ಬೆಂಗಳೂರು: ದಕ್ಷಿಣ ಬೆಂಗಳೂರಿನ ನೂರು ವರ್ಷಗಳ ಇತಿಹಾಸವಿರುವ ಮಹಿಳಾ ಸೇವಾ ಸಮಾಜ ಸಂಸ್ಥೆಗೆ, ಈ ಹಿಂದೆ ಅಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು ನೆರವಿನ ಹಸ್ತ ಚಾಚುತ್ತಿದ್ದಾರೆ. ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಶ್ರಮಿಸುತ್ತಿರುವ ಈ ಸಂಸ್ಥೆಯು, ತನ್ನ ಹಳೆಯ ವಿದ್ಯಾರ್ಥಿ ಬಳಗದ ಸಹಕಾರದೊಂದಿಗೆ ಪಠ್ಯ ಮತ್ತು ಪಠ್ಯೇತರ ಕಾರ್ಯಕ್ರಮಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯುತ್ತಿದೆ.
ವಿಜ್ಞಾನ ಕಲಿಕೆಯನ್ನು ಹೆಚ್ಚು ಕ್ರಿಯಾಶೀಲ ಹಾಗೂ ಆಕರ್ಷಕವಾಗಿಸಲು 'ಸೈಕ್ರಾಫ್ಟ್' ಸಂಸ್ಥೆ ತಯಾರಿಸಿದ ವಿಶೇಷ ವಿಜ್ಞಾನ ಪ್ರಯೋಗ ಕಿಟ್‌ಗಳನ್ನು ಪರಿಚಯಿಸಿರುವುದು ಇಲ್ಲಿನ ಪ್ರಮುಖ ಯೋಜನೆಯಾಗಿದೆ. 1974 ರ ಎಸ್‌ಎಸ್‌ಎಲ್‌ಸಿ ತರಗತಿಯ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ 50 ವರ್ಷಗಳ ನೆನಪಿಗಾಗಿ (ಸುವರ್ಣ ಮಹೋತ್ಸವ), ತಮ್ಮ ಸಂಸ್ಥೆಗೆ ಈ ಕಿಟ್‌ಗಳನ್ನು ನೀಡಿದರು. ವಿಶೇಷ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು, ವಿಜ್ಞಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ 'ಪ್ರಯೋಗ ಸಂಸ್ಥೆಯ ಮುಖ್ಯ ಮಾರ್ಗದರ್ಶಕ ರಾದ ಡಾ.ಹೆಚ್.ಎಸ್.ನಾಗರಾಜ, "ಮಕ್ಕಳು ತಾವೇ ಪ್ರಯೋಗಗಳನ್ನು ಮಾಡಿದಾಗ ವಿಜ್ಞಾನದ ಪರಿಕಲ್ಪನೆಗಳು ಸುಲಭವಾಗಿ ಅರ್ಥವಾಗುತ್ತವೆ. ಈ ರೀತಿಯ ಪ್ರಾಯೋಗಿಕ ಕಲಿಕೆಯು ಅವರಲ್ಲಿನ ಕುತೂಹಲವನ್ನು ಹೆಚ್ಚಿಸಿ, ವಿಷಯಗಳನ್ನು ಜೀವನಪರ್ಯಂತ ನೆನಪಿನಲ್ಲಿಡುವಂತೆ ಮಾಡುತ್ತದೆ" ಎಂದರು. ಜವಾಹರ್‌ಲಾಲ್ ನೆಹರೂ ತಾರಾಲಯದ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಅವರು ಮಾತನಾಡಿ, "ಇಂದಿನ ವಿಜ್ಞಾನ ಬೋಧನೆಯು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ, ಮಕ್ಕಳು ಪ್ರಶ್ನೆಗಳನ್ನು ಕೇಳಲು, ಅನ್ವೇಷಿಸಲು ಮತ್ತು ಹೊಸ ವಿಷಯಗಳನ್ನು ಕಂಡುಕೊಳ್ಳಲು ಪ್ರೇರೇಪಿಸಬೇಕು" ಎಂದು ತಿಳಿಸಿದರು.
ಈ ಶೈಕ್ಷಣಿಕ ಸಾಲಿನ ಸುಧಾರಣೆಯ ಭಾಗವಾಗಿ, ಶಾಲೆಯು ನೂತನ ಖಗೋಳವಿಜ್ಞಾನ ತರಗತಿ ಯನ್ನು ಆರಂಭಿಸಿದ್ದು, ಜೊತೆಗೆ ಶೈಕ್ಷಣಿಕ ಶುಲ್ಕ, ವೃತ್ತಿಪರ ತರಬೇತಿ ಹಾಗೂ ಸಂಗೀತ ಕಲಿಕೆಗೆ ಪ್ರೋತ್ಸಾಹಧಾಯಕ ವಿದ್ಯಾರ್ಥಿವೇತನಗಳನ್ನು ಘೋಷಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ದನ್ನು ತಿಳಿದುಕೊಳ್ಳಲು ಅನೇಕ ಅವಕಾಶಗಳು ಲಭಿಸಲಿವೆ.