ಬೆಂಗಳೂರು: ಐಟಿ ಅಧಿಕಾರಿಗಳ ದಾಳಿ ಸಂದರ್ಭದಲ್ಲೇ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ (CJ Roy) ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿ.ಜೆ. ರಾಯ್‌ಗೆ ವ್ಯಾಪಾರದಲ್ಲಿ ಯಾವುದೇ ತೊಂದರೆ ಇರಲಿಲ್ಲ, ಸಾಲಬಾಧೆಯೂ ಇರಲಿಲ್ಲ. ಆದರೆ, ಐಟಿ ಅಧಿಕಾರಿಗಳ ಕಿರುಕುಳವಿತ್ತು ಎಂದು ಅವರ ಸಹೋದರ ಬಾಬು ಸಿ. ಜೋಸೆಫ್ ಹೇಳಿದ್ದರು. ಈ ನಡುವೆ ಸಿ.ಜೆ.ರಾಯ್ ಅವರ ಕಚೇರಿಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಹಲವು ಪ್ರಭಾವಿಗಳ ಹೆಸರು ಉಲ್ಲೇಖವಾಗಿದೆ ಎಂದು ತಿಳಿದುಬಂದಿದೆ. ಡೈರಿಯನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ.
ಪರಿಶೀಲನೆ ವೇಳೆ ಸಿ.ಜೆ. ರಾಯ್ ಅವರು ಐಟಿ ಅಧಿಕಾರಿಗಳೊಂದಿಗೆ ಸಹಜವಾಗಿ ವರ್ತಿಸುತ್ತಿದ್ದರು ಎಂಬ ಮಾಹಿತಿ ಇದೆ. ಜ. 27ರಂದು ದುಬೈಯಿಂದ ಬೆಂಗಳೂರಿಗೆ ಬಂದಿದ್ದ ಅವರು ಮರುದಿನ ಐಟಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಮೂರು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿತ್ತು. ಆದರೆ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರನ್ನೂ ಆಘಾತಗೊಳಿಸಿತ್ತು.
ಡೈರಿಯಲ್ಲಿ ಯಾರ ಹೆಸರು ಉಲ್ಲೇಖ?
ಸಿ.ಜೆ. ರಾಯ್ ಅವರ ಕಚೇರಿಯಲ್ಲಿ ಸಿಕ್ಕ ಡೈರಿಯಲ್ಲಿ ನಟಿಯರು, ಮಾಡೆಲ್‌ಗಳು ಮತ್ತು ಹಲವು ರಾಜಕಾರಣಿಗಳ ಹೆಸರುಗಳು ಕಂಡುಬಂದಿವೆ. ಉದ್ಯಮಿ ತಮ್ಮ ಕಂಪನಿಯ ಕಾರ್ಯಕ್ರಮಗಳಿಗೆ ಪ್ರಮುಖರನ್ನು ಕರೆಸುತ್ತಿದ್ದರು. ಆದರೆ ಡೈರಿಯಲ್ಲಿ ಕೆಲವರ ಹೆಸರುಗಳನ್ನು ಏಕೆ ಬರೆದಿದ್ದರು? ಬರೀ ಈವೆಂಟ್ ವಿಚಾರಕ್ಕೆ ಮಾತ್ರವಾ ಅಥವಾ ಬೇರೆ ಕಾರಣವಿದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ರಾಜಕಾರಣಿಗಳಿಂದ ಒತ್ತಡ ಇತ್ತೇ?
ಕಾನ್ಫಿಡೆಂಟ್ ಗ್ರೂಪ್‌ನಲ್ಲಿ ಹಲವು ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ರಿಯಲ್ ಎಸ್ಟೇಟ್ ನಿರೀಕ್ಷಿತ ಲಾಭ ತರಲಿಲ್ಲ. ಇದರಿಂದ ಬೇರೆ ಬ್ಯುಸಿನೆಸ್ ಮಾಡಲು ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಹೂಡಿಕೆ ಮಾಡಿದ್ದ ರಾಜಕಾರಣಿಗಳು ತಮ್ಮ ಪಾಲಿನ ಹಣ ವಾಪಸ್ ಕೊಡುವಂತೆ ಒತ್ತಡ ಹಾಕಿರಬಹುದು ಎನ್ನಲಾಗಿದೆ.
CJ Roy Death: ಸಿಜೆ ರಾಯ್ ಅಂತಿಮ ಕ್ಷಣದಲ್ಲಿ ಯಾರ ಜತೆ ಮಾತಾಡಿದ್ರು? ಪತ್ತೆಗೆ ಮೊಬೈಲ್ ಸಿಐಡಿ ಸೈಬರ್ ಸೆಲ್‌ಗೆ
ಇನ್ನು ಸಿ.ಜೆ. ರಾಯ್ ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಬಗ್ಗೆ ಪರಿಶೀಲಿಸುತ್ತಿರುವ ಪೊಲೀಸರು, ಕಳೆದ ಮೂರು ತಿಂಗಳ ಕಾಲ್ ಡಿಟೇಲ್ಸ್ ಪಡೆಯಲು ಮುಂದಾಗಿದ್ದಾರೆ. ಕೋರ್ಟ್ ಅನುಮತಿ ಪಡೆದು ಅವರ ಮೊಬೈಲ್ ಅನ್ನು ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸುವ ಯೋಜನೆ ಇದೆ. ಐಟಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಕುಟುಂಬದವರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.