ಬೆಂಗಳೂರಿನಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಭಾರೀ ದುರಂತವೊಂದು ತಪ್ಪಿದೆ. ಮೇ 23 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ (Bengaluru SMVT Station) ಬಿಹಾರಕ್ಕೆ ತೆರಳುತ್ತಿದ್ದ ದಾನಪೂರ್ ವಿಶೇಷ ರೈಲು ( ಸಂಖ್ಯೆ 03252) ಚಲಿಸುತ್ತಿದ್ದಾಗಲೇ ಜಾಯಿಂಟ್ ವೀಲ್ ಕಟ್ಟಾಗಿತ್ತು ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ಮೇ 24 ರಂದು ಆಂಧ್ರ ಪ್ರದೇಶದ ವಿಜಯವಾಡ ನಿಲ್ದಾಣ ದಾಟಿ 30 ಕಿಮೀ ದೂರದಲ್ಲಿ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದಾಗ ಜಾಯಿಂಟ್ ವೀಲ್ ಕಟ್ಟಾಗಿ ಪ್ರಯಾಣಿಕರಿದ್ದ ಬೋಗಿ ಹಾಗೂ ಇಂಜಿನ್ ಇದ್ದ ಬೋಗಿ ಬೇರ್ಪಟ್ಟಿತ್ತು. ಅದೃಷ್ಟವಶಾತ್ ರೈಲು ನಿಯಂತ್ರಣ ಕಳೆದುಕೊಳ್ಳದ ಕಾರಣ ಹಾಗೂ ಲೋಕೋಪೈಲಟ್‌ನ ಸಮಯ ಪ್ರಜ್ಞೆ ಮುಂದಾಗುವ ಅನಾಹುತ ತಪ್ಪಿಸಿತ್ತು. ಘಟನೆ ಬಳಿಕ 4 ಘಂಟೆಗಳ ಕಾಲ ರೈಲು ಸಂಚಾರ ವಿಳಂಬಗೊಂಡಿತ್ತು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಪ್ರತ್ಯೇಕ ಘಟನೆಯಲ್ಲಿ, ಬಿಹಾರದ ರೋಹ್ತಾಸ್‌ನಲ್ಲಿ ಸೋಮವಾರ ಬೆಳಗ್ಗೆ ಸಸಾರಾಮ್-ಪಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲಿನ (53212) ಸಾಮಾನ್ಯ ಕೋಚ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನಿಲ್ದಾಣದಲ್ಲಿ ಭೀತಿ ಉಂಟಾಗಿದೆ. ಇಲ್ಲಿನ ಪ್ಲಾಟ್‌ಫಾರ್ಮ್ ಸಂಖ್ಯೆ 6 ರಲ್ಲಿ ನಿಲ್ಲಿಸಿದ್ದ ಐದನೇ ಕೋಚ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ವೇಗವಾಗಿ ಹರಡಿ ಇಡೀ ಕೋಚ್ ಬೆಂಕಿಯಲ್ಲಿ ಆಹುತಿಯಾಗಿದೆ. ಬೆಳಗ್ಗೆ 6:45 ಕ್ಕೆ ರೈಲು ಹೊರಡುವ ಮೊದಲೇ ಘಟನೆ ಸಂಭವಿಸಿದ್ದರಿಂದ ಅಷ್ಟರಲ್ಲೇ ರೈಲಿನಿಂದ ಕೆಳಗಿಳಿದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ರೈಲ್ವೆ ಅಧಿಕಾರಿಗಳು ಮತ್ತು ಸ್ಥಳೀಯ ಅಗ್ನಿಶಾಮಕ ಇಲಾಖೆ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಮುಂದಾದರು. ಸಾಕಷ್ಟು ಪ್ರಯತ್ನದ ನಂತರ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿ ಹೊತ್ತಿಕೊಂಡ ಕೋಚ್ ಅನ್ನು ಎಂಜಿನ್‌ನಿಂದ ಬೇರ್ಪಡಿಸಲಾಯಿತು. ಅದೃಷ್ಟವಶಾತ್, ಸಕಾಲಿಕ ಕ್ರಮದಿಂದಾಗಿ, ಯಾವುದೇ ಪ್ರಯಾಣಿಕರು ಅಥವಾ ರೈಲ್ವೆ ಸಿಬ್ಬಂದಿ ಗಾಯಗೊಂಡಿರುವ ಬಗ್ಗೆ ಯಾವುದೇ ವರದಿಗಳಿಲ್ಲ.
ರಾಜಧಾನಿ ಎಕ್ಸ್‌ಪ್ರೆಸ್ ಬೆಂಕಿಗಾಹುತಿ
ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ರೈಲು ಹೊತ್ತಿ ಉರಿದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿರಲಿಲ್ಲ. ತಿರುವನಂತಪುರಂ - ದೆಹಲಿಯ ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾನುವಾರ ಮೇ 17 ರ ನಸುಕಿನ ಜಾವ 5 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿತ್ತು. ರಾಜಸ್ಥಾನದ ಕೋಟಾದ ವಿಕ್ರಮ್‌ಗಢ ಅಲೋಟ್ ರೈಲು ನಿಲ್ದಾಣದ ಬಳಿ ರೈಲಿನ ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕಾಣಿಸಿಕೊಂಡ ಬಿ1 ಎಸಿ ಬೋಗಿಯಲ್ಲಿ 68 ಜನ ಪ್ರಯಾಣಿಕರಿದ್ದರು. ತಕ್ಷಣವೇ ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು.