Bengaluru Robbery Case: ಬೆಂಗಳೂರು ದರೋಡೆ ಪ್ರಕರಣದ ಬಹುತೇಕ ಎಲ್ಲ ಆರೋಪಿಗಳು ಸೆರೆ, 6.70 ಕೋಟಿ ರೂ. ಹಣ ವಶ
Bengaluru Robbery Case: ಬೆಂಗಳೂರು ಸಿಸಿಬಿ, ದಕ್ಷಿಣ ವಿಭಾಗದ ಪೊಲೀಸರ ತಂಡ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲೂ ಕಾರ್ಯಾಚರಣೆ ನಡೆಸಿದ್ದು, ಐದಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಡಿಸಿಪಿ, ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಹಾಗೂ 50ಕ್ಕೂ ಹೆಚ್ಚು ಪೊಲೀಸರು ಸೇರಿ ನಡೆಸಿದ ಶೋಧದ ಫಲವಾಗಿ 6 ಕೋಟಿ 70 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ದರೋಡೆ ಪ್ರಕರಣ -
ಬೆಂಗಳೂರು, ನ.22: ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣ (Bengaluru Robbery Case) ಸಾಕಷ್ಟು ದೊಡ್ಡ ಪ್ರಮಾಣದ ಸುದ್ದಿಯಾಗಿ, ಚರ್ಚೆಗೆ ಕಾರಣವಾಗಿತ್ತು. ಈ ದರೋಡೆ ಪ್ರಕರಣ ಭೇದಿಸುವಲ್ಲಿ ಬೆಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದು, ಬಹುತೇಕ ಎಲ್ಲಾ ಆರೋಪಿಗಳನ್ನೂ (Culprits) ಬಂಧಿಸಿದ್ದಾರೆ. ದೋಚಲಾದ 7.11 ಕೋಟಿ ರೂ.ಗಳಲ್ಲಿ 6 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಸಿಸಿಬಿ, ದಕ್ಷಿಣ ವಿಭಾಗದ ಪೊಲೀಸರ ತಂಡ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲೂ ಕಾರ್ಯಾಚರಣೆ ನಡೆಸಿದ್ದು, ಐದಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಡಿಸಿಪಿ, ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಹಾಗೂ 50ಕ್ಕೂ ಹೆಚ್ಚು ಪೊಲೀಸರು ಸೇರಿ ನಡೆಸಿದ ಶೋಧದ ಫಲವಾಗಿ 6 ಕೋಟಿ 70 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ರವಿ ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ನಿವಾಸಿಯಾಗಿದ್ದು, ಈತ ಪೊಲೀಸ್ ಪೇದೆ ಅಣ್ಣಪ್ಪನ ಜೊತೆಗೆ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ. ಇದೀಗ ಆತ ಚಿತ್ತಾಪುರದಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿದ್ದಾನೆ.
ಆರೋಪಿಗಳು ದರೋಡೆಗಾಗಿ ನಂಬರ್ ಪ್ಲೇಟ್ ಇಲ್ಲದ ವ್ಯಾಗನರ್ ಕಾರ್ ಬಳಸಿದ್ದು, ನ.19ರಂದು ಅಶೋಕ್ ಪಿಲ್ಲರ್ ಬಳಿ ಸಿಎಂಸಿ ಹಣ ಸಾಗಣೆ ವಾಹನ ಬರುವ ಮುನ್ನ ವ್ಯಾಗನರ್ ಯು-ಟರ್ನ್ ಆಗಿ ಕಾದಿದ್ದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ದರೋಡೆಕೋರರು RBI ಅಧಿಕಾರಿಗಳೆಂದು ಪರಿಚಯಿಸಿಕೊಂಡು ಸಿಬ್ಬಂದಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಬಳಿಕ ಇನೋವಾ ಮತ್ತು ವ್ಯಾಗನರ್ ಮೂಲಕ ಹಣ ಕಳ್ಳತನ ಮಾಡಿ ಕುಪ್ಪಂ ಬಳಿ ಇನೋವಾ ಬಿಟ್ಟು ಪರಾರಿಯಾಗಿದ್ದರು. ಆಂಧ್ರದಲ್ಲಿ 5.3 ಕೋಟಿ ರೂ . ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಚಿತ್ತೂರಿನ ಅರಣ್ಯ ಪ್ರದೇಶದಲ್ಲಿ ಚೇಸ್ ನಡೆಸಿದ ಬೆಂಗಳೂರು ಪೊಲೀಸರು ಪ್ರಮುಖ ಆರೋಪಿ ಕ್ಸೇವಿಯರ್ನನ್ನು ತಮಿಳುನಾಡಿನಲ್ಲಿ ಬಂಧಿಸಲು ಯಶಸ್ವಿಯಾಗಿದ್ದರು.
ದರೋಡೆಕೋರರಿಗೆ ಇನ್ನೋವಾ ಕಾರು ಕೊಟ್ಟಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಚಿತ್ತೂರು ಗುಡಿಪಲ್ಲಿ ಬಳಿ ಪತ್ತೆಯಾಗಿದ್ದ ಕಾರು ಎಂಜಿನ್‌ನ ಚಾರ್ಸಿ ನಂಬರ್ ಆಧರಿಸಿ ಇಬ್ಬರನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು, ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯ್ಕ್, ಕೇರಳ ಮೂಲದ ಕ್ಸೇವಿಯರ್ ಇಬ್ಬರನ್ನು ಬಂಧಿಸಿದ್ದಾರೆ. ಬುಧವಾರ ರಾತ್ರಿಪಾಳಿಯಲ್ಲಿಯೇ ಇದ್ದ ಅಣ್ಣಪ್ಪನಾಯ್ಕ್ ಗುರುವಾರ ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Bengaluru Robbery Case: ಬೆಂಗಳೂರು ದರೋಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಚಾಲಕ ಸಹಿತ ಮತ್ತೆ ಮೂವರು ವಶಕ್ಕೆ