Vishwavani Book Release: ಅಸಂಖ್ಯಾತ ಹೊಸ ಓದುಗರನ್ನು ಸೃಷ್ಟಿಸಿದ ಕೀರ್ತಿ ವಿಶ್ವೇಶ್ವರ ಭಟ್ಟರಿಗೆ ಸಲ್ಲಬೇಕು: ಬೊಮ್ಮಾಯಿ
Vishwavani Pustaka: ʼʼಕನ್ನಡದಲ್ಲಿ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಬಳಿಕ ಅಸಂಖ್ಯಾತ ಹೊಸ ಓದುಗರನ್ನು ಸೃಷ್ಟಿಸಿದ ಕೀರ್ತಿ ವಿಶ್ವವಾಣಿ ದಿನ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ಸಲ್ಲುತ್ತದೆʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಶ್ವವಾಣಿ ದಿನಪತ್ರಿಕೆ ಬಳಗದ ಆಶ್ರಯದಲ್ಲಿ ನಡೆದ 8 ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಸವರಾಜ ಬೊಮ್ಮಾಯಿ.

ಬೆಂಗಳೂರು: ʼʼಕನ್ನಡದಲ್ಲಿ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ (S.L. Bhyrappa) ಅವರ ಬಳಿಕ ಅಸಂಖ್ಯಾತ ಹೊಸ ಓದುಗರನ್ನು ಸೃಷ್ಟಿಸಿದ ಕೀರ್ತಿ ವಿಶ್ವವಾಣಿ ದಿನ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಅವರಿಗೆ ಸಲ್ಲುತ್ತದೆʼʼ ಎಂದು ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ವಿಶ್ವವಾಣಿ ದಿನಪತ್ರಿಕೆ ಬಳಗದ ಆಶ್ರಯದಲ್ಲಿ ನಡೆದ 8 ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಶನಿವಾರ (ಜು. 26) ಮಾತನಾಡಿದ ಅವರು, ''101 ಪುಸ್ತಕಗಳನ್ನು ಬರೆಯುವ ಮೂಲಕ ವಿಶ್ವೇಶ್ವರ ಭಟ್ ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಪತ್ರಿಕೆಗಳ ಓದುವಿಕೆ, ಪುಸ್ತಕಗಳ ಅಧ್ಯಯನ ಪ್ರವೃತ್ತಿ ನಶಿಸುತ್ತಿರುವ ಈ ಸಂದರ್ಭದಲ್ಲಿ ವಿಶ್ವೇಶ್ವರ ಭಟ್ ನೂರಾರು ಕೃತಿಗಳನ್ನು ರಚಿಸುವ ಮೂಲಕ ಅಸಂಖ್ಯಾತ ಹೊಸ ಓದುಗರನ್ನು ಸೃಷ್ಟಿಸಿದ್ದಾರೆ. ಆ ಮೂಲಕ ಎಸ್.ಎಲ್. ಭೈರಪ್ಪ ಅವರ ನಂತರ ಕನ್ನಡದಲ್ಲಿ ಈ ಸಾಧನೆ ಮಾಡಿರುವ ಸಾಧಕರಾಗಿದ್ದಾರೆ. ತಮ್ಮ ಮೊದಲ ಕೃತಿ ʼಅಜಾತ ಶತ್ರುʼವಿನಿಂದ ತೊಡಗಿ ಇಲ್ಲಿಯವರೆಗೆ ವೈವಿಧ್ಯಮಯ ವಿಚಾರಗಳ ಬಗ್ಗೆ ಅತ್ಯಂತ ಮೌಲಿಕ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಅವರು ನಡೆದಾಡುವ ವಿಶ್ವಕೋಶʼʼ ಎಂದು ಬಣ್ಣಿಸಿದರು.
ಈ ಸುದ್ದಿಯನ್ನೂ ಓದಿ: Vishwavani Book Release: ಓದಿನಿಂದ ನಮ್ಮ ಇತಿಹಾಸವನ್ನು ವಿಭಿನ್ನವಾಗಿ ನೋಡಬಹುದು: ಡಾ. ಡಿ. ವೀರೇಂದ್ರ ಹೆಗ್ಗಡೆ
ʼʼಈ ರೀತಿ ನೂರಾರು ಪುಸ್ತಕಗಳನ್ನು ಬರೆಯುವುದು ಮತ್ತು ಓದುಗರ ಪ್ರೀತಿಯನ್ನು ಗಳಿಸುವುದು ಸುಲಭದ ಕೆಲಸವಲ್ಲ. ಆದರೆ ವಿಶ್ವೇಶ್ವರ ಭಟ್ಟರಿಗೆ ಆ ಕೌಶಲ ಸಿದ್ಧಿಸಿದೆ. ನೂರಾರು ದೇಶಗಳನ್ನು ಅವರು ಭೇಟಿ ಮಾಡಿರುವುದಷ್ಟಲ್ಲದೆ, ಓದುಗರಿಗೆ ಅಲ್ಲಿನ ಸ್ವಾರಸ್ಯಗಳನ್ನು ಮನೋಜ್ಞವಾಗಿ ಲೇಖನಗಳು, ಅಂಕಣಗಳ ಮೂಲಕ ಕಣ್ಣಿಗೆ ಕಟ್ಟುವಂತೆ ತಿಳಿಸಿದ್ದಾರೆ. ಇದು ಅಸಾಮಾನ್ಯ ಸಂಗತಿಯಾಗಿದೆ. ವಿಶ್ವೇಶ್ವರ ಭಟ್ ಅವರು ಸರಸ್ವತಿಯ ಆರಾಧಕರಾಗಿರುವುದರಿಂದ ಇದು ಸಾಧ್ಯವಾಗಿದೆʼʼ ಎಂದು ವಿಶ್ಲೇಷಿಸಿದರು.
ಕನ್ನಡ ತಾಯಿಯ ಸೇವೆಯನ್ನು ಎಂದಿಗೂ ಮರೆತಿಲ್ಲ
"ವಿಶ್ವೇಶ್ವರ ಭಟ್ ನೂರಾರು ದೇಶಗಳನ್ನು ಸಂದರ್ಶಿಸುತ್ತಿದ್ದರೂ, ಕನ್ನಡ ತಾಯಿಯ ಸೇವೆಯನ್ನು ಎಂದಿಗೂ ಮರೆತಿಲ್ಲ. ಇದು ಎಲ್ಲರಿಗೂ ಮಾದರಿ. ವಿಶ್ವೇಶ್ವರ ಭಟ್ ಅವರಿಗೂ ನನಗೂ 35 ವರ್ಷಗಳಿಗೂ ಹೆಚ್ಚಿನ ಗೆಳೆತನ ಇದೆ. ಸಂಪಾದಕರಾಗಿ ರಾಜಕೀಯ ಕ್ಷೇತ್ರದ ನಿಕಟ ಸಂಪರ್ಕ ಇದ್ದರೂ, ನಾನಾ ರಂಗಗಳ ಪ್ರಮುಖರ ಒಡನಾಟ ಇದ್ದರೂ, ಎಂದಿಗೂ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿಲ್ಲ. ಆ ಬದ್ಧತೆಯೇ ಅವರ ವ್ಯಕ್ತಿತ್ವದ ವಿಶೇಷತೆʼʼ ಎಂದು ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಓದುಗರು ಹೇಗಿರುತ್ತಾರೆ ಎಂಬ ಲಕ್ಷಣಗಳನ್ನೂ ಸ್ವಾರಸ್ಯಕರವಾಗಿ ಬೊಮ್ಮಾಯಿ ವಿವರಿಸಿದ್ದು ಹೀಗೆ-"ಕೆಲವರು ಹಣ ಕೊಟ್ಟು ಪುಸ್ತಕಗಳನ್ನು ಖರೀದಿಸುತ್ತಾರೆ. ಆದರೆ ಅವುಗಳನ್ನು ಓದುವುದಿಲ್ಲ. ಮನೆಯಲ್ಲಿ ಅದು ರಾಶಿಯಾಗುತ್ತಾ ಹೋಗುತ್ತದೆ. ಆದರೆ ಕೆಲವರು ದುಡ್ಡು ಕೊಟ್ಟು ಪುಸ್ತಕ ಕೊಂಡು, ಪೂರ್ಣವಾಗಿ ಓದುತ್ತಾರೆ. ಅವುಗಳಲ್ಲಿರುವ ವಿಚಾರಗಳನ್ನು ಮನನ ಮಾಡುತ್ತಾರೆ. ಅವರೇ ನಿಜವಾದ ಓದುಗರುʼʼ ಎಂದರು.

"ಟಿವಿಯನ್ನು ನೋಡಿದರೆ ನಿದ್ದೆ ಹೋಗುತ್ತದೆ, ಆದರೆ ಪುಸ್ತಕವನ್ನು ಓದಿದರೆ ನೆಮ್ಮದಿಯ ನಿದ್ದೆಯೂ ನಿಮ್ಮದಾಗುತ್ತದೆʼʼ ಎಂದು ಸ್ವಾರಸ್ಯಕರವಾಗಿ ವಿವರಿಸಿದ ಬೊಮ್ಮಾಯಿ, ಓದುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು.
"ನಾನೂ ಪುಸ್ತಕ ಬರೆದಿದ್ದೇನೆ. ಆದರೆ ಅದನ್ನು ನಾನೇ ಬೇಸರವಾದಾಗ ಓದುತ್ತಿರುತ್ತೇನೆ. ನನ್ನ ಹಾಗೆ ಬೇರೆ ಲೇಖಕರೂ ಇರಬಹುದುʼʼ ಎಂದು ಹಾಸ್ಯ ಚಟಾಕಿಯನ್ನು ಬೊಮ್ಮಾಯಿ ಸಿಡಿಸಿದರು. ಅದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ವಿಶ್ವೇಶ್ವರ ಭಟ್, " ಬೊಮ್ಮಾಯಿಯವರು ತಮಾಷೆಗೆ ಅಂದಿರಬಹುದು. ಆದರೆ ಅವರೊಬ್ಬ ಶ್ರೇಷ್ಠ ಓದುಗರಾಗಿದ್ದಾರೆ. ಅಗಾಧ ಓದಿನ ಹವ್ಯಾಸವಿರುವ ಅಪರೂಪದ ರಾಜಕಾರಣಿʼʼ ಎಂದರು.