ಬೆಂಗಳೂರು, ನ.23: ಕೋರಮಂಗಲದ ಕಾಲ್‌ಸೆಂಟರ್ ಉದ್ಯೋಗಿಗಳನ್ನು ಕಿಡ್ನ್ಯಾಪ್ (Bengaluru Kidnap Case) ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪಹರಣ ನಡೆದ 12 ಗಂಟೆಯೊಳಗೆ 8 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಛಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬೀವುಲ್ಲಾ ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಪೈಕಿ ಛಲಪತಿ ಎಂಬಾತ ಕೋಲಾರ ಜಿಲ್ಲೆಯ ಕಾನ್‌ಸ್ಟೇಬಲ್ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ ಏನು?
ಕೋರಮಂಗಲದಲ್ಲಿರುವ ಕಾಲ್‌ಸೆಂಟರ್‌ವೊಂದರಿಂದ ನಾಲ್ವರು ಉದ್ಯೋಗಿಗಳನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಶುಕ್ರವಾರ ಮಧ್ಯರಾತ್ರಿ ಕಾಲ್‌ಸೆಂಟರ್ ಬಳಿ ಹೋಗಿದ್ದ ಆರೋಪಿಗಳು, ನಾಲ್ವರನ್ನು ಕರೆದು ನಾವು ಪೊಲೀಸರು ಎಂದು ಬೆದರಿಸಿದ್ದರು. ಬಳಿಕ ಪವನ್, ರಾಜ್ ವೀರ್, ಆಕಾಶ್, ಅನಸ್ ಎಂಬುವವರನ್ನು ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದರು. ಶನಿವಾರ ಮುಂಜಾನೆ 4 ಗಂಟೆಗೆ ಪೊಲೀಸರಿಗೆ ಬಿಪಿಒ ಸಿಬ್ಬಂದಿ ವಿಚಾರ ತಿಳಿಸಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ಕು ತಂಡ ಮಾಡಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಶುರು ಮಾಡಿದ್ದರು. ಅತ್ತ ಕಿಡ್ನ್ಯಾಪ್ ಮಾಡಿ 25 ಲಕ್ಷ ಹಣಕ್ಕೆ ಆರೋಪಿಗಳು ಬೇಡಿಕೆಯಿಟ್ಟಿದ್ದರು. ಹಾಗೆಯೇ ಆಪರೇಷನ್ ಮ್ಯಾನೇಜರ್ ಅಕೌಂಟ್‌ನಿಂದ 18 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿಗಳಿದ್ದ ಜಾಗ ಪೊಲೀಸರು ಪತ್ತೆಹಚ್ಚಿದರು. ಹೊಸಕೋಟೆಯ ಲಾಡ್ಜ್‌ನಲ್ಲಿ ನಾಲ್ವರನ್ನು ಆರೋಪಿಗಳು ಕೂಡಿ ಹಾಕಿದ್ದರು. ಉದ್ಯೋಗಿಗಳನ್ನು ರಕ್ಷಿಸಿ, 8 ಆರೋಪಿಗಳನ್ನು ಬಂಧಿಸಿ, ಎರಡು ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಕಾಲ್‌ಸೆಂಟರ್ ರೇಡ್ ಕೇಸ್ ಬಂಡವಾಳ ಮಾಡಿಕೊಂಡು ಆರೋಪಿಗಳು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈ ಸುದ್ದಿಯನ್ನೂ ಓದಿ : ಬೆಂಗಳೂರು ದರೋಡೆ ಪ್ರಕರಣದ ಬಹುತೇಕ ಎಲ್ಲ ಆರೋಪಿಗಳು ಸೆರೆ, 6.70 ಕೋಟಿ ರೂ. ಹಣ ವಶ
ವಿಧಾನಸೌಧದ ಮುಂದೆ ಹೊಡೆದಾಡಿಕೊಂಡ ನೇಪಾಳಿ ಗ್ಯಾಂಗ್‌ನ 11 ಯುವಕರು ಆರೆಸ್ಟ್

ಬೆಂಗಳೂರು: ನಗರದ ಶಕ್ತಿ ಕೇಂದ್ರ ವಿಧಾನಸೌಧದ (vidhana soudha) ಮುಂದೆಯೇ ಯದ್ವಾತದ್ವಾ ಹೊಡೆದಾಡಿಕೊಂಡು (fighting) ಪುಂಡಾಟ ಮೆರೆದ ನೇಪಾಳಿ ಗ್ಯಾಂಗ್ (Nepali gang) ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರೇ (Bengaluru crime news) ನಮ್ಮದು ಎಂಬಂತೆ ಧಿಮಾಕು ತೋರಿಸಿದ 11 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಭಾನುವಾರ ಬೆಂಗಳೂರಿನ ಹಲವೆಡೆ ತಿರುಗಾಡಿದ್ದ ನೇಪಾಳಿ ಗ್ಯಾಂಗ್, ವಿಧಾನಸೌಧ, ಮೆಟ್ರೋ ನಿಲ್ದಾಣಕ್ಕೂ ಬಂದಿತ್ತು. ಈ ಗ್ಯಾಂಗ್ ಸದಸ್ಯರ ನಡುವೆಯೇ ಗಲಾಟೆಯಾಗಿ, ವಿಧಾನಸೌಧದ ಮುಂದೆಯೇ ಮಾರಾಮಾರಿ ಮಾಡಿಕೊಂಡಿದ್ದರು. ದಿಢೀರ್ ವಿಧಾನಸೌಧದ ಮುಂದೆ ಮಾರಾಮಾರಿ ನಡೆದುದನ್ನು ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದರು. ಗುಂಪು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಲಾಠಿ ಬೀಸಿದ್ದರು.
ಆ ಬಳಿಕ ನೇಪಾಳಿ ಗ್ಯಾಂಗ್‌ನ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯೊಬ್ಬಳ ವಿಚಾರವಾಗಿ ಈ ಗಲಾಟೆಯಾಗಿದೆ ಎನ್ನಲಾಗುತ್ತಿದೆ. ವಿಧಾನಸೌಧ ಲೈಟಿಂಗ್ಸ್ ನೋಡಲು ಬಂದಿದ್ದ ನೇಪಾಳ ಮೂಲದ ಎರಡು ಗುಂಪಿನ ಯುವಕರು ಹೊಡೆದಾಡಿಕೊಂಡು ಗಲಾಟೆ ಮಾಡಿದ್ದರು. ನೇಪಾಳಿ ಯುವಕರ ಗಲಾಟೆ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಅಲ್ಲದೇ ಅತಿ ಹೆಚ್ಚು ಭದ್ರತೆ ಇರುವಂತಹ ವಿಧಾನಸೌಧ ಮುಂಭಾಗದಲ್ಲಿ ಇಂತಹ ಘಟನೆ ನಡೆದಿದ್ದಕ್ಕೆ ಪೊಲೀಸ್ ಇಲಾಖೆಗೆ ತಲೆ ಬಿಸಿ ತಂದೊಡ್ಡಿತ್ತು.
ಈ ನೇಪಾಳಿ ಯುವಕರಿಗೆ ರೀಲ್ಸ್ ಮಾಡುವ ಹುಚ್ಚು ಇದ್ದು, ಪ್ರತಿ ಶನಿವಾರ ಮತ್ತು ಭಾನುವಾರ ನಗರದ ಪ್ರಮುಖ ಆಕರ್ಷಣೀಯ ಸ್ಥಳಗಳಿಗೆ ಹೋಗಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಇದರಿಂದ ನೇಪಾಳದಲ್ಲಿ ಹೆಚ್ಚು ವ್ಯೂಸ್ ಕೂಡ ಬರುತ್ತಿತ್ತಂತೆ. ಕಳೆದ ಭಾನುವಾರ ಸಂಜೆ ವಿಧಾನಸೌಧ ಲೈಟಿಂಗ್ಸ್ ನೋಡಿಕೊಂಡು ರೀಲ್ಸ್ ಮಾಡಲು ಗ್ಯಾಂಗ್‌ಗಳು ಬಂದಿವೆ. ಈ ವೇಳೆ ಒಂದು ಗ್ಯಾಂಗ್‌ನ ಯುವತಿಯನ್ನು ಕಿಚಾಯಿಸಿದರು ಎಂದು ಉಭಯ ಗ್ಯಾಂಗ್‌ಗಳ ನಡುವೆ ಗಲಾಟೆಯಾಗಿದೆ. ಈ ಗುಂಪುಗಳ ಯುವಕರು ಕೈಗೆ ಸಿಕ್ಕ ವಸ್ತುಗಳು, ಹೆಲ್ಮೆಟ್ನಿಂದ ಹೊಡೆದಾಡಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ : ನಡು ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಕೆಜಿಗಟ್ಟಲೇ ಚಿನ್ನ ದರೋಡೆ; ಗ್ಯಾಂಗ್ ಹಿಂದೆಯಾ ಪರಿಚತರ ಕೈವಾಡ?
ಬಳಿಕ ಪೊಲೀಸರು ವಿಡಿಯೋದಲ್ಲಿದ್ದ ಯುವಕರನ್ನ ಪತ್ತೆ ಹಚ್ಚಿ 11 ಜನರನ್ನ ಬಂಧಿಸಿದ್ದಾರೆ. ಧರ್ಮೇಂದರ್, ರಾಹುಲ್ ಸಿಂಗ್, ಚಾವಿ, ಮನೋಜ್ ಶಾಹಿ, ಉಪೇಂದ್ರ ಚೌಲಾಗೈ, ಸುದೀಪ್ ಅಧಿಕಾರಿ ಸೇರಿ 11 ಮಂದಿಯನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳು, ಬಾಣಸವಾಡಿ ಸುತ್ತಮುತ್ತ ಮನೆಗಳನ್ನು ಮಾಡಿಕೊಂಡು ವಾಸವಾಗಿದ್ದಾರೆ. ಹೊಟೇಲ್, ಸೆಕ್ಯುರಿಟಿ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.