BJP Karnataka: ಬಿಜೆಪಿ ನಾಯಕರ ವಿರುದ್ಧ ಪೋಸ್ಟ್; ಕ್ರಮಕ್ಕೆ ಆಗ್ರಹಿಸಿ ದೂರು ದಾಖಲು
Dr CN Ashwath Narayan: ಧರ್ಮಸ್ಥಳ ಚಲೋ ಮೆರವಣಿಗೆಯಲ್ಲಿ ತೆರಳುತ್ತಿದ್ದ ನಮ್ಮ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳ ವಿಡಿಯೋ ಸೆರೆಹಿಡಿದು ಹಾನಿಕಾರಕ ಕಂಟೆಂಟ್ ಹಾಕಿದ್ದಾರೆ. ಇದನ್ನು ತಡೆಯಲು ಸರಕಾರ, ಗೃಹ ಇಲಾಖೆ ಕ್ರಮ ವಹಿಸಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.

-

ಬೆಂಗಳೂರು: ಬಿಜೆಪಿ ವತಿಯಿಂದ ಸೆ.1ರಂದು ನಡೆದ ʼಧರ್ಮಸ್ಥಳ ಚಲೋʼಗೆ ಸಂಬಂಧಿಸಿದ ವಿಡಿಯೋ ತುಣುಕಿಗೆ "ಹೆಣ್ಣಿಗೆ ನ್ಯಾಯ ಕೊಡಿಸುವ ಕೆಲಸ ಮಾಡದೆ ಧರ್ಮದ ಹೆಸರಲ್ಲಿ ದೊಂಬರಾಟ" ಎಂಬ ಬರಹವನ್ನು ಹಾಕಿ ಹೋರಾಟಕ್ಕೆ ಹಾಗೂ ಒಂದು ಸಮುದಾಯದ ಕಲೆಯನ್ನು ಅವಮಾನಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿಯಿಂದ (BJP Karnataka) ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆ ದೂರು ಸಲ್ಲಿಸಲಾಗಿದೆ.
ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ಕಾನೂನು ಪ್ರಕೋಷ್ಠ ಸಂಚಾಲಕ ವಸಂತ್ ಕುಮಾರ್ ಮತ್ತಿತರ ಬಿಜೆಪಿ ನಾಯಕರು, ಉಪ್ಪಾರಪೇಟೆ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ವತಿಯಿಂದ ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸೆ.1ರಂದು ಧರ್ಮಸ್ಥಳ ಚಲೋ ಹಾಗೂ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಅಗಿತ್ತು.
ಈ ಕಾರ್ಯಕ್ರಮಕ್ಕೆ ನಮ್ಮ ಪಕ್ಷದ ನಾಯಕರುಗಳು, ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನ ಸದಸ್ಯರುಗಳು ಹಾಗೂ ಅಸಂಖ್ಯಾತ ಕಾರ್ಯಕರ್ತರು, ಹಿಂದುಧರ್ಮದ ಅನುಯಾಯಿಗಳು ಬಂದಿದ್ದರು. ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ನಾಯಕರು ನಡಿಗೆಯಲ್ಲಿ ಸಮಾವೇಶದ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಮಾಡಿರುವ ಒಂದು ವಿಡಿಯೋ ತುಣುಕನ್ನು ಬಳಸಿಕೊಂಡು ಸಾಮಾಜಿಕ ಜಾಲಾತಾಣದಲ್ಲಿ ನಮ್ಮ ಕಾರ್ಯಕ್ರಮವನ್ನು ಅವಮಾನಿಸುವ ದುರುದ್ದೇಶದಿಂದ ಮಾತ್ರವಲ್ಲದೇ, ನಮ್ಮ ರಾಜ್ಯದಲ್ಲಿರುವ ಒಂದು ಸಮುದಾಯದ ಕಲೆಯನ್ನು ಅವಮಾನಿಸಿ "ಹೆಣ್ಣಿಗೆ ನ್ಯಾಯ ಕೊಡಿಸುವ ಕೆಲಸ ಮಾಡದೆ ಧರ್ಮದ ಹೆಸರಲ್ಲಿ ದೊಂಬರಾಟ" ಎಂಬ ಬರಹವನ್ನು ಇನ್ಸ್ಟಾಗ್ರಾಮ್ ಖಾತೆಯಾದ sushmanth3gowda ಈ ಖಾತೆಯಲ್ಲಿ ಸಾಮಾಜಿಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ರೀತಿ ನಮ್ಮ ಕಾರ್ಯಕ್ರಮವನ್ನು ಅವಮಾನಿಸುವ ದುರುದ್ದೇಶದಿಂದ ಮಾತ್ರವಲ್ಲದೇ, ನಮ್ಮ ರಾಜ್ಯದಲ್ಲಿರುವ ಒಂದು ಸಮುದಾಯದ ಕಲೆಯನ್ನು ಅವಮಾನಿಸಿ ವಿಡಿಯೋವನ್ನು ಸೃಷ್ಟಿಸಿರುವ ಹಾಗೂ ಹಂಚಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು, ಈ ವಿಡಿಯೋವನ್ನು ಎಲ್ಲಾ ಸಾಮಾಜಿಕ ಜಾಲಾತಾಣಗಳಿಂದ ತೆಗೆಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವ ಎಂದು ದೂರಿನಲ್ಲಿ ಕೋರಲಾಗಿದೆ.

ಧರ್ಮದ ವಿಚಾರದಲ್ಲಿ ಹುಡುಗಾಟ ಮಾಡಿದರೆ ಸಹಿಸಲ್ಲ: ಅಶ್ವತ್ಥನಾರಾಯಣ್
ಧರ್ಮಸ್ಥಳ ಚಲೋ ಮೆರವಣಿಗೆಯಲ್ಲಿ ತೆರಳುತ್ತಿದ್ದ ನಮ್ಮ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳ ವಿಡಿಯೋ ಸೆರೆಹಿಡಿದು ಹಾನಿಕಾರಕ ಕಂಟೆಂಟ್ ಹಾಕಿದ್ದಾರೆ. ಇದನ್ನು ತಡೆಯಲು ಸರಕಾರ, ಗೃಹ ಇಲಾಖೆ ಕ್ರಮ ವಹಿಸಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜತೆ ಇಂದು ಮಾತನಾಡಿದ ಅವರು, ಸೌಜನ್ಯ ವಿಚಾರದಲ್ಲಿ ಯಾವುದೇ ಒಪ್ಪಂದದ ನಡೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಸೌಜನ್ಯರ ತಾಯಿ ಇಟ್ಟಿರುವ ಬೇಡಿಕೆಯ ಪರವಾಗಿ ಇರುವುದಾಗಿ ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಅವರ ಮನೆಗೂ ಭೇಟಿ ಕೊಟ್ಟಿದ್ದಾರೆ ಎಂದರು. ಧರ್ಮದ ವಿಚಾರದಲ್ಲಿ ಇಂಥ ಹುಡುಗಾಟ ಮಾಡಿದರೆ, ನಾವು ಸಹಿಸುವುದಿಲ್ಲ ಎಂದರು.
ಬೇರೆ ಯಾವುದೇ ಸಾಮಾಜಿಕ ಜಾಲತಾಣದ ಪೋಸ್ಟ್ ಬಂದಾಗ ತಕ್ಷಣ ಬಂಧಿಸುತ್ತಾರೆ. ಸಂಬಂಧಿತ ವ್ಯಕ್ತಿಯ ಮೇಲೆ ಕೂಡಲೇ ಕೇಸ್ ದಾಖಲಿಸಬೇಕು. ಸೋಷಿಯಲ್ ಮೀಡಿಯ ಕಂಟೆಂಟನ್ನು ತೆಗೆಸಿಹಾಕಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನ್ಯಾಯಬದ್ಧವಾಗಿ ಹೋರಾಟ ಮಾಡಿದೆ. ಧರ್ಮರಕ್ಷಣೆಗಾಗಿ ಹೋರಾಟ ಮಾಡಿರುವುದು ದೇಶ, ರಾಜ್ಯದ ನಾನಾ ಭಾಗದ ಪ್ರತಿಯೊಬ್ಬ ಕಾರ್ಯಕರ್ತರು ಹಿಂದೂ ಸಮಾಜವನ್ನು ಕಾಪಾಡಬೇಕು; ಹಿಂದೂ ಸಮಾಜಕ್ಕೆ ಆತಂಕ ಬಂದಾಗ ಅಥವಾ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಗೆ ಯಾರೇ ಅಗೌರವ ತರಲು ಯಾರೇ ಪ್ರಯತ್ನ ಮಾಡಿದರೂ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಷಡ್ಯಂತ್ರ ವಿರೋಧಿಸಿ ಮತ್ತು ಸರಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಲು ನಾವು ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದೆವು ಎಂದು ವಿವರಿಸಿದರು. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ, ನಮ್ಮ ನಾಯಕರು, ಬಿಜೆಪಿ ಚುನಾಯಿತ ಪ್ರತಿನಿಧಿಗಳ ವಿಡಿಯೋ ಮಾಡಿ ಆಪಾದನೆ ಮಾಡಿದ್ದಾರೆ. ಈ ಕಂಟೆಂಟ್ ಹಾಕಿದ ವ್ಯಕ್ತಿಯ ಮೇಲೆ ಕೇಸು ದಾಖಲಿಸಬೇಕು ಮತ್ತು ಆ ಕಂಟೆಂಟನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಗಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | BJP Dharmasthala Chalo: ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ವಿದೇಶಿ ಶಕ್ತಿಗಳೂ ಇವೆ, NIA ತನಿಖೆ ಆಗಬೇಕು: ಜನಾರ್ದನ ರೆಡ್ಡಿ ಆಗ್ರಹ
ಈ ವೇಳೆ ರಾಜ್ಯ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ. ಮಂಜುಳಾ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ, ಬಿಜೆಪಿ ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡಂಜಿ ಮತ್ತು ವಕೀಲರ ತಂಡದವರು ಇದ್ದರು.