ಅಡ್ಡ ಮತದಾನಿಗಳ ಪತ್ತೆಗೆ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕರ ಪ್ರಮಾಣ ಸಭೆ
ಬಿವೈವಿ ಹೇಳಿಕೆಗೆ ಸುರೇಶ್ ಕುಮಾರ್ ವಿರೋಧ, ಅರವಿಂದ್ ಬೆಲ್ಲದ್ ಬೆಂಬಲ
ಬೆಂಗಳೂರು: ವಿಧಾನಪರಿಷತ್ ಚುನಾವಣೆಯ ಅಡ್ಡಮತದಾನದ ಬಳಿಕ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಸಂಶಯ ಮತ್ತು ಅಸಮಾಧಾನದ ಕಿಡಿ, ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಅಡ್ಡ ಮತದಾನ ಮಾಡಿದ ಪಕ್ಷ ವಿರೋಧಿಗಳ ಪತ್ತೆಗೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಾತು ಈಗ ಪಕ್ಷದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.
ಅಡ್ಡಮತದಾನಕ್ಕೆ ಸಂಬಂಧಿಸಿದಂತೆ ‘ನೋವಿನ’ ಮಾತು ಆಡುವ ಸಂದರ್ಭ ‘ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಅಡ್ಡಮತದಾನ ಮಾಡಿದ್ಯಾರು? ಎನ್ನುವುದನ್ನು ಬಹಿರಂಗಪಡಿಸು ತ್ತೇವೆ’ ಎಂದು ಬಿವೈವಿ ಹೇಳಿರುವುದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಹಿರಿಯ ಶಾಸಕ ಸುರೇಶ್‌ಕುಮಾರ್ ಸೇರಿದಂತೆ ಹಲವು ಶಾಸಕರು ವಿಜಯೇಂದ್ರ ಅವರ ಈ ಹೇಳಿಕೆ ಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ವಿಜಯೇಂದ್ರ ಹೇಳಿಕೆಗೆ ಅರವಿಂದ ಬೆಲ್ಲದ ಧ್ವನಿಗೂಡಿಸಿದ್ದರೆ, ಮೈತ್ರಿ ಪಕ್ಷದ ಕುಮಾರಸ್ವಾಮಿ ಅವರು, ‘ನಾನು ಆಣೆ ಮಾಡಿಸುವ ಕೆಲಸ ಮಾಡಲ್ಲ’ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ನಡೆಗೆ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: MLC Election: ಮತ ಕೊಟ್ಟರೆ ಕಿಸೆಗೆ 50 ಕೋಟಿ, ಕ್ಷೇತ್ರಕ್ಕೆ 100 ಕೋಟಿ ಅನುದಾನದ ಆಮಿಷ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ಆರೋಪ
ಅಡ್ಡಮತದಾನವಾದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ನಾಯಕತ್ವದ ಬಗ್ಗೆ ಹಲವು ಪ್ರಶ್ನೆ ಎತ್ತಿದ್ದರು. ಇದೇ ವಿಷಯಕ್ಕೆ ಸಂಬಂಧಿ ಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ದೆಹಲಿ ನಾಯ ಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ, ಬಿಜೆಪಿ ಪಕ್ಷ ದ್ರೋಹಿಗಳ ಪತ್ತೆಗೆ ಸತ್ಯಶೋಧನಾ ಸಮಿತಿ ಯನ್ನು ರಚಿಸಿತ್ತು. ಆದರೆ ಗೌಪ್ಯಮತದಾನವಾಗಿರುವುದರಿಂದ ಸತ್ಯಶೋಧನಾ ಸಮಿತಿ ಮೂಲಕ ಅಡ್ಡಮತದಾನ ಮಾಡಿರುವ ಶಾಸಕರ ವಿರುದ್ಧ ‘ಸಾಕ್ಷ್ಯ’ ಸಂಗ್ರಹ ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದ್ದರಿಂದ ಇದೀಗ ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ಆತ್ಮ ಸಾಕ್ಷಿಯ ಲೆಕ್ಕದಲ್ಲಿ ಸತ್ಯ ತಿಳಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ ರಾಜಕಾರಣದ ಆಟಕ್ಕೆ ಪವಿತ್ರ ಕ್ಷೇತ್ರವೊಂದರ ಹೆಸರು ಎಳೆದು ತಂದಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಧರ್ಮಸ್ಥಳದಲ್ಲಿ ಸಭೆ ನಡೆಸೋದು ತಪ್ಪಿಲ್ಲ: ವಿಜಯೇಂದ್ರ ಅವರ ಹೇಳಿಕೆಗೆ ಪಕ್ಷದಲ್ಲಿ ಒಳಗೊಳಗೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ವಿಧಾನಸಭಾ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಅವರು ವಿಜಯೇಂದ್ರ ಪರವಾಗಿ ಬ್ಯಾಟ್ ಮಾಡಿದ್ದಾರೆ.
ಅಡ್ಡ ಮತದಾನದ ಕುರಿತು ಶಾಸಕರು ಆತ್ಮಾವಲೋಕನ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ಯಾರು ತಪ್ಪು ಮಾಡಿದ್ದಾರೆ ಎಂದು ತಿಳಿಯಲು ಧರ್ಮ ಸ್ಥಳಕ್ಕೆ ಹೋಗುವುದು ತಪ್ಪಲ್ಲ. ರಾಜ್ಯಾಧ್ಯಕ್ಷರ ನಿರ್ಧಾರಕ್ಕೆ ಬೆಂಬಲ ಇದೆ. ದ್ರೋಹ ಎಸಗಿರುವವರ ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿ ಆಣೆ - ಪ್ರಮಾಣದ ನಿರ್ಧಾರ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಶೀಘ್ರವೇ ವರದಿ: ಸಿ.ಟಿ ರವಿ
ಅಡ್ಡಮತದಾನ ಮಾಡಿರುವ ಶಾಸಕರನ್ನು ಕಂಡುಹಿಡಿಯಲು ರಚಿಸಿರುವ ಸತ್ಯಶೋಧನಾ ಸಮಿತಿ ಯ ಅಧ್ಯಕ್ಷ ಸಿ.ಟಿ. ರವಿ ಬೆಳಗಾವಿಯಲ್ಲಿ ಮಾತನಾಡಿದ್ದು, ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳೂ ಸೇರಿ 11 ಮತಗಳ ನಷ್ಟ ಮತ್ತು 1 ಮತ ಅಸಿಂಧುವಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಒಂದೆರಡು ದಿನಗಳಲ್ಲಿ ಪ್ರಾಥಮಿಕ ವರದಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ. ನಮ್ಮ ತಂಡದಲ್ಲಿ ನಾನು, ಮಹೇಶ ಟೆಂಗಿನಕಾಯಿ, ಎನ್.ಮಹೇಶ ಇದ್ದೇವೆ. ಮಧ್ಯಂತರ ವರದಿಯನ್ನೂ ಶೀಘ್ರವೇ ಕೊಡುತ್ತೇವೆ ಎಂದರು.
ವಿಜಯೇಂದ್ರ ಹೇಳಿದ್ದೇನು?
ವಿಶ್ವ ಯೋಗದಿನದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈ ವಾರದಲ್ಲಿಯೇ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಅಶೋಕ್ ಅವರ ಜತೆ ಚರ್ಚಿಸುವೆ. ಅಡ್ಡಮತದಾನ ಯಾರು ಹಾಕಿದ್ದಾರೆ ಅಂತ ಶ್ರೀ ಕ್ಷೇತ್ರದ ಗೊತ್ತಾಗಲಿ. ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರು ಅಂತ ಪತ್ತೆ ಮಾಡುತ್ತೇವೆ. ಗೌಪ್ಯಮತದಾನವಾಗಿರುವುದರಿಂದ ನಾನು ಸೇರಿ ಎಲ್ಲರ ಮೇಲೆಯೂ ಅನುಮಾನ ಬರುವಂತಾಗಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದರು.
![]()
ಅಡ್ಡ ಮತದಾನ ಎಂಬುದು ತುಂಬಾ ಬೇಸರದ ವಿಷಯ. ಧರ್ಮಸ್ಥಳದಲ್ಲಿ ಸತ್ಯ ಹೊರಕ್ಕೆ ಬರುತ್ತದೆ ಎಂಬ ನಂಬಿಕೆಯಿಂದ ಬಿಜೆಪಿ ನಾಯಕರು ಅಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿರ ಬಹುದು. ನಾನು ಶಾಸಕರಿಂದ ಆಣೆ ಪ್ರಮಾಣ ಮಾಡಿಸುವುದಿಲ್ಲ. ಎಲ್ಲವನ್ನು ಕಾಲವೇ ನಿರ್ಣಯಿ ಸುತ್ತದೆ ಎಂದು ನಂಬಿದ್ದೇವೆ. ಮುಂಬರುವ ಕಾಲಕ್ಕೆ ಇದೆಲ್ಲವನ್ನು ಬಿಡುವುದು ಒಳಿತು ಎಂಬುದಾಗಿ ನಮ್ಮ ಪಕ್ಷದಲ್ಲಿ ತೀರ್ಮಾನವಾಗಿದೆ.
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
![]()
ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಘೋಷಣೆ ನನಗೆ ದಿಗ್ಭ್ರಮೆ ಉಂಟು ಮಾಡಿದೆ. ಇದ್ಯಾಕೋ ಸರಿಯಾದ ತೀರ್ಮಾನ ಎನಿಸುತ್ತಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಅದರದೇ ಪಾವಿತ್ರ್ಯತೆ ಹೊಂದಿದೆ. ನಾನು ವಿಧಾನ ಸಭೆಯಲ್ಲಿ ಹೇಳಿದಂತೆ ನನ್ನ ಜೀವನದಲ್ಲಿ ನನ್ನ ತಾಯಿಯ ನಂತರ ನನಗಿರುವ ನಿಜವಾದ ಬಂಧು ಎಂದರೆ ಮಂಜುನಾಥ ಸ್ವಾಮಿ. ರಾಜಕಾರಣದಲ್ಲಿ ನಡೆದ ಅಡ್ಡಮತದ ಅಪಚಾರಕ್ಕೆ ಧರ್ಮಸ್ಥವನ್ನು ಎಳೆಯುವುದು ದಯವಿಟ್ಟು ಬೇಡ.
-ಸುರೇಶ್‌ಕುಮಾರ್, ಶಾಸಕ
![]()
ಅಂತಃಸಾಕ್ಷಿ, ಪಕ್ಷ ನಿಷ್ಠೆಯಿದ್ದ ಯಾರೂ ಅಡ್ಡಮತದಾನ ಮಾಡುವುದಿಲ್ಲ. ಯಾರಿಗೆ ಪಕ್ಷ ನಿಷ್ಠೆ ಇಲ್ಲವೋ, ರಾಜಕೀಯವಾಗಿ ಆ ಕ್ಷಣದ ಲಾಭ ಪಡೆಯಲು ಬಯಸುವವರು, ವ್ಯಾವಹಾರಿಕ ರಾಜಕಾರಣ ಮಾಡಿದವರು ಅಡ್ಡಮತದಾನ ಮಾಡಿರುತ್ತಾರೆ. ನಮ್ಮ ವ್ಯಾಪ್ತಿ ಮೀರಿದಾಗ ಎಲ್ಲರೂ ದೇವರ ಹತ್ತಿರವೇ ಹೋಗಬೇಕಾಗುತ್ತದೆ. ಹೀಗಾಗಿ, ಕಾದು ನೋಡೋಣ.
-ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ