ಬೆಂಗಳೂರು, ಆ. 1: ಪುಸ್ತಕ ಸೇರಿ ವಾಗ್ದೇವಿ ವಿದ್ಯಾವರ್ಧಕ ಸಂಘ, ವಿಶ್ವವಾಣಿ ಪುಸ್ತಕ ಪ್ರಕಾಶನದ, ಪತ್ರಕರ್ತ ವಿಶ್ವೇಶ್ವರ ಭಟ್ ಅವರ 4 ಪುಸ್ತಕಗಳು 9 ಕೃತಿಗಳು ಭಾನುವಾರ ಬೆಳಗ್ಗೆ 10.30 ಗಂಟೆಗೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌ನಲ್ಲಿರುವ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ (Book Release). ಪದ್ಮಭೂಷಣ ಪುರಸ್ಕೃತ ಹಿರಿಯ ನಟ ಅನಂತನಾಗ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ. ʼವಿಶ್ವವಾಣಿʼ, ʼಪ್ರವಾಸಿ ಪ್ರಪಂಚʼ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದು, ಖಾತ್ಯ ವಿಧ್ವಾಂಸರು, ವಿಮರ್ಶಕರಾದ ಗ.ನಾ. ಭಟ್ಟ ಪುಸ್ತಕ ಪರಿಚಯ ಮಾಡಲಿದ್ದಾರೆ.
ವೇದಿಕೆಯಲ್ಲಿ ಲೇಖಕರಾದ ಕೊರಣ್ ಉಪಾಧ್ಯಾಯ, ರಾಜು ಅಡಕಳ್ಳಿ, ರೂಪಾ ಗುರುರಾಜ್ , ಮೋಹನ್ ವಿಶ್ವ, ಶಿಶಿರ ಹೆಗಡೆ ಮತ್ತಿತರರು ಇರಲಿದ್ದಾರೆ. ವಿಶ್ವವಾಣಿ ಪುಸ್ತಕದ ಮುಖ್ಯಸ್ಥರಾದ ಸುಷ್ಮಾ ಭಟ್ ಮತ್ತು ವಿಶ್ವವಾಣಿ ಸಮೂಹ ಸಂಸ್ಥೆಗಳ ಸಿಇಒ ಚಿದಾನಂದ ಕಡಲಾಸ್ಕರ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪುಸ್ತಕಗಳ ಪರಿಚಯ
ನಾಳೆ ಬಿಡುಗಡೆಯಾಗಲಿರುವ ಪುಸ್ತಕಗಳ ಪರಿಚಯ ಇಲ್ಲಿದೆ:
‘ಸಂಪಾದಕರ ಸದ್ಯ ಶೋಧನೆ’-ಭಾಗ 9
‘ಸಂಪಾದಕರ ಸದ್ಯಶೋಧನೆ’ ವಿಶ್ವೇಶ್ವರ ಭಟ್ ಅವರ ಇಷ್ಟದ ಅಂಕಣ ಬರಹ. ಇಲ್ಲಿನ ಪ್ರತಿ ಅಧ್ಯಾಯವನ್ನೂ ಕೇವಲ ಮೂರರಿಂದ ನಾಲ್ಕು ನಿಮಿಷಗಳಲ್ಲಿ ಓದಿ ಮುಗಿಸಬಹುದು. ಹೀಗಾಗಿ ಈ ಬರಹಗಳು, ಇಂದಿನ ತರಾತುರಿಯ ಬದುಕಿಗೆ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ಈ ಅಂಕಣದ ಅತಿ ದೊಡ್ಡ ಹೆಗ್ಗಳಿಕೆಯೆಂದರೆ, ಇದರಲ್ಲಿ ಯಾವುದೇ ರೀತಿಯ ಕೃತಕ ಬೋಧನೆ, ಹುಸಿ ಉಪದೇಶ ಅಥವಾ ತಲೆಹರಟೆಯ ಸಿದ್ಧಾಂತಗಳ ಪ್ರತಿಪಾದನೆ ಇಲ್ಲ. ನಿತ್ಯ ಜೀವನದ ಸತ್ಯಗಳು ಇಲ್ಲಿ ಸರಳವಾಗಿ ಅನಾವರಣಗೊಂಡಿವೆ.
ಇಲ್ಲಿನ ಪ್ರತಿ ಬರಹವೂ ಜಗತ್ತಿನ ಯಾವುದೋ ಒಂದು ಸ್ವಾರಸ್ಯಕರ ಸಂಗತಿ, ಐತಿಹಾಸಿಕ ಘಟನೆ, ಅಪರೂಪದ ವ್ಯಕ್ತಿತ್ವ, ಚೆಂದದ ಪ್ರಸಂಗ, ಪುಸ್ತಕದ ಓದು, ಹಾಸ್ಯ ಸನ್ನಿವೇಶ, ಅಷ್ಟಾಗಿ ಗೊತ್ತಿರದ ಸಂಗತಿ ಅಥವಾ ವೈಯಕ್ತಿಕ ಅನುಭವದ ಸುತ್ತ ಹೆಣೆದಿವೆ. ಓದುಗರಿಗೆ ತೀರ ಆಪ್ತವೆನಿಸುವ ಮತ್ತು ಯೋಚನೆಗೆ ಹಚ್ಚುವ ವಿಷಯಗಳನ್ನು ಅತ್ಯಂತ ರೋಚಕವಾಗಿ ತೆರೆದಿಡುವುದು ಈ ಅಂಕಣದ ಜೀವಾಳ. ಸರಳ ಭಾಷೆ ಮತ್ತು ನಿರೂಪಣಾ ಶೈಲಿ ಈ ಬರಹದ ಪ್ಲಸ್ ಪಾಯಿಂಟ್. ಕ್ಲಿಷ್ಟಕರ ವಿಷಯಗಳನ್ನೂ ಅತ್ಯಂತ ನೇರವಾಗಿ, ರಸವತ್ತಾಗಿ ಹೇಳುವುದು ಈ ಬರಹಗಳ ಧರ್ಮ. ಓದಿದ ನಂತರ ಮನಸ್ಸಿನಲ್ಲಿ ಒಂದು ಧನಾತ್ಮಕ ಭಾವನೆ ಹಾಗೂ ಹೊಸದೊಂದು ಆಲೋಚನೆಯನ್ನು ಬಿತ್ತಿ ಹೋಗುವ ಶಕ್ತಿ 'ಸದ್ಯಶೋಧನೆ'ಗಿದೆ. ಜ್ಞಾನದ ವಿಸ್ತರಣೆಯ ಜತೆಗೆ ಓದಿನ ಆನಂದವನ್ನು ಗಳಿಸುವ ಗೇಯ್ಮೆ ಈ ಬರಹಕ್ಕಿದೆ.
ಈ ಕೃತಿಯ ಬೆಲೆ 250 ರುಪಾಯಿ.
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ.
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.
ʼಸಂಪಾದಕರ ಸದ್ಯ ಶೋಧನೆʼ-ಭಾಗ 10
ತಿರುಪತಿಯ ಶ್ರೀನಿವಾಸನ ಹುಂಡಿಗೆ ಭಕ್ತರು ತಮಗೆ ತೋಚಿದ್ದನೆಲ್ಲ ಅರ್ಪಿಸುತ್ತಾರೆ. ಅಲ್ಲಿ ಕೋಟ್ಯಧಿಪತಿಯು ಚಿನ್ನದ ಬಿಸ್ಕತ್, ಕಂತೆ ಕಂತೆ ನೋಟುಗಳನ್ನು ಹಾಕಬಹುದು, ಬಡವ ಒಂದೇ ಒಂದು ರುಪಾಯಿ ನಾಣ್ಯ ಹಾಕಬಹುದು, ಏನೂ ಇಲ್ಲದವ ಬರೀ ಒಂದು ಕಣ್ಣೋಟ ಬೀರಬಹುದು. ಹುಂಡಿ ಯಾವುದನ್ನೂ ತಿರಸ್ಕರಿಸುವುದಿಲ್ಲ. ಎಲ್ಲವನ್ನೂ ಸಮಾನ ಪಾವಿತ್ರ್ಯದಿಂದ ಸ್ವೀಕರಿಸುತ್ತದೆ. 'ಸಂಪಾದಕರ ಸದ್ಯಶೋಧನೆ'ಯೂ ಒಂಥರಾ ಹಾಗೆ. ಇದೂ ಸಹ ಎಲ್ಲವನ್ನೂ ಸ್ವೀಕರಿಸುತ್ತದೆ. ಜಗತ್ತಿನ ತತ್ತ್ವಶಾಸ್ತ್ರ, ವಿಜ್ಞಾನ, ಗಣಿತ, ಬಾಹ್ಯಾಕಾಶ, ಕೃಷಿ, ಸಾಹಿತ್ಯದಂಥ ಗಂಭೀರ ವಿಷಯಗಳನ್ನು ಇದು ಒಡಲಿಗೆ ಹಾಕಿಕೊಳ್ಳುತ್ತದೆ. ದೈನಂದಿನ ಬದುಕಿನ ಸಣ್ಣಪುಟ್ಟ ಹಾಸ್ಯ ಪ್ರಸಂಗಗಳು, ಕಟು ಸತ್ಯಗಳು, ಮಾನವೀಯ ಸಂಬಂಧಗಳ ತಳಮಳಗಳನ್ನೂ ಇದು ಪ್ರೀತಿಯಿಂದ ಆಲಿಸುತ್ತದೆ.
ಒಂದು ಫೋಟೋ, ಒಂದು ಬಂದೂಕು, ಒಂದು ಮರ, ಗೋಡೆಗೆ ನೇತು ಹಾಕಿದ ಒಂದು ಪೇಂಟಿಂಗ್... ಹೀಗೆ ಯಾವುದನ್ನಾದರೂ ಅದು ಒಳಗೊಳ್ಳುತ್ತದೆ. ಏನಿಲ್ಲದಿದ್ದರೂ, ಒಂದು ಒಳ್ಳೆಯ ಪುಸ್ತಕದ ನೆನಪಿರುವ ನಾಲ್ಕು ಸಾಲುಗಳಾದರೂ ಆದೀತು. ಹುಂಡಿಯಂತೆ ಈ ಅಂಕಣಕ್ಕೂ ಯಾವುದೂ ವರ್ಜ್ಯವಲ್ಲ. ಇದಕ್ಕೆ ಒಗ್ಗದ ಅಥವಾ ಒಲ್ಲದ ವಿಷಯಗಳೇ ಇಲ್ಲ. ಏನೆಲ್ಲ ಹುಂಡಿಯೊಳಗೆ ಬಂದು ಬೀಳಬಹುದೋ, ಈ ಅಂಕಣದೊಳಗೂ ಹಾಗೆ. ಈ ಸ್ವೀಕಾರಾರ್ಹ ಗುಣವೇ ಅಂಕಣದ ವಿಸ್ತಾರ, ವ್ಯಾಪ್ತಿ, ಆಕರ್ಷಣೆ ಮತ್ತು ಜೀವಂತಿಕೆಯನ್ನು ಇಷ್ಟು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದೆ. ಇದು ಕೇವಲ ಮಾಹಿತಿ ನೀಡುವುದಿಲ್ಲ, ಬದಲಿಗೆ ಆ ಮಾಹಿತಿಯ ಹಿಂದಿರುವ 'ಭಾವನೆ'ಯನ್ನು ಗ್ರಹಿಸಿ, ಸದ್ಯದ 'ಸತ್ಯ'ವನ್ನು ಶೋಧಿಸುತ್ತದೆ. ನಿಜ ಹೇಳಬೇಕೆಂದರೆ, ಇದು ನನ್ನ ಪಾಲಿಗೆ, ಆತ್ಮದ ಹಸಿವನ್ನು ನೀಗಿಸುವ ಮೃಷ್ಟಾನ್ನ ಭೋಜನ ಎನ್ನುತ್ತಾರೆ ವಿಶ್ವೇಶ್ವರ ಭಟ್.
ಈ ಕೃತಿಯ ಬೆಲೆ 250 ರುಪಾಯಿ
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.
ʼಅಂತರಂಗದ ಬ್ಲೂಟಿಕ್ʼ-ಇದು ಬದುಕಿನ ಬಹುಸ್ವಾದಗಳ ಅಕ್ಷರ ಬುತ್ತಿ!
ಹನ್ನೊಂದು ವರ್ಷಗಳಿಂದ ‘ವಿಶ್ವವಾಣಿ’ ಓದುಗರ ಭಾನುವಾರದ ಮುಂಜಾನೆಯನ್ನು ಅತ್ಯಂತ ಆಪ್ತವಾಗಿಸಿದ ಜನಪ್ರಿಯ ಅಂಕಣ ‘ಇದೇ ಅಂತರಂಗ ಸುದ್ದಿ’. ಅದರಲ್ಲಿ ಮೂಡಿ ಬಂದ ಈ ಸರಣಿಯ ಆಯ್ದ ಬರಹಗಳು 'ಅಂತರಂಗದ ಬ್ಲೂಟಿಕ್' ಆಗಿ ಈಗ ನಿಮ್ಮ ಕೈಯಲ್ಲಿದೆ.
ಈ ಬರಹಗಳನ್ನು ನಾನು ‘ಸಂಡೇ ಬ್ರಂಚ್’ ಎಂದು ಕರೆಯುತ್ತೇನೆ. ವಾರದ ದಣಿವನ್ನೆಲ್ಲ ಮರೆತು, ಭಾನುವಾರದ ನಿರಾಳದಲ್ಲಿ ಆಸ್ವಾದಿಸಬಹುದಾದ ಹಿತವಾದ ಅಕ್ಷರ ಭೋಜನವಿದು. ಪತ್ರಿಕೆಯ ಅರ್ಧ ಪುಟದಲ್ಲಿ ಹರಡಿಕೊಳ್ಳುವ ಈ ಅಂಕಣ, ಒಂದು ಪರಿಪೂರ್ಣ ‘ಥಾಲಿ'ಯಂತೆ. ಉಪ್ಪಿನಕಾಯಿಯಿಂದ ಹಿಡಿದು ಪಾಯಸದವರೆಗೆ ಎಲ್ಲವೂ ಇರುವಂತೆ, ಈ ಪುಸ್ತಕದಲ್ಲೂ ಹತ್ತಾರು ಬಗೆಬಗೆ ಭಕ್ಷ್ಯ. ಇದರಲ್ಲಿ ರಾಜಕೀಯದ ಚದುರಂಗದಾಟವಿದೆ, ಜಾಗತಿಕ ವಿದ್ಯಮಾನಗಳ ರೋಚಕತೆಯಿದೆ, ಸಮಾಜದ ಕಟು ವಾಸ್ತವಗಳ ವಿಶ್ಲೇಷಣೆಯಿದೆ, ಹಾಸ್ಯ, ವಿಡಂಬನೆ, ಚೋದ್ಯ, ಮಜಾ - ಮಜಕೂರು ಇವೆ. ಇಲ್ಲಿರುವ ಎಲ್ಲ ಐಟಮ್‌ಗಳು ಒಂದಕ್ಕೊಂದು ಭಿನ್ನ, ಪ್ರತ್ಯೇಕ. ಆದರೆ ಯಾವುದೂ ಭಾರ ಅಲ್ಲ. ಅತ್ಯಂತ ಕ್ಲಿಷ್ಟ ವಿಷಯಗಳನ್ನೂ ತಂಗಾಳಿಯಂತೆ ಹಿತವಾಗಿ, ಸರಳವಾಗಿ ದಾಟಿಸುವ ಶೈಲಿ ಈ ಕೃತಿಯಲ್ಲಿದೆ. ನಿಮ್ಮ ಬಿಡುವಿನ ವೇಳೆಗೆ ಜ್ಞಾನ, ಮಾಹಿತಿ ಮತ್ತು ಮುಗುಳ್ನಗೆಯ ರಂಗನ್ನು ತುಂಬುವ, ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲಾರದ ಕೃತಿ. ಯಾವ ಒತ್ತಡವಿಲ್ಲದೇ, ಗಡಿಬಿಡಿಯಿಲ್ಲದೇ ಆರಾಮವಾಗಿ ಓದಬಹುದಾದ ಬರಹಗಳಿವು. ಹೊರಗಿನ ಜಗತ್ತಿಗೆ ನಾವು ಕಾಣಿಸದೇ ಇರಬಹುದು, ಆದರೆ ಒಳಗಣ್ಣು ಎಲ್ಲವನ್ನೂ ನಿರುಮ್ಮಳವಾಗಿ ಗಮನಿಸುತ್ತಿರುತ್ತದೆ. ‘ಅಂತರಂಗದ ಬ್ಲೂಟಿಕ್’ ಎಂದರೆ ಬೇರೇನಲ್ಲ, ನಮ್ಮ ಒಳಮನಸ್ಸು ಮೌನವಾಗಿಯೇ ಎಲ್ಲವನ್ನೂ ಓದಿ, ‘ಗೊತ್ತಾಯಿತು’ ಎಂದು ಕೊಡುವ ಒಂದು ಸಣ್ಣ ಒಪ್ಪಿಗೆಯಷ್ಟೇ ಎನ್ನುತ್ತಾರೆ ವಿಶ್ವೇಶ್ವರ ಭಟ್ಟರು.
ಈ ಕೃತಿಯ ಬೆಲೆ 250 ರುಪಾಯಿ
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.
ʼAsk The Editorʼ- ಸತಾಯಿಸುವ ಪ್ರಶ್ನೆಗಳಿಗೆ ಸಂತೈಸುವ ಉತ್ತರ
ಬದುಕಿನ ಜಂಜಾಟಗಳ ನಡುವೆ ಮನುಷ್ಯನಿಗೆ ಅತಿ ಹೆಚ್ಚಾಗಿ ಬೇಕಿರುವುದು ತನ್ನ ನೋವನ್ನು ಆಲಿಸುವ ಒಂದು ಸಹಾನುಭೂತಿಯ ಕಿವಿ ಮತ್ತು ಗೊಂದಲಗಳನ್ನು ತಿಳಿಗೊಳಿಸುವ ಆಪ್ತವಾದ ಸಲಹೆ. 'ವಿಶ್ವವಾಣಿ' ದಿನಪತ್ರಿಕೆಯ ಅತ್ಯಂತ ಜನಪ್ರಿಯ ಅಂಕಣದ ಆಯ್ದ ಪ್ರಶ್ನೋತ್ತರಗಳ ಸಂಗ್ರಹವೇ ಈ ʼಆಸ್ಕ್ ದಿ ಎಡಿಟರ್'. ಇದು ಸಮಕಾಲೀನ ಸಮಾಜದ ಜೀವಂತ ತಲ್ಲಣಗಳಿಗೆ ಹಿಡಿದ ಕೈಗನ್ನಡಿ. ಹೆಂಡತಿ ಗಂಡನ ಮುಂದೆ ಹೇಳಿಕೊಳ್ಳಲಾಗದ ವೇದನೆ, ಗಂಡ-ಹೆಂಡತಿ ಇಬ್ಬರೂ ಸೇರಿ ಮಕ್ಕಳ ಬಳಿ ಹಂಚಿಕೊಳ್ಳಲಾಗದ ತಳಮಳ, ಕಚೇರಿಯ ಉಸಿರುಗಟ್ಟಿಸುವ ರಾಜಕಾರಣ, ಮನೆಯ ನಾಲ್ಕು ಗೋಡೆಗಳ ನಡುವಿನ ಅಸಹಾಯಕತೆ... ಹೀಗೆ ಓದುಗರು ತಮ್ಮ ಅತ್ಯಂತ ಖಾಸಗಿ ಮತ್ತು ಸಂಕಟದ ಕ್ಷಣಗಳನ್ನು ಸಂಪಾದಕನ ಮುಂದೆ ಮುಕ್ತವಾಗಿ ತೆರೆದಿಟ್ಟಿದ್ದಾರೆ.
ಮೇಲ್ನೋಟಕ್ಕೆ ಇವು ವೈಯಕ್ತಿಕ ಸಮಸ್ಯೆಗಳಂತೆ ಕಂಡರೂ, ಇವು ಇಡೀ ಸಮಾಜದ ಪ್ರಾತಿನಿಧಿಕ ಬಿಕ್ಕಟ್ಟುಗಳೂ ಹೌದು. ಯಾವುದೇ ಮನೋವೈದ್ಯ ಅಥವಾ ಪರಿಣತ ಸಲಹೆಗಾರನ ಹಣೆಪಟ್ಟಿಯಿಲ್ಲದೇ, ಕೇವಲ ಬದುಕಿನ ಅನುಭವ, ಸಂಯಮ, ತೀವ್ರ ಕಾಳಜಿ ಮತ್ತು ಜವಾಬ್ದಾರಿಯಿಂದ ನಾನು ಈ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಈ ಮಾಲಿಕೆಯಲ್ಲಿ ಹೊರಬರುತ್ತಿರುವ ನಾಲ್ಕನೇ ಕೃತಿ ಇದು. ಒಂಟಿತನ ಮತ್ತು ಗೊಂದಲಗಳಿಂದ ಬಳಲುತ್ತಿರುವ ಆಧುನಿಕ ಮನಸ್ಸುಗಳಿಗೆ ಧೈರ್ಯ ತುಂಬುವ, ಮುಗುಳ್ನಗೆ ಬೀರುವಂತೆ ಮಾಡುವ ಮತ್ತು ಬದುಕಿನ ದಾರಿಯನ್ನು ಸುಲಭವಾಗಿಸುವ ಈ ಕೃತಿ ಅಕ್ಷರ ರೂಪದ ಆಪ್ತಮಿತ್ರ ಎಂದಿದ್ದಾರೆ ವಿಶ್ವೇಶ್ವರ ಭಟ್.
ಈ ಕೃತಿಯ ಬೆಲೆ 300 ರುಪಾಯಿ
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.
ವಿಶ್ವೇಶ್ವರ ಭಟ್ಟರ 100ನೇ ಕೃತಿ ಸೇರಿದಂತೆ ವಿಶ್ವವಾಣಿ ಪುಸ್ತಕದ 8 ಕೃತಿಗಳ ಲೋಕಾರ್ಪಣೆ; ಫೋಟೋ ನೋಡಿ
ʼಸಕ್ಸಸ್ ಸೂತ್ರಧಾರರು’
ಅದು ಯಾರ ಬದುಕೇ ಇರಬಹುದು, ಅದೊಂದು ನಿರಂತರ ಹೋರಾಟ, ಸದಾ ಲವಲವಿಕೆಯ ಚೇತನ. ಇಂಥ ಅದಮ್ಯ ಚೇತನಗಳ ದಸ್ತಾವೇಜಿನಂತೆ ನಿಲ್ಲುವ ಅಪರೂಪದ ಕೃತಿಯೇ ಪತ್ರಕರ್ತ ರಾಜು ಅಡಕಳ್ಳಿ ಅವರ ‘ಸಕ್ಸಸ್ ಸೂತ್ರಧಾರರು’.
‘ಲೋಕಧ್ವನಿ’ ಪತ್ರಿಕೆಯ ಅತ್ಯಂತ ಜನಪ್ರಿಯ ‘ವ್ಯಕ್ತಿ-ಶಕ್ತಿ’ ಅಂಕಣಗಳಲ್ಲಿ ಮೂಡಿಬಂದ ಸಾಧಕರ ಯಶಸ್ಸಿನ ಅನನ್ಯ ಗಾಥೆಗಳೇ ಈ ಪುಸ್ತಕದ ಜೀವಾಳ. ತಳಮಟ್ಟದಿಂದ ಬಂದು, ತೀವ್ರ ಪರಿಶ್ರಮ ಪಟ್ಟು, ಕೊನೆಗೆ ತಮ್ಮದೇ ಆದ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಅಪ್ರತಿಮ ವ್ಯಕ್ತಿಗಳ ಬದುಕಿನ ಜೀವಂತ ನೋಟವನ್ನು ಅಡಕಳ್ಳಿಯವರು ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಗೆಲುವೆನ್ನುವುದು ಯಾರಿಗೂ ಸುಮ್ಮನೆ ಸಿಗುವುದಿಲ್ಲ. ಅದರ ಹಿಂದೆ ಬೆವರಿನ ಹನಿಗಳಿವೆ, ಹೋರಾಟದ ಕಥೆಗಳಿವೆ, ಎಲ್ಲಕ್ಕಿಂತ ಮಿಗಿಲಾಗಿ ಸೋಲೊಪ್ಪದ ಛಲವಿದೆ. ರಾಜು ಅಡಕಳ್ಳಿ ಅವರು ಸಾಧಕರ ಜೀವನದ ಏಳುಬೀಳುಗಳ ವಿವಿಧ ಹಂತಗಳನ್ನು ಅತ್ಯಂತ ಆಪ್ತವಾಗಿ ಚರ್ಚಿಸುತ್ತಾ, ಅವರ ಯಶಸ್ಸಿನ ಗುಪ್ತ ಸೂತ್ರಗಳನ್ನು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ಕೇವಲ ಭಾಷಣದ ಮಾತುಗಳಿಗಿಂತ, ನೈಜ ಬದುಕಿನ ಕಠಿಣ ಹಾದಿ ಹೇಗೆ ಒಬ್ಬ ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ರೂಪಿಸುತ್ತದೆ ಎಂಬುದಕ್ಕೆ ಈ ಪುಸ್ತಕದ ಪ್ರತಿ ಪುಟವೂ ಸಾಕ್ಷಿಯಾಗುತ್ತದೆ. ಇದು ಕೇವಲ ಸಾಧಕರ ಪರಿಚಯಾತ್ಮಕ ಗ್ರಂಥವಲ್ಲ. ನಿರಾಶೆಯ ಕತ್ತಲಲ್ಲಿ ದಾರಿ ಕಾಣದೇ ತಡಕಾಡುತ್ತಿರುವ ಇಂದಿನ ಯುವ ಪೀಳಿಗೆಗೆ ಭರವಸೆಯ ಬೆಳಕನ್ನು ನೀಡುವ ಕೈದೀವಿಗೆ. ಕಷ್ಟಗಳ ಬೆಟ್ಟ ಎದುರಾದರೂ ಗುರಿ ತಲುಪಲು ಬೇಕಾದ ಆತ್ಮವಿಶ್ವಾಸವನ್ನು ತುಂಬುವ ಪ್ರೇರಣಾ ಶಕ್ತಿ ಇಲ್ಲಿದೆ. ಸರಳವಾದ ಭಾಷೆ, ಆಕರ್ಷಕ ನಿರೂಪಣೆ ಹಾಗೂ ಬದುಕನ್ನು ಪ್ರೀತಿಸುವಂತೆ ಮಾಡುವ ಜೀವನಪ್ರೀತಿ ಈ ಕೃತಿಯಲ್ಲಿ ಮಡುಗಟ್ಟಿದೆ.
ಈ ಕೃತಿಯ ಬೆಲೆ 250 ರುಪಾಯಿ
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.
ʼಬಹುದೇಶವಾಸಿʼ
ದೂರದ ಬೆಹರೈನ್ ದೇಶದಲ್ಲಿ ನೆಲೆಸಿದ್ದರೂ, ತಮ್ಮ ಅಕ್ಷರಗಳ ಮೂಲಕ ಜಗತ್ತನ್ನೇ ಕನ್ನಡಿಗರ ಕೈಗಿಟ್ಟಿರುವ ಕಿರಣ್ ಉಪಾಧ್ಯಾಯ, ಇತ್ತೀಚಿನ ದಿನಗಳಲ್ಲಿ ಹೊಸ ಭರವಸೆ ಮೂಡಿಸಿರುವ, ಪ್ರತಿಭಾವಂತ ಬರಹಗಾರ.
ʼವಿಶ್ವವಾಣಿ' ದಿನಪತ್ರಿಕೆಯಲ್ಲಿ ಅತ್ಯಂತ ಜನಪ್ರಿಯವಾಗಿ ಮೂಡಿಬರುತ್ತಿರುವ ಅವರ 'ವಿದೇಶವಾಸಿ' ಅಂಕಣ ಇದೀಗ 'ಬಹುದೇಶವಾಸಿ' ಎಂಬ ವಿಶಿಷ್ಟ ಕೃತಿಯಾಗಿ ನಿಮ್ಮ ಕೈಸೇರುತ್ತಿದೆ. ಸ್ಥಳೀಯ ಮಣ್ಣಿನ ವಾಸನೆಯಿಂದ ಹಿಡಿದು ಜಾಗತಿಕ ವಿದ್ಯಮಾನಗಳ ವಿಸ್ತಾರದವರೆಗೆ—ಲೋಕಲ್‌ನಿಂದ ಗ್ಲೋಬಲ್‌ನವರೆಗಿನ—ಬಹುವ್ಯಾಪಿ ವಿಷಯಗಳು ಈ ಕೃತಿಯಲ್ಲಿ ಸಾಂದ್ರವಾಗಿವೆ. ತಮಗೆ ಒಲಿದಿರುವ ಅನನ್ಯ ಕಥನ ಶೈಲಿಯ ಮೂಲಕ, ಅತ್ಯಂತ ಸಂಕೀರ್ಣವಾದ ವಿಷಯವನ್ನಾದರೂ ಓದುಗರ ಮನ ಮುಟ್ಟುವಂತೆ ಸ್ವಾರಸ್ಯವಾಗಿ ಉಣಬಡಿಸುವ ಕಲೆ ಕಿರಣ್ ಅವರಿಗೆ ಸಿದ್ದಿಸಿದೆ.
ಪ್ರತಿ ಅಂಕಣದ ಹಿಂದಿರುವ ಆಳವಾದ ಅಧ್ಯಯನಶೀಲ ಗುಣ, ನಿರಂತರ ಶೋಧನೆ ಹಾಗೂ ಬಹು ಆಯಾಮದ ಮುಕ್ತ ಚಿಂತನೆಗಳು ಇಲ್ಲಿ ಹರಳುಗಟ್ಟಿವೆ. ರಾಜಕೀಯ, ಸಂಸ್ಕೃತಿ, ಇತಿಹಾಸ, ಮಾನವ ಆಸಕ್ತ ಸಂಗತಿ ಮತ್ತು ಮಾನವೀಯ ಸಂಬಂಧಗಳ ವಿಭಿನ್ನ ನೆಲೆಗಳನ್ನು ಶೋಧಿಸುವ ಈ ಕೃತಿ, ಓದುಗರನ್ನು ಚಿಂತನೆಗೆ ಹಚ್ಚುವುದರ ಜತೆಗೆ ಜ್ಞಾನದ ಹರವನ್ನು ವಿಸ್ತರಿಸುತ್ತದೆ. ವಿಶ್ವದ ನಾನಾ ಮುಖಗಳನ್ನು ಅರಿಯಬಯಸುವ ಪ್ರತಿಯೊಬ್ಬ ಜಿಜ್ಞಾಸು ಓದುಗನೂ ಅಕ್ಷರಶಃ ಓದಬೇಕಾದ, ಸಂಗ್ರಹಿಸಬೇಕಾದ ಅಪರೂಪದ ಕೃತಿ 'ಬಹುದೇಶವಾಸಿ'.
ಈ ಕೃತಿಯ ಬೆಲೆ 250 ರುಪಾಯಿ
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.
ʼಶಿಶಿರಕಾಲʼ
ಅಮೆರಿಕದಲ್ಲಿದ್ದರೂ ಕನ್ನಡ ನೆಲ, ಜಲ ಮತ್ತು ಸಂಸ್ಕೃತಿಯೊಂದಿಗೆ ನಿರಂತರ ನಂಟು ಕಾಯ್ದುಕೊಂಡಿರುವ ಪ್ರತಿಭಾವಂತ ಬರಹಗಾರ ಶಿಶಿರ ಹೆಗಡೆ, ‘ವಿಶ್ವವಾಣಿ’ ದಿನಪತ್ರಿಕೆಯಲ್ಲಿ ಬರೆಯುತ್ತಿರುವ ‘ಶಿಶಿರ ಕಾಲ’ ಅಂಕಣ ಜನಪ್ರಿಯ. ಈ ಶೀರ್ಷಿಕೆಯಲ್ಲಿ ಮೂಡಿಬಂದ ಮೊದಲ ಎರಡು ಕೃತಿಗಳು ಸಾಹಿತ್ಯಾಸಕ್ತರ ಗಮನ ಸೆಳೆದಿವೆ. ಇದೀಗ ಅದೇ ಸರಣಿಯ ಮೂರನೇ ಕೃತಿ ಓದುಗರ ನಿಮ್ಮ ಕೈಯಲ್ಲಿದೆ.
ಜಾಗತಿಕ ವಿದ್ಯಮಾನಗಳಿರಲಿ, ವಿಜ್ಞಾನ-ತಂತ್ರಜ್ಞಾನದ ಹೊಸ ಆವಿಷ್ಕಾರಗಳಿರಲಿ ಅಥವಾ ದೈನಂದಿನ ಬದುಕಿನ ಸೂಕ್ಷ್ಮ ಸಂಗತಿಗಳಿರಲಿ, ಶಿಶಿರ್ ಅದಕ್ಕೊಂದು ‘ಕನ್ನಡದ ಆಂಗಲ್’ ಕೊಡಬಲ್ಲರು. ಜಗತ್ತಿನ ಯಾವುದೇ ಮೂಲೆಯ ವಿಷಯನ್ನಾದರೂ ಜಾಗತಿಕ ಸಂದರ್ಭದಿಂದ ಎತ್ತಿಕೊಂಡು ಬಂದು, ಕನ್ನಡಿಗರ ಭಾವಲೋಕಕ್ಕೆ ಕನೆಕ್ಟ್ ಮಾಡುವುದು ಅವರ ವಿಶೇಷ. ಹೀಗಾಗಿಯೇ, ಇವರ ಪ್ರತಿ ಬರಹವೂ ಓದುಗರಿಗೆ ತೀರಾ ಆಪ್ತವೆನಿಸುತ್ತದೆ. ಒಂದು ವಸ್ತುವನ್ನು ಆಯ್ಕೆ ಮಾಡಿಕೊಂಡು, ಅದನ್ನು ವಿಸ್ತರಿಸುತ್ತಾ, ಗಂಭೀರವಾಗಿ ವಿಶ್ಲೇಷಿಸುತ್ತಾ, ಕೊನೆಗೆ ಓದುಗನನ್ನು ಚಿಂತನೆಗೆ ಹಚ್ಚುತ್ತಾ ಒಂದು ಅಚ್ಚರಿಯ ಮುಕ್ತಾಯಕ್ಕೆ ತಂದು ನಿಲ್ಲಿಸುವ ಇವರ ಶೈಲಿ ಅನನ್ಯವಾದುದು. ವಿಶಿಷ್ಟ ನಿರೂಪಣೆ, ವೈಚಾರಿಕತೆಯ ಸ್ಪಷ್ಟತೆ ಮತ್ತು ಓದುಗರನ್ನು ಹಿಡಿದಿಟ್ಟುಕೊಳ್ಳುವ ಸುಲಭ ಶೈಲಿ ಇವರ ಬರಹದ ಶಕ್ತಿ. ಶಿಶಿರ್ ತಮ್ಮ ಬರಹಗಳಲ್ಲಿ ಬಳಸುವ ಉಲ್ಲೇಖಗಳು, ಸನ್ನಿವೇಶಗಳು ಮತ್ತು ಆಳವಾದ ಒಳನೋಟಗಳನ್ನು ಗಮನಿಸಿದರೆ ಅವರ ಅಧ್ಯಯನದ ವಿಸ್ತಾರ ಹಾಗೂ ಓದಿನ ಆಳದ ಬಗ್ಗೆ ಹೆಮ್ಮೆಯೆನಿಸುತ್ತದೆ. ಜಗತ್ತನ್ನು ನೋಡುವ ಅವರ ದೃಷ್ಟಿಕೋನ ವಿಶಾಲವಾದುದು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ದಕ್ಕಿದ ಒಂದು ಅಪರೂಪದ ಕೃತಿ.
ಈ ಕೃತಿಯ ಬೆಲೆ 250 ರುಪಾಯಿ
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.
ʼಕಾಲದ ಕನ್ನಡಿʼ
ಯಾವುದೇ ಒಂದು ಸಿದ್ಧಾಂತ ಅಥವಾ ರಾಜಕೀಯ ನಿಲುವನ್ನು ಕೇವಲ ಘೋಷಣೆಗಳ ಮೂಲಕ ತಲುಪಿಸುವುದಕ್ಕೂ, ಅದಕ್ಕೊಂದು ಬೌದ್ಧಿಕ ಮತ್ತು ತಾರ್ಕಿಕ ಆಧಾರವನ್ನು ನೀಡಿ ಬರಹದ ಮೂಲಕ ದಾಟಿಸುವುದಕ್ಕೂ ವ್ಯತ್ಯಾಸವಿದೆ. ಸಮಕಾಲೀನ ರಾಜಕೀಯ ವಲಯದಲ್ಲಿ ಇಂಥದ್ದೊಂದು ಅಪರೂಪದ ಬೌದ್ಧಿಕ ಶಿಸ್ತನ್ನು ರೂಢಿಸಿಕೊಂಡವರು ಬಿಜೆಪಿಯ ರಾಜ್ಯ ವಕ್ತಾರರಾದ ಮೋಹನ ವಿಶ್ವ.
ಹತ್ತು ವರ್ಷಗಳಿಂದ 'ವಿಶ್ವವಾಣಿ' ಪತ್ರಿಕೆಯ ಓದುಗರಿಗೆ ತಮ್ಮ ಲೇಖನಗಳ ಮೂಲಕ ಚಿರಪರಿಚಿತರಾಗಿರುವ ಅವರ ಆಯ್ದ ಅಂಕಣ ಬರಹಗಳ ಸಂಕಲನವೇ ಈ 'ಕಾಲದ ಕನ್ನಡಿ'. ಇಂದಿನ ಧಾವಂತದ ರಾಜಕೀಯ ಜಗತ್ತಿನಲ್ಲಿ ನಿತ್ಯದ ವಿದ್ಯಮಾನಗಳಿಗೆ ತಕ್ಷಣಕ್ಕೆ ಪ್ರತಿಕ್ರಿಯಿಸುವ ವಕ್ತಾರರು ಹಲವರಿದ್ದಾರೆ. ಆದರೆ, ಅದೇ ವಿದ್ಯಮಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ಪತ್ರಿಕೆಯ ಅಂಕಣಗಳಲ್ಲಿ ಸಾರ್ವಜನಿಕ ಚರ್ಚೆಗೆ ಇಡುವ ರಾಜಕೀಯ ಮುಖಂಡರು ತೀರಾ ವಿರಳ. ಆ ವರ್ಗಕ್ಕೆ ಸೇರಿದ ಮೋಹನ ವಿಶ್ವ ಅವರು ಈ ಕೃತಿಗೆ ಬರೆದ ಬರಹಗಳಲ್ಲಿ ಕೇವಲ ಪಕ್ಷದ ಸಿದ್ಧಾಂತವನ್ನು ಪ್ರತಿಪಾದಿಸಿಲ್ಲ. ಬದಲಿಗೆ, ತಾವೆತ್ತಿಕೊಂಡ ಪ್ರತಿ ವಿಷಯವನ್ನೂ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಆಯಾಮಗಳಲ್ಲಿ ತೂಗಿ ನೋಡಿದ್ದಾರೆ.
ಅವರ ವಾದ ಮಂಡನೆಯ ವೈಖರಿ ಎಷ್ಟು ಚಾಕಚಕ್ಯತೆಯಿಂದ ಕೂಡಿರುತ್ತವೆ ಎಂದರೆ, ಅವರ ಸಿದ್ಧಾಂತಕ್ಕೆ ಭಿನ್ನವಾದ ನಿಲುವು ಹೊಂದಿರುವವರೂ ಕೂಡ ಅವರ ತರ್ಕ ಮತ್ತು ವಿಶ್ಲೇಷಣೆಯನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. 'ಕಾಲದ ಕನ್ನಡಿ' ಕಳೆದ ದಶಕದ ಕರ್ನಾಟಕ ಮತ್ತು ಭಾರತದ ರಾಜಕೀಯ ಏರಿಳಿತಗಳು, ಸಾರ್ವಜನಿಕ ನೀತಿಗಳು ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ದಾಖಲಿಸಿದ ಒಂದು ಉತ್ತಮ ಪ್ರಯತ್ನ. ರಾಜಕೀಯ ಆಸಕ್ತರಿಗೆ, ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಪ್ರತಿಯೊಬ್ಬರಿಗೂ ಈ ಪುಸ್ತಕ ಪ್ರಸ್ತುತ ರಾಜಕೀಯದ ಒಳಹರಿವುಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.
ಈ ಕೃತಿಯ ಬೆಲೆ 300 ರುಪಾಯಿ
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.
ʼಒಂದೊಳ್ಳೆ ಮಾತುʼ- ಭಾಗ 5
‘ವಿಶ್ವವಾಣಿ’ ಪತ್ರಿಕೆಯ ಓದುಗರಿಗೆ ಮುಂಜಾವಿನ ಕಾಫಿ ಜತೆ ರೂಪಾ ಗುರುರಾಜ್ ಅವರ ‘ಒಂದೊಳ್ಳೆ ಮಾತು’ ದೈನಿಕ ಅಂಕಣವೂ ಇರಬೇಕು. ಒಂದು ದಿನ ಈ ಅಂಕಣ ಎಂದಿನ ಪುಟದಲ್ಲಿ ಕಾಣ ಸಿಗದಿದ್ದರೆ ಸಾಕು, ನೂರಾರು ಓದುಗರು ಅತೃಪ್ತಿಯಿಂದ ಧ್ವನಿ ಎತ್ತುವಷ್ಟು ಇದು ಜನಪ್ರಿಯ!
ಯಾವ ನೆಪಗಳಿಲ್ಲದೇ, ದೈನಂದಿನ ಜಂಜಾಟದಲ್ಲೂ ನಿರಂತರವಾಗಿ ಈ ಅಂಕಣವನ್ನು ಬರೆಯುತ್ತಿರುವ ರೂಪಾ ಅವರ ಶ್ರದ್ಧೆ, ತನ್ಮಯತೆ ಮತ್ತು ಸಾಹಿತ್ಯದ ಮೇಲಿರುವ ಆಸಕ್ತಿ ಅನನ್ಯ. ಓದಲು ಕೇವಲ ಮೂರು-ನಾಲ್ಕು ನಿಮಿಷಗಳು ಬೇಕಾಗುವ ಈ ಪುಟ್ಟ ಬರಹಗಳು ಓದುಗರಲ್ಲಿ ಬಿತ್ತುವ ಸ್ಫೂರ್ತಿ ಮತ್ತು ಪ್ರೇರಣೆ ಮಾತ್ರ ಅಪಾರ. ಅದು ಕೇವಲ ಆ ದಿನದ ಯೋಚನೆಯನ್ನು ಬದಲಿಸುವುದಷ್ಟೇ ಅಲ್ಲ, ಇಡೀ ಜೀವನದ ದೃಷ್ಟಿಕೋನವನ್ನೇ ಪ್ರಭಾವಿಸುವಷ್ಟು ಶಕ್ತಿಶಾಲಿ.
ರೂಪಾ ಗುರುರಾಜ್ ಅವರ ಸರಳ, ನೇರ ಹಾಗೂ ಸುಲಭವಾಗಿ ಓದಿಸಿಕೊಂಡು ಹೋಗುವ ಶೈಲಿ ಓದುಗರ ಮನಸ್ಸನ್ನು ಬೇಗನೆ ತಲುಪುತ್ತದೆ. ಯಾವುದೇ ಕ್ಲಿಷ್ಟತೆಯಿಲ್ಲದೆ ಬದುಕಿನ ಸತ್ಯಗಳನ್ನು ಕನ್ನಡಿಯಂತೆ ಹಿಡಿಯುವ ಕಲೆ ಇವರ ಬರಹಗಳಿಗೆ ಸಿದ್ದಿಸಿದೆ.
ಬದುಕು ಬಿಚ್ಚಿಡುವ ಪುಟಗಳಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಮುಂಜಾವಿನ ಈ ‘ಒಂದೊಳ್ಳೆ ಮಾತು’ಗಳು ದಾರಿದೀಪ. ಈಗಾಗಲೇ ಸಾರಸ್ವತ ಲೋಕದಲ್ಲಿ ಅಪಾರ ಮನ್ನಣೆ ಗಳಿಸಿರುವ ಈ ಸುಂದರ ಅಂಕಣ ಬರಹಗಳ ಸಂಗ್ರಹವು ಈಗ ಯಶಸ್ವಿಯಾಗಿ ಐದನೇ ಭಾಗದಲ್ಲಿ ಓದುಗರ ಕೈ ಸೇರುತ್ತಿದೆ. ಬದುಕಿನ ಧಾವಂತದಲ್ಲಿ ಕಳೆದುಹೋಗುವ ಮನಸ್ಸುಗಳಿಗೆ ಈ ಕೃತಿ ಒಂದು ಸಾಂತ್ವನ, ಭರವಸೆ ಮತ್ತು ಪ್ರೀತಿಯ ತಂಗಾಳಿ. ಬದುಕನ್ನು ಪ್ರೀತಿಸುವ, ಸಕಾರಾತ್ಮಕತೆಯನ್ನು ಅರಸುವ ಪ್ರತಿಯೊಬ್ಬ ಓದುಗನಿಗೂ ಈ ಪುಸ್ತಕ ಇಷ್ಟವಾಗುತ್ತದೆ.
ಈ ಕೃತಿಯ ಬೆಲೆ 250 ರುಪಾಯಿ
ಎಲ್ಲ ಪುಸ್ತಕ ಅಂಗಡಿಗಳಲ್ಲಿ ಲಭ್ಯ.
QR ಕೋಡ್ ಸ್ಕ್ಯಾನ್ ಮಾಡಿ. ಫೋನ್ ಪೇ ಅಥವಾ ಗೂಗಲ್ ಪೇ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ವಿಳಾಸದೊಂದಿಗೆ 6362393966 ಈ ನಂಬರ್ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.