Jakkur Aerodrome: ಜಕ್ಕೂರು ಏರೋಡ್ರೋಂ ರನ್‌ವೇ ವಿಸ್ತರಣೆಗೆ ಚಿಂತನೆ: ಸಿಎಂ ಸಿದ್ದರಾಮಯ್ಯ
CM Siddaramaiah: ಜಕ್ಕೂರು ಏರೋಡ್ರೋಮ್ ರನ್ ವೇ ವಿಸ್ತರಣೆಗೆ ಪಕ್ಕದಲ್ಲಿಯೇ ಜಮೀನನ್ನು ಪಡೆಯಬೇಕು. ಇದಕ್ಕೆ ಮೂರು ಎಕರೆಗಿಂತ ಹೆಚ್ಚು ಜಮೀನಿನ ಅಗತ್ಯವಿದೆ. ಮಾಲೀಕರು ಜಮೀನನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದು, ಬೆಲೆ ಕೂಡ ದುಬಾರಿ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

-

ಬೆಂಗಳೂರು: ಜಕ್ಕೂರು ಎರೋಡ್ರೋಂ ರನ್ ವೇ ವಿಸ್ತರಣೆ ಮಾಡುವುದು ಹಾಗೂ ಈ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಸರ್ಕಾರದಿಂದ ಏನು ಮಾಡಬಹುದು ಎನ್ನುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಹಾಗೂ ಏರೋಡ್ರೋಂ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಧವಾರ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ಈ ಬಗ್ಗೆ ಸರ್ಕಾರದ ಮುಂದೆ ಎರಡು ಯೋಜನೆಗಳಿವೆ. ಇಲ್ಲಿ ಮೇಲ್ಸೇತುವೆ ಬಂದಿರುವುದರಿಂದ ಸ್ವಲ್ಪ ಅಡಚಣೆಯಾಗುತ್ತಿದೆ. ಮೇಲ್ಸೇತುವೆ ಬರುವ ಬಗ್ಗೆ ಮೊದಲೇ ತಿಳಿದಿರಲಿಲ್ಲ. ಇಲ್ಲಿ 200 ಎಕರೆಗಿಂತಲೂ ಹೆಚ್ಚಿನ ಸ್ಥಳವಿದ್ದು, ಜಕ್ಕೂರು ವೈಮಾನಿಕ ತರಬೇತಿ ಶಾಲೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ರನ್ ವೇ ವಿಸ್ತರಣೆಗೆ ಪಕ್ಕದಲ್ಲಿಯೇ ಜಮೀನನ್ನು ಪಡೆಯಬೇಕು. ಇದಕ್ಕೆ ಮೂರು ಎಕರೆಗಿಂತ ಹೆಚ್ಚು ಜಮೀನಿನ ಅಗತ್ಯವಿದೆ. ಮಾಲೀಕರು ಜಮೀನನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದು, ಬೆಲೆ ಕೂಡ ದುಬಾರಿ ಆಗಿದೆ ಎಂದರು.
ಲಭ್ಯ ಸ್ಥಳವನ್ನು ಹೇಗೆ ಉಪಯೋಗಿಸಬೇಕು ಎಂದೂ ಚಿಂತನೆ ನಡೆಯುತ್ತಿದೆ. ವೈಮಾನಿಕ ತರಬೇತಿ ಶಾಲೆ ನಡೆಸಬೇಕೆನ್ನುವ ನ್ಯಾಯಾಲಯದ ಆದೇಶವಿದ್ದು, ಸರ್ಕಾರ ಇನ್ನೇನು ಮಾಡಬಹುದು ಎಂದು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸೌಜನ್ಯತಾಯಿ ನಿರ್ಧರಿಸಬೇಕು:
ಸರ್ವೋಚ್ಚ ನ್ಯಾಯಾಲಯಕ್ಕೆ ಸೌಜನ್ಯ ಪ್ರಕರಣವನ್ನು ಮೇಲ್ಮನವಿ ಸಲ್ಲಿಸಿದರೆ ಅದರ ವೆಚ್ಚವನ್ನು ಭರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಬಿಐ ಕೇಂದ್ರ ಸರ್ಕಾರ ಅಧೀನದಲ್ಲಿದ್ದು, ಆರೋಪಿಯನ್ನು ಖುಲಾಸೆ ಮಾಡಿದೆ. ಈಗ ಸುಪ್ರೀಂ ಕೋರ್ಟಿನ ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ. ಮೇಲ್ಮನವಿಗೆ ಪ್ರಕರಣ ಸೂಕ್ತವಾಗಿದೆಯೇ ಎಂಬುದನ್ನು ಸೌಜನ್ಯ ತಾಯಿ ನಿರ್ಧರಿಸಬೇಕು ಎಂದರು.
ರಾಜಕೀಯ ಪ್ರೇರಿತ ಯಾತ್ರೆ
ಧರ್ಮಸ್ಥಳಕ್ಕೆ ಬಿಜೆಪಿ ಮಾಡಿದ ಯಾತ್ರೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದ ಸಿಎಂ ಸಿದ್ದರಾಮಯ್ಯ ಅವರು, ಧರ್ಮಸ್ಥಳ ಚಲೋ ಅಲ್ಲ, ರಾಜಕೀಯ ಚಲೋ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಸಾಕಾರಕ್ಕೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್
ಧರ್ಮಪ್ರಚಾರ ಅಲ್ಲ
ಅರಮನೆ ಮೈದಾನದಲ್ಲಿ ಅಲ್ಪಸಂಖ್ಯಾತರ ಸಮಾವೇಶಕ್ಕೆ ವಿರೋಧ ವ್ಯಕ್ತವಾಗಿದ್ದು, ಪ್ರವಾಸಿ ವೀಸಾ ಪಡೆದು ಧರ್ಮಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ ಆ ರೀತಿ ಏನಿಲ್ಲ. ಆಯೋಜಕರೊಂದಿಗೆ ಈ ಬಗ್ಗೆ ಮಾತನಾಡಿದೆ ಎಂದು ಹೇಳಿದರು.