಿ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಕಸದ ಮಾಫಿಯಾ ನನ್ನ ಪ್ರಯತ್ನ ತಡೆಯುತ್ತಿವೆ. ನ್ಯಾಯಾಲದಲ್ಲಿ ಪಿಐಎಲ್ ಹಾಕಿ ನಮ್ಮನ್ನು ತಡೆಯುತ್ತಿದ್ದಾರೆʼ ಎಂದು ತಿಳಿಸಿದರು.
ಜನ ಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಲು, ಕೇಳಲು ಯಾವುದಾದರೂ ಕ್ರಮ ಕೈಗೊಂಡಿದ್ದೀರಾ ಎಂದು ಕೇಳಿದಾಗ, ʼಸದ್ಯಕ್ಕೆ 368 ವಾರ್ಡ್ ರಚಿಸಲಾಗಿದ್ದು, ಪ್ರತಿ ವಾರ್ಡ್‌ನಲ್ಲಿ ವಾರ್ಡ್ ಸಮಿತಿ ರಚಿಸಲಾಗುವುದು. ಇದರಲ್ಲಿ ಎಲ್ಲಾ ವರ್ಗದ ಜನರಿಗೆ ಅವಕಾಶ ಮಾಡಿಕೊಡಲಾಗುವುದು. ಅವರು ಚರ್ಚೆ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಜನರು ವಾರ್ಡ್ ಮಟ್ಟದ ಅಧಿಕಾರಿಗಳ ಜತೆ ಸಂಪರ್ಕ ಹೊಂದಿರಬೇಕು. ಅವರನ್ನು ಪ್ರಶ್ನೆ ಮಾಡುವಂತಿರಬೇಕು. ಜನರು ಸಂತೋಷವಾಗಿದ್ದರೆ ನಾವು ಸಂತೋಷವಾಗಿರುತ್ತೇವೆ. ಅವರು ತೆರಿಗೆ ಪಾವತಿದಾರರು ಅವರ ಕೊಡುಗೆ ಬಹಳ ಮುಖ್ಯವಾಗಿದೆʼ ಎಂದರು.
ಪಾರದರ್ಶಕತೆಗೆ ಆದ್ಯತೆ
ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಕೂಡ ದೊಡ್ಡ ಸಮಸ್ಯೆಯಾಗಿದ್ದು ಜಿಬಿಎ ಇದನ್ನು ಹೇಗೆ ನಿಭಾಯಿಸಲಿದೆ ಎಂದು ಕೇಳಿದಾಗ, ʼಭ್ರಷ್ಟಾಚಾರ ನಿಯಂತ್ರಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮನೆ ಕಟ್ಟಬೇಕಾದರೆ ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ಕಚೇರಿ ಹಾಗೂ ಅಧಿಕಾರಿಗಳ ಸುತ್ತ ಅಲೆಯಬೇಕಾಗುತ್ತಿತ್ತು. ಹೀಗಾಗಿ ನಂಬಿಕೆ ನಕ್ಷೆ ಯೋಜನೆ ಜಾರಿಗೆ ತಂದಿದ್ದು 50X80 ನಿವೇಶನದಲ್ಲಿ ಮನೆ ಕಟ್ಟುವವರು ನಿಯೋಜಿತ ಇಂಜಿನಿಯರ್‌ಗಳ ಬಳಿ ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯಬಹುದು. ಈ ಹಿಂದೆ ತೆರಿಗೆ ಪಾವತಿಗೆ ಸ್ವಯಂ ಘೋಷಣೆ ಯೋಜನೆ ಅವಕಾಶ ನೀಡಿದೆವು. ಕೇವಲ 10% ಜನ ಮಾತ್ರ ತಮ್ಮ ಆಸ್ತಿ ಮೌಲ್ಯವನ್ನು ಸರಿಯಾಗಿ ಪ್ರಕಟಿಸಿದರು. ಉಳಿದವರು ಸ್ಥಳೀಯ ಅಧಿಕಾರಿಗಳ ಜತೆಗೂಡಿ ತಮ್ಮ ಆಸ್ತಿ ಮೌಲ್ಯಕ್ಕಿಂತ ಕಡಿಮೆ ತೋರಿಸಿ ತೆರಿಗೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ನಾವು ಬೆಂಗಳೂರಿನ ಆಸ್ತಿಗಳ ಸಮೀಕ್ಷೆ ಮಾಡುತ್ತಿದ್ದು, ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಪತ್ತೆ ಮಾಡುತ್ತಿದ್ದೇವೆ. ದೆಹಲಿಯಲ್ಲಿ ತೆರಿಗೆ ಮೂಲಕ ಸಂಗ್ರಹವಾಗುವ ಆದಾಯ ಕೇವಲ 2 ಸಾವಿರ ಕೋಟಿ ಮಾತ್ರ. ಆದರೆ ನಮ್ಮ ಸರ್ಕಾರ ಬಂದ ನಂತರ ನಾವು ಓಟಿಎಸ್ ಅವಕಾಶ ಕಲ್ಪಿಸಿದ ಕಾರಣಕ್ಕೆ ಬೆಂಗಳೂರಿನಲ್ಲಿ ತೆರಿಗೆ ಸಂಗ್ರಹ 6-7 ಸಾವಿರ ಕೋಟಿಗೆ ತಲುಪಿದೆ. ಬೆಂಗಳೂರಿನ ರಸ್ತೆಗುಂಡಿ ವಿಚಾರವಾಗಿ ಸಾಕಷ್ಟು ಟೀಕೆ ಮಾಡುತ್ತಾರೆ. ಆದರೆ ದೆಹಲಿಯಲ್ಲಿರುವ ನನ್ನ ಮನೆ ಮುಂದಿನ ರಸ್ತೆಯಲ್ಲಿ 100 ಮೀಟರ್ ವ್ಯಾಪ್ತಿಯಲ್ಲೇ 70 ರಸ್ತೆಗುಂಡಿಗಳಿವೆ. ಆದರೂ ದೆಹಲಿ ಹಾಗೂ ಇತರೆ ನಗರಗಳಲ್ಲಿರುವ ರಸ್ತೆಗುಂಡಿಗಳು ಸುದ್ದಿಯಾಗುವುದಿಲ್ಲʼ ಎಂದು ಹೇಳಿದರು.
ಟನಲ್ ರಸ್ತೆ ಹೊರತಾಗಿ ಪರ್ಯಾಯ ಪರಿಹಾರ ಏನಿದೆ?
ಟನಲ್ ರಸ್ತೆಗೆ ಸಾಕಷ್ಟು ವಿರೋಧವಿದೆ, ಸಾರ್ವಜನಿಕ ಸಾರಿಗೆ ಉತ್ತಮ ಆಯ್ಕೆ ಅಲ್ಲವೇ ಎಂದು ಕೇಳಿದಾಗ, ʼನೀವು ಎಲ್ಲರನ್ನು ತೃಪ್ತಿಪಡಿಸಲು ಆಗುವುದಿಲ್ಲ. ಟೀಕೆ ಇದ್ದೇ ಇರುತ್ತದೆ. ಸಾರ್ವಜನಿಕ ಸಾರಿಗೆ ಉತ್ತಮ ಆಯ್ಕೆಯೆಂಬುದು ನಿಜ. ಹಾಗಾದರೆ ಇನ್ನು ಎಷ್ಟು ಸಾರ್ವಜನಿಕ ಸಾರಿಗೆಗೆ ವಾಹನ ಸೇರಿಸಬೇಕು? 1 ಸಾವಿರ ಸಾಕೇ? ನಾನು ಸೇರಿಸಲು ಸಿದ್ಧ. ಜನರೆಲ್ಲರೂ ಬಸ್‌ನಲ್ಲಿ ಪ್ರಯಾಣ ಆರಂಭಿಸುತ್ತಾರಾ? ಹೀಗಾಗಿ ಟನಲ್ ಹೊರತಾಗಿ ಪರ್ಯಾಯ ಪರಿಹಾರ ಏನಿದೆ? ಇದೇ ಕಾರಣಕ್ಕೆ ನಾನು ಟನಲ್ ರಸ್ತೆಗೆ ಮುಂದಾಗಿದ್ದೇನೆ. ಇದರ ಜತೆಗೆ 44 ಕಿ.ಮೀ ಡಬಲ್ ಡೆಕ್ಕರ್ ಮೇಲ್ಸೇತುವೆ, 120 ಕಿ.ಮೀ ನಷ್ಟು ಉದ್ದದ ಮೇಲ್ಸೇತುವೆಗಳಿಗೆ ಯೋಜನೆ ರೂಪಿಸಿದ್ದೇವೆ. ಇನ್ನು ರಾಜಕಾಲುವೆಗಳ ಅಕ್ಕಪಕ್ಕದಲ್ಲಿ 50 ಅಡಿ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಆ ಮೂಲಕ 300 ಕಿ.ಮೀ ಹೆಚ್ಚುವರಿ ರಸ್ತೆ ಸೇರ್ಪಡೆ ಮಾಡಲಾಗುತ್ತಿದೆ. ಇದು ಸಣ್ಣ ಕೆಲಸವಲ್ಲ. ಇದಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಕೇವಲ ಒಂದೆರಡು ವರ್ಷಗಳಲ್ಲಿ ಎಲ್ಲವನ್ನು ಸರಿಪಡಿಸಲು ಸಾಧ್ಯವಿಲ್ಲ. ಸಮಯವೇ ಸಂಪತ್ತು. ಹೀಗಾಗಿ ನಮ್ಮ ವಿದ್ಯಾರ್ಥಿಗಳ ಸಮಯವನ್ನು ಟ್ರಾಫಿಕ್‌ನಲ್ಲಿ ಹಾಳು ಮಾಡಲು ಬಯಸುವುದಿಲ್ಲ. ಆದಷ್ಟು ಬೇಗ ಈ ಯೋಜನೆಗಳನ್ನು ಜಾರಿಗೆ ತರುತ್ತೇವೆʼ ಎಂದು ತಿಳಿಸಿದರು.
ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಯೋಜನೆ ಆರಂಭಿಸಿಲ್ಲ
ಬೆಂಗಳೂರಿನಲ್ಲಿ 104 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ ಯೋಜನೆ ರೂಪಿಸಲಾಗಿದೆ. 40 ಕಿ.ಮೀ ಉದ್ದದ ಟನಲ್ ರಸ್ತೆ ನಿರ್ಮಿಸಲು ಮುಂದಾಗಿದ್ದೇವೆ. ಅನೇಕ ಟೀಕೆಗಳು ವ್ಯಕ್ತವಾಗುತ್ತಿವೆ. ಇದು ಸೂಕ್ತ ಪರಿಹಾರವಲ್ಲದಿದ್ದರೆ ಮುಂಬೈನಲ್ಲಿ ಈ ಯೋಜನೆ ಯಾಕೆ ಮಾಡುತ್ತಿದ್ದಾರೆ? ಜಪಾನ್, ಲಂಡನ್‌ನಲ್ಲಿ ಯಾಕೆ ಮಾಡುತ್ತಿದ್ದಾರೆ. ನೀವು ಹೆಬ್ಬಾಳ, ಕೆ.ಆರ್. ಪುರಂ ಜಂಕ್ಷನ್ ಸೇರಿದಂತೆ ಎಲ್ಲಿ ನೋಡಿದರೂ ಟ್ರಾಫಿಕ್ ಹೆಚ್ಚಾಗಿದೆ. ನಮ್ಮ ಸರ್ಕಾರಕ್ಕೂ ಮುನ್ನ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನಾಲ್ಕು ವರ್ಷಗಳ ಅಧಿಕಾರ ಮಾಡಿತ್ತು. ಈ ಸಮಯದಲ್ಲಿ ಅವರು ಬೆಂಗಳೂರಿನ ಸಮಸ್ಯೆ ಬಗೆಹರಿಸಲು ಒಂದು ಫ್ಲೈ ಓವರ್, ರಸ್ತೆ ಸೇರಿದಂತೆ ಒಂದೇ ಒಂದು ಕೆಲಸ ಮಾಡಿದ್ದರೆ ಹೇಳಿ, ನಾನು ಇಲ್ಲೇ ನನ್ನ ಹೆಸರು ಬದಲಾಯಿಸಿಕೊಂಡು ಹೋಗುತ್ತೇನೆ. ಟನಲ್ ಹೊರತಾಗಿ ಉಳಿದ ಎಲ್ಲಾ ಯೋಜನೆಗಳು ಮೂರ್ನಾಲ್ಕು ವರ್ಷಗಳಲ್ಲಿ ಮುಕ್ತಾಯವಾಗಲಿದ್ದು, ಟನಲ್ ರಸ್ತೆಗೆ ನಾಲ್ಕು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ಬೇಕಾಗಿದೆ. ಈ ಯೋಜನೆಗೆ ಟನರ್ ಕೊರೆಯುವ ಯಂತ್ರ ಬರಲು ಒಂದೂವರೆ ವರ್ಷಬೇಕಾಗುತ್ತದೆ. ಟನಲ್ ರಸ್ತೆಯಿಂದ ಲಾಲ್ ಬಾಗ್‌ಗೆ ಯಾವುದೇ ತೊಂದರೆ ಆಗುವುದಿಲ್ಲ. ಟೀಕೆ ಮಾಡುವವರು ಮಾಡುತ್ತಿರುತ್ತಾರೆʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Caste Census: ಗಣತಿದಾರರ ಸಮಸ್ಯೆ ಪರಿಹರಿಸಲು ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರಿ ನೌಕರರ ಸಂಘ ಮನವಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಂಪನ್ಮೂಲ ಕ್ರೂಢೀಕರಣ ಹೇಗೆ ಎಂದು ಕೇಳಿದಾಗ, ʼಕೆಲವು ಪ್ರದೇಶಗಳಲ್ಲಿ ನಾವು ಬೂಟ್ ಮಾದರಿ (ಬಿಲ್ಡ್ ಆಪರೇಟ್ ಟ್ರಾನ್ಸ್‌ಪೋರ್ಟ್) ಅಳವಡಿಸಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ನಾವು 1.25 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಮುಂದಾಗಿದ್ದೇವೆ. ಟನಲ್ ರಸ್ತೆಗೆ 35-40 ಸಾವಿರ ಕೋಟಿ, ಮೇಲ್ಸೇತುವೆಗೆ ಸುಮಾರು 14 ಸಾವಿರ ಕೋಟಿ, ಡಬಲ್ ಡೆಕ್ಕರ್ ರಸ್ತೆಗೆ 10 ಸಾವಿರ ಕೋಟಿ, 16,100 ಕೋಟಿ, ಬಫರ್ ಜೋನ್ ರಸ್ತೆಗೆ 4 ಸಾವಿರ ಕೋಟಿ ಅನುದಾನದ ಅಗತ್ಯವಿದೆʼ ಎಂದು ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ವಿವರಿಸಿದರು.