ಬೆಂಗಳೂರು: ಮುರುಗಪ್ಪ ಗ್ರೂಪ್ ಮತ್ತು ಜಪಾನ್ ನ ಮಿತ್ಸುಯಿ ಸುಮಿಟೊಮೊ ಇನ್ಶೂರೆನ್ಸ್ ಗ್ರೂಪ್ (ಎಂಎಸ್ಐಜಿ) ನಡುವಿನ ಜಂಟಿ ಉದ್ಯಮ ಚೋಳಮಂಡಲಂ ಎಂಎಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಚೋಳ ಎಂಎಸ್), ಹೆಚ್ಚುತ್ತಿರುವ ಅಪಾಯಗಳು ಹಾಗೂ ವ್ಯವಹಾರದ ಚೇತರಿಕೆ ಸಾಮರ್ಥ್ಯ ಹೆಚ್ಚಿಸುವ ಕುರಿತು ಚರ್ಚಿಸಲು ಉದ್ಯಮದ ಪ್ರಮುಖ ನಾಯಕರು ಮತ್ತು ತಜ್ಞರನ್ನೊಳಗೊಂಡ ವಿಶೇಷ ಗೋಷ್ಠಿಯನ್ನು ಆಯೋಜಿಸಿತ್ತು.
ವೇಗವಾಗಿ ಬದಲಾಗುತ್ತಿರುವ ಸೈಬರ್ ಬೆದರಿಕೆಗಳು, ಪೂರೈಕೆ ಸರಪಳಿ ವ್ಯತ್ಯಯಗಳು ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವ ಎರಡು ಪ್ರಮುಖ ಕ್ಷೇತ್ರಗಳಾದ ಕಾರ್ಪೊರೇಟ್ ಸೈಬರ್ ವಿಮೆ ಮತ್ತು ಟ್ರೇಡ್ ಕ್ರೆಡಿಟ್ ವಿಮೆಯ ಮೇಲೆ ಈ ಕಾರ್ಯಕ್ರಮವು ಗಮನ ಹರಿಸಿತು.
ತನ್ನ ಜಂಟಿ ಉದ್ಯಮದ ಭಾಗಿದಾರ ಸಂಸ್ಥೆಯಾದ ಎಂಎಸ್ಐಜಿಯ ಜಾಗತಿಕ ಪರಿಣತಿ ಮತ್ತು ಭಾರತೀಯ ಮಾರುಕಟ್ಟೆಯ ಕುರಿತಾದ ತನ್ನ ಗಾಢ ಗ್ರಹಿಕೆಯನ್ನು ಬಳಸಿಕೊಂಡು, ಚೋಳ ಎಂಎಸ್ ಸಂಸ್ಥೆಯು ಬೆಳೆಯುತ್ತಿರುವ ಅಪಾಯಗಳು ಹಾಗೂ ವ್ಯವಹಾರದ ಚೇತರಿಕೆ ಸಾಮರ್ಥ್ಯವನ್ನು ಬಲಪಡಿಸುವ ತಂತ್ರಗಳ ಬಗ್ಗೆ ಚರ್ಚಿಸಲು ಉದ್ಯಮ ತಜ್ಞರನ್ನು ಒಂದೆಡೆ ಸೇರಿಸಿತು.
ಎಂಎಸ್ಐಜಿಯ ಫೈನಾನ್ಶಿಯಲ್ ಲೈನ್ಸ್ & ಸೈಬರ್ ವಿಭಾಗದ ಮುಖ್ಯಸ್ಥರಾದ ಆಂಡ್ರ್ಯೂ ಟೇಲರ್ ಅವರ ನೇತೃತ್ವದಲ್ಲಿ ನಡೆದ ಕಾರ್ಪೊರೇಟ್ ಸೈಬರ್ ವಿಮೆ ಗೋಷ್ಠಿಯು ರ‍್ಯಾನ್ಸಮ್ ವೇರ್ ಮತ್ತು ಪೂರೈಕೆ ಸರಪಳಿ ಮೇಲಿನ ದಾಳಿಗಳಂತಹ ಬೆಳೆಯುತ್ತಿರುವ ಸೈಬರ್ ಬೆದರಿಕೆಗಳನ್ನು ಚರ್ಚಿಸಿತು. ಜೊತೆಗೆ, ಉದ್ಯಮಗಳು ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಮತ್ತು ಅಪಾಯ ಎದುರಿಸುವ ಸಿದ್ಧತೆ ಹೆಚ್ಚಿಸಲು ಸೈಬರ್ ವಿಮೆ ವಹಿಸುವ ಪ್ರಮುಖ ಪಾತ್ರವನ್ನು ಒತ್ತಿ ಹೇಳಿತು.
ಇದೇ ವೇಳೆ ಕೋಫೇಸ್ ಸಂಸ್ಥೆಯ ಕಂಟ್ರಿ ಮ್ಯಾನೇಜರ್ ಜೇ ಮಲಿಯಾ ಅವರ ನೇತೃತ್ವದಲ್ಲಿ ಟ್ರೇಡ್ ಕ್ರೆಡಿಟ್ ವಿಮೆ ಕುರಿತು ತಜ್ಞರ ಗೋಷ್ಠಿ ನಡೆಯಿತು. ಖರೀದಿದಾರರ ದಿವಾಳಿತನ ಮತ್ತು ಸುದೀರ್ಘ ಪಾವತಿ ಬಾಕಿಗಳಂತಹ ಅಪಾಯಗಳಿಂದ ಉದ್ಯಮಗಳು ತಮ್ಮ ವ್ಯಾಪಾರ ಪಾವತಿಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ ಅವರು ಮೌಲ್ಯಯುತ ಮಾಹಿತಿಯನ್ನು ಹಂಚಿಕೊಂಡರು.
ಈ ವಿಮೆಯು ನಗದು ಹರಿವಿನ ನಿರ್ವಹಣೆಯನ್ನು ಬಲಪಡಿಸುವಲ್ಲಿ, ಹೆಚ್ಚು ಆತ್ಮವಿಶ್ವಾಸ ದಿಂದ ಸಾಲ ಸೌಲಭ್ಯ ನೀಡಲು ಮತ್ತು ನಿರಂತರವಾಗಿ ಬದಲಾಗುತ್ತಿರುವ ವ್ಯಾಪಾರ ವಾತಾವರಣದಲ್ಲಿ ಸುಸ್ಥಿರ ಬೆಳವಣಿಗೆಗೆ ಬೆಂಬಲ ನೀಡುವಲ್ಲಿ ವಹಿಸುವ ತಾಂತ್ರಿಕ ಪಾತ್ರವನ್ನು ಈ ಗೋಷ್ಠಿ ಎತ್ತಿ ಹಿಡಿಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಚೋಳ ಎಂಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ರಾಜೀವ್ ಕುಮಾರಸ್ವಾಮಿ ಅವರು, “ಉದ್ಯಮಗಳು ಹೆಚ್ಚು ಸಂಕೀರ್ಣ ಮತ್ತು ಪರಸ್ಪರ ಬೆಸೆದಿರುವ ಅಪಾಯಕಾರಿ ವಾತಾವರಣವನ್ನು ಎದುರಿಸುತ್ತಿರುವಾಗ, ಚೇತರಿಕೆ ಸಾಮರ್ಥ್ಯ ಎಂಬುದು ಒಂದು ಅತ್ಯಗತ್ಯ ತಂತ್ರವಾಗಿದೆ.
ಎಂಎಸ್ಐಜಿಯ ಜಾಗತಿಕ ಪರಿಣತಿ, ನಮ್ಮ ಮರು-ವಿಮೆದಾರರ ಮಾರುಕಟ್ಟೆ ಜ್ಞಾನ ಮತ್ತು ಸ್ಥಳೀಯ ಮಾರುಕಟ್ಟೆಯ ಗಾಢವಾದ ಗ್ರಹಿಕೆಯನ್ನು ಒಗ್ಗೂಡಿಸಿ, ಉದ್ಯಮಗಳು ಹೊಸ ಅಪಾಯಗಳನ್ನು ಎದುರಿಸಿ ಆತ್ಮವಿಶ್ವಾಸದಿಂದ ಬೆಳವಣಿಗೆಯ ಅವಕಾಶಗಳನ್ನು ಕಂಡುಕೊಳ್ಳಲು ನೆರವಾಗುವುದರಲ್ಲಿ ಚೋಳ ಎಂಎಸ್‌ನ ಶಕ್ತಿಯಿದೆ” ಎಂದು ಹೇಳಿದರು.