ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ವೈರಲ್ ಆಗುತ್ತಿರುವ (80s AI Photo Trend) '80s AI ಫೋಟೋ ಟ್ರೆಂಡ್' (1980ರ ದಶಕದ ರೆಟ್ರೋ ಲುಕ್ ಫೋಟೋ) ಬಗ್ಗೆ ಸೈಬರ್ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಕೇವಲ ಲೈಕ್ಸ್ ಮತ್ತು ವೀವ್ಸ್‌ಗಾಗಿ ಈ ಟ್ರೆಂಡ್‌ನ ಗೀಳಿಗೆ ಬಿದ್ದು ಜನರು ತಮ್ಮ ಅತ್ಯಂತ ಸೂಕ್ಷ್ಮವಾದ ಖಾಸಗಿ ಮಾಹಿತಿ ಹಾಗೂ ಹಣವನ್ನು ಕಳೆದುಕೊಂಡು ಸೈಬರ್ ವಂಚಕರ ಜಾಲಕ್ಕೆ ಬೀಳುವ ಅಪಾಯ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿದ ಎಚ್ಚರಿಕೆಗಳೇನು?
ಡೇಟಾ ಕಳವು : 80ರ ದಶಕದ ವಿಂಟೇಜ್ ಲುಕ್ ಪಡೆಯಲು ಜನರು ತಮ್ಮ ಮೂಲ ಮತ್ತು ಸ್ಪಷ್ಟವಾದ ಮುಖದ ಫೋಟೋಗಳನ್ನು AI ಆ್ಯಪ್‌ಗಳಿಗೆ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ಭವಿಷ್ಯದಲ್ಲಿ AI ಮಾಡೆಲ್‌ಗಳ ತರಬೇತಿಗಾಗಿ ಖಾಯಂ ಆಗಿ ಶೇಖರಿಸಿಟ್ಟುಕೊಳ್ಳಲಾಗುತ್ತದೆ.
ಡೀಪ್‌ಫೇಕ್ ಅಪಾಯ: ನಿಮ್ಮ ಮುಖದ ಸಂಪೂರ್ಣ ಡೇಟಾ ವಂಚಕರ ಕೈ ಸೇರಿದರೆ, ಅದನ್ನು ಬಳಸಿ ಡೀಪ್‌ಫೇಕ್ (Deepfake) ವಿಡಿಯೋ ಅಥವಾ ತಿರುಚಿದ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಿ ಬ್ಲ್ಯಾಕ್‌ಮೇಲ್ ಮಾಡುವ ಸಾಧ್ಯತೆ ದಟ್ಟವಾಗಿರುತ್ತದೆ.
ಅಪರಿಚಿತ ಹಾಗೂ ನಕಲಿ ಆ್ಯಪ್‌ಗಳಿಂದ ಹುಷಾರ್: ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಹೊರತಾಗಿ, ಈ ಟ್ರೆಂಡ್ ಹೆಸರಿನಲ್ಲಿ ಸೈಬರ್ ಕ್ರಿಮಿನಲ್‌ಗಳು ಹಲವು ನಕಲಿ (Third-party) ಆ್ಯಪ್‌ಗಳು ಹಾಗೂ ವೆಬ್ ಲಿಂಕ್‌ಗಳನ್ನು ಸೃಷ್ಟಿಸಿದ್ದಾರೆ. ಇಂತಹುದರಿಂದ ಎಚ್ಚರಿಕೆ ವಹಿಸಬೇಕು.
ಸಲಹೆಯೇನು?
- ವಾಟ್ಸಾಪ್ ಅಥವಾ ಇನ್‌ಸ್ಟಾಗ್ರಾಮ್‌ಗಳಲ್ಲಿ ಬರುವ "ನಿಮ್ಮ 80ರ ದಶಕದ ಫೋಟೋ ನೋಡಿ" ಎಂಬ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
- ಫೋಟೋ ಎಡಿಟ್ ಮಾಡುವ ನೆಪದಲ್ಲಿ ಯಾವುದೇ ಆ್ಯಪ್ ನಿಮ್ಮ ಪಾಸ್‌ವರ್ಡ್, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಆಧಾರ್ ವಿವರಗಳನ್ನು ಕೇಳಿದರೆ ತಕ್ಷಣವೇ ಅದರಿಂದ ಹೊರಬನ್ನಿ.
- ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಅದರ ವಿಶ್ವಾಸಾರ್ಹತೆ ಹಾಗೂ ಅದು ಕೇಳುವ ಪರ್ಮಿಷನ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿ.
- ಒಂದು ವೇಳೆ ನೀವು ಈಗಾಗಲೇ ಇಂತಹ ಯಾವುದಾದರೂ ವಂಚನೆಗೆ ಒಳಗಾಗಿದ್ದರೆ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್‌ಲೈನ್ ಸಂಖ್ಯೆ 1930 ಗೆ ಕರೆ ಮಾಡಿ ದೂರು ದಾಖಲಿಸಬಹುದು.