ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼನೆರೆಹೊರೆಯವರು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆʼʼ: ತಮಿಳುನಾಡಿನ ಎಸಿ ಬಸ್ ಉಲ್ಲೇಖಿಸಿ ಬೆಂಗಳೂರಿನಲ್ಲಿ ಇವಿ ಬಸ್‌ ಸಂಖ್ಯೆ ಹೆಚ್ಚಳಕ್ಕೆ ಮೋಹನ್‌ದಾಸ್ ಪೈ ಆಗ್ರಹ

Mohandas Pai: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ ಉದ್ಯಮಿ ಮೋಹನ್‌ದಾಸ್‌ ಪೈ, ನೆರೆಯ ರಾಜ್ಯ ತಮಿಳುನಾಡು ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ ಎಂದಿದ್ದಾರೆ. ಆದರೆ ಕರ್ನಾಟಕವು ತನ್ನ ಅನುಮೋದಿತ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.

ಮೋಹನ್‌ದಾಸ್ ಪೈ, ತಮಿಳುನಾಡು ಸಿಎಂ ವಿಜಯ್ (ಸಂಗ್ರಹ ಚಿತ್ರ)

ಚೆನ್ನೈ, ಜೂ. 30: ತಮಿಳುನಾಡು ಸರ್ಕಾರವು (Tamil Nadu) ಇನ್ನು ಮುಂದೆ ಖರೀದಿಸುವ ಎಲ್ಲ ಸರ್ಕಾರಿ ಬಸ್‌ಗಳು ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲಿದೆ ಎಂದು ಘೋಷಿಸಿದ ಬೆನ್ನಲ್ಲೇ, ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮತ್ತು ಬೆಂಗಳೂರು ನಿವಾಸಿ ಮೋಹನ್‌ದಾಸ್ ಪೈ (Mohandas Pai) ಬೆಂಗಳೂರಿನ ಎಲೆಕ್ಟ್ರಿಕ್ ಬಸ್‌ಗಳ (Electric Buses) ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ ಪೈ, ನೆರೆಯ ರಾಜ್ಯವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ ಕರ್ನಾಟಕವು ತನ್ನ ಅನುಮೋದಿತ ಎಲೆಕ್ಟ್ರಿಕ್ ಬಸ್‌ಗಳನ್ನು ಸಹ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಡಿ.ಕೆ. ಶಿವಕುಮಾರ್ ಅವರೇ ದಯವಿಟ್ಟು ಗಮನಿಸಿ. ನಮ್ಮ ನೆರೆಹೊರೆಯವರು ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ನಮ್ಮ ಸರ್ಕಾರದ 4,000 ಇವಿ ಬಸ್‌ಗಳು ಅನುಮೋದಿತ ಕೋಟಾದಲ್ಲಿ ಕುಳಿತಿವೆ. ನಮ್ಮ ನಾಗರಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ದಯವಿಟ್ಟು ಕ್ರಮ ಕೈಗೊಳ್ಳಿ. ಬೆಂಗಳೂರಿಗಾಗಿ 15,000 ಇವಿ ಎಸಿ ಬಸ್‌ ಖರೀದಿಸಿ” ಎಂದು ಪೈ ಬರೆದುಕೊಂಡಿದ್ದಾರೆ.

ಇಲ್ಲಿದೆ ಪೋಸ್ಟ್:



ಭಾರತೀಯ ಬರಹಗಾರ ಮನು ಜೋಸೆಫ್ ಎಕ್ಸ್‌ನಲ್ಲಿ, ʼʼತಮಿಳುನಾಡು ಮುಖ್ಯಮಂತ್ರಿ ವಿಜಯ್ ದೇಶದಲ್ಲೇ ಅತ್ಯುತ್ತಮ ಸಿಎಂ ಆಗಿ ಹೊರಹೊಮ್ಮುತ್ತಿದ್ದಾರೆ. ತಮಿಳುನಾಡಿನ ಎಲ್ಲ ಸಾರ್ವಜನಿಕ ಬಸ್‌ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲೇಬೇಕು ಎಂದು ಸೂಚಿಸಿದ್ದಾರೆʼʼ ಎಂಬುದಾಗಿ ಬರೆದಿದ್ದ ಪೋಸ್ಟ್‌ಗೆ ಮೋಹನ್‌ದಾಸ್ ಪೈ ಪ್ರತಿಕ್ರಿಯಿಸಿದ್ದಾರೆ.

ಬಿಎಂಟಿಸಿ ಪ್ರಯಾಣಿಕರಿಗೆ ಮತ್ತೆ ಶಾಕ್‌; ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ಹೆಚ್ಚಳ

ತಮಿಳುನಾಡು ಸಾರಿಗೆ ಸಚಿವ ವಿಜಯ್ ತಮಿಳನ್ ಪಾರ್ಥಿಬನ್ ಅವರ ಪ್ರಕಟಣೆಯ ಬೆನ್ನಲ್ಲೇ ಮೋಹನ್‌ದಾಸ್ ಪೈ ಅವರ ಈ ಹೇಳಿಕೆ ಹೊರಬಿದ್ದಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನಿರ್ದೇಶನದಂತೆ, ಸಾರ್ವಜನಿಕರ ಅನುಕೂಲಕ್ಕಾಗಿ ಇನ್ಮುಂದೆ ರಾಜ್ಯ ಸರ್ಕಾರ ಖರೀದಿಸುವ ಎಲ್ಲ ಹೊಸ ಬಸ್‌ಗಳು ಕಡ್ಡಾಯವಾಗಿ ಹವಾನಿಯಂತ್ರಿತ ಸೌಲಭ್ಯವನ್ನು ಹೊಂದಿರಲಿವೆ ಎಂದು ತಮಿಳನ್ ಪಾರ್ಥಿಬನ್ ಸ್ಪಷ್ಟಪಡಿಸಿದ್ದರು.

ಮೋಹನ್‌ದಾಸ್ ಪೈ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸುವಲ್ಲಿ ವಿಳಂಬ ಮಾಡುತ್ತಿರುವ ಕರ್ನಾಟಕ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರವು ಈ ಹಿಂದೆ ಅನುಮೋದಿಸಿದ್ದ 4,000 ಇವಿ ಬಸ್‌ಗಳನ್ನು ಇನ್ನು ಸಂಪೂರ್ಣವಾಗಿ ರಸ್ತೆಗೆ ಇಳಿಸಿಲ್ಲ ಎಂದು ಆರೋಪಿಸಿರುವ ಅವರು, ಸಿಲಿಕಾನ್ ಸಿಟಿಗೆ ಒಟ್ಟು 15,000 ಇವಿ ಎಸಿ ಬಸ್‌ಗಳ ಬೃಹತ್ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ನಾಯಕತ್ವ ಬದಲಾಗಿದ್ದರೂ ಪ್ರಯಾಣಿಕರು ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಮುಂದುವರಿದಿದೆ ಎಂದು ಟೀಕಿಸಿದ್ದಾರೆ. ಎಕ್ಸ್‌ನಲ್ಲಿ ಅವರು ಪೋಸ್ಟ್‌ ಹಂಚಿಕೊಂಡು, ನಗರದಲ್ಲಿ ನಂಬಿಕಸ್ಥ ಮತ್ತು ನಿರಂತರ ಸಾರ್ವಜನಿಕ ಸಾರಿಗೆ ಸೌಲಭ್ಯ ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಸಾರಿಗೆ ಸಂಸ್ಥೆಗೆ ಮನವಿ ಮಾಡಿದ್ದಾರೆ.