ಬೆಂಗಳೂರು: ಯಕ್ಷಾಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ದೊರೆತಿದ್ದು, ಯಕ್ಷಗಾನಕ್ಕಾಗಿ ವಿಶೇಷವಾಗಿ ರೂಪುಗೊಂಡಿರುವ ತಿತ್ತಿತೈ ಯಕ್ಷಗಾನ ಆ್ಯಪ್ (Titthitai Yakshagana App) ಇದೀಗ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿದೆ. ಯಕ್ಷಗಾನದ ವಿವಿಧ ಆಯಾಮಗಳನ್ನು ಒಂದೇ ಸೂರಿನಡಿ ತರುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಈ ಆ್ಯಪ್ ಅನ್ನು ರೂಪಿಸಲಾಗಿದೆ. ಸಂಪತ್ ಕುಡೇರಿ ಎಂಬುವವರು ಈ ಆ್ಯಪ್ಅನ್ನು ನಿರ್ಮಿಸಿದ್ದು, ಯಕ್ಷಗಾನಕ್ಕೆ ಸಂಬಂಧಿಸಿದ ಮಾಹಿತಿ ಸೇರಿದಂತೆ ಟಿಕೆಟ್ ಬುಕಿಂಗ್ ಸಹ ಇಲ್ಲಿ ಮಾಡಬಹುದಾಗಿದೆ.
ಯಕ್ಷಗಾನ ಕಲಾವಿದರು, ಮೇಳಗಳು, ಪ್ರಸಂಗಗಳು, ಯಕ್ಷಗಾನಕ್ಕೆ ಸಂಬಂಧಿಸಿದ ಸ್ಟೋರ್, ಇವೆಂಟ್ಸ್(ಆಟಗಳು), ಟಿಕೆಟ್ ಬುಕಿಂಗ್ ವ್ಯವಸ್ಥೆ ಹಾಗೂ ಸಂಕಷ್ಟದಲ್ಲಿರುವ ಕಲಾವಿದರಿಗೆ ದೇಣಿಗೆ ನೀಡುವ ವೇದಿಕೆ, ಯಕ್ಷಗಾನ ಕ್ಲಾಸ್, ವೇಷಭೂಷಣಗಳು ಸೇರಿದಂತೆ ಎಲ್ಲವನ್ನು ಈ ತಿತ್ತಿತೈ ಯಕ್ಷಗಾನ ಆ್ಯಪ್ ಮೂಲಕ ನಿರ್ವಹಿಸಬಹುದು. ಸದ್ಯಕ್ಕೆ ಈ App 100ಕ್ಕೂ ಹೆಚ್ಚು ಬಳಕೆದಾರರನ್ನು, ಹತ್ತಕ್ಕೂ ಹೆಚ್ಚು ಸಂಘಟಕರನ್ನು ಹಾಗೂ ಐವತ್ತಕ್ಕೂ ಹೆಚ್ಚು ಕಲಾವಿದರ ಮಾಹಿತಿಯನ್ನು ಹೊಂದಿದೆ.
ಆ್ಯಪ್‌ನಲ್ಲಿ ದಾಖಲಿರುವ ಯಕ್ಷಗಾನಕ್ಕೆ ಹೋಗಬೇಕಾದರೆ ಅಲ್ಲಿಯೇ ಬುಕ್ಕಿಂಗ್ ಮಾಡಿಕೊಳ್ಳಬಹುದು. ಯಕ್ಷಗಾನ ಕಲಾವಿದರಿಗೆ, ಪ್ರೇಕ್ಷಕರಿಗೆ ಹಾಗೂ ಆಯೋಜಕರಿಗೆ ಅಗತ್ಯವಾಗಬಹುದಾದ ವಿವಿಧ ವಸ್ತುಗಳನ್ನು ಕೂಡ ಇಲ್ಲಿ ಖರೀದಿಸಬಹುದು. ಅಷ್ಟೇ ಅಲ್ಲ, ಯಾವುದೇ ಕಲಾವಿದರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಕಷ್ಟದಲ್ಲಿದ್ದರೆ, ಅವರಿಗೆ ನೆರವಾಗಲು ನಿಧಿ ಸಂಗ್ರಹಣೆ (Fund Raising) ವ್ಯವಸ್ಥೆಯನ್ನೂ ಬಳಸಬಹುದು. ಇನ್ನು ಯಕ್ಷಗಾನಕ್ಕೆ ಸಂಬಂಧಪಟ್ಟವರಾಗಿದ್ದರೆ ಯಾವುದೇ ವ್ಯಾಪಾರ ಅಥವಾ ಉದ್ಯಮ ನಡೆಸುತ್ತಿದ್ದರೆ ಆ್ಯಪ್‌ನಲ್ಲಿ ಜಾಹೀರಾತನ್ನು ಸಹ ನೀಡಬಹುದಾಗಿದೆ. ಯಕ್ಷಗಾನ ಕಲಿಯಲು ಆಸಕ್ತಿ ಇರುವವರಿಗಾಗಿ ಯಕ್ಷಗಾನ ಕ್ಲಾಸ್‌ಗಳ ವಿವರಗಳನ್ನು ಇಲ್ಲಿಂದ ಪಡೆದುಕೊಳ್ಳಬಹುದಾಗಿದೆ.
ಯಕ್ಷಗಾನ ಕುಟುಂಬದಿಂದ ಬಂದ ಸಂಪತ್ ಈ ಆ್ಯಪ್ಅನ್ನು ನಿರ್ಮಿಸಿದ್ದು, ಯಕ್ಷಗಾನ ಸಮುದಾಯದ ಅಗತ್ಯಗಳನ್ನು ಮನಗಂಡು ಈ ವೇದಿಕೆ ಸೃಷ್ಟಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಒಂದೇ ಸ್ಥಳದಲ್ಲಿ ಸಿಗಲಿ ಎಂಬ ಉದ್ದೇಶವನ್ನು ಇದು ಹೊಂದಿದೆ.