ಬೆಂಗಳೂರು: ರಾಜಧಾನಿಯಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಐಎಎಫ್ ಅಧಿಕಾರಿ ಮೇಲೆ ಭಾನುವಾರ ಸಂಜೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ (IAF officer Attacked) ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇಶ ಕಾಯುವ ಸೈನಿಕನ ಮೇಲೆ ಹಲ್ಲೆ ನಡೆದಿದ್ದರಿಂದ ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲಿಗೆ ಬೈಕ್ ಸವಾರ ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ವಾಯುಸೇನೆ ಅಧಿಕಾರಿ ಆರೋಪಿಸಿದ್ದರು. ಆದರೆ, ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಇಬ್ಬರ ನಡುವೆ ಜಗಳ ನಡೆದಾಗ ಅಧಿಕಾರಿ ಕೂಡ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಕಾಸ್ ಕುಮಾರ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಪ್ರತಿಕ್ರಿಯಿಸಿ, ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮತ್ತು ಅವರ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತಾ ದಾಸ್ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಇದು ಯಾವುದೇ ಭಾಷೆ ವಿಚಾರಕ್ಕೆ ನಡೆದ ಗಲಾಟೆಯಲ್ಲ. ಇದು ರೋಡ್ ರೇಜ್ ಪ್ರಕರಣ ಎಂಬುವುದು ಸ್ಪಷ್ಟವಾಗಿದೆ. ಇಂತಹ ಪ್ರಕರಣಗಳು ಬೆಂಗಳೂರಿನಲ್ಲಿ ಬಹಳ ಸಾಮಾನ್ಯವಾಗಿದೆ. ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಾಗ, 6-7 ಯುವಕರು ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಮಹಿಳಾ ಅಧಿಕಾರಿ ಮಧುಮಿತಾ ದಾಸ್ ಕಾರು ಚಾಲನೆ ಮಾಡುತ್ತಿದ್ದಾಗ, ಬೈಕ್‌ನಲ್ಲಿದ್ದ ವ್ಯಕ್ತಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದರು. ಇದು ಗಲಾಟೆಗೆ ಮೂಲ ಕಾರಣ. ನಂತರ ವಾಯುಸೇನೆ ಅಧಿಕಾರಿ ಕಾರಿನಿಂದ ಇಳಿದಿದ್ದು, ಇಬ್ಬರ ನಡುವೆ ಜಗಳವಾಗಿದೆ. ವಿಕಾಸ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರಿನ ಸಿ.ವಿ.ರಾಮನ್ ನಗರದಲ್ಲಿ ಭಾನುವಾರ ಸಂಜೆ ಐಎಎಫ್ ಅಧಿಕಾರಿ ಮೇಲೆ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿತ್ತು. ಇದರಿಂದ ವಾಯುಸೇನೆ ಅಧಿಕಾರಿ ಮುಖ ಹಾಗೂ ಕತ್ತಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿತ್ತು.
ನಗರದ ಡಿಆರ್‌ಡಿಒ ಕಾಲೋನಿ ನಿವಾಸಿಯಾದ ವಾಯುಸೇನೆ ಅಧಿಕಾರಿ ಶಿಲಾದಿತ್ಯ ಬೋಸ್ ಅವರು ಪತ್ನಿ ಮಧುಮಿತಾ ಜತೆ ಕಾರಿನಲ್ಲಿ ಸಿ.ವಿ.ರಾಮನ್ ನಗರದಿಂದ ಏರ್‌ಪೋರ್ಟ್‌ಗೆ ತೆರಳುವಾಗ ಹಲ್ಲೆ ನಡೆಸಲಾಗಿತ್ತು. ಇವರ ಪತ್ನಿ ಕೂಡ ಐಎಎಫ್‌ನ ಸ್ಕ್ವಾಡ್ರನ್ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲ್ಲೆಯಿಂದ ಮುಖ ಹಾಗೂ ಕತ್ತಿನ ಭಾಗದಿಂದ ರಕ್ತ ಸೋರುತ್ತಿರುವ ನಡುವೆಯೇ ವಿಡಿಯೋ ಮಾಡಿದ್ದ ಐಎಎಫ್ ಅಧಿಕಾರಿ, ನಾವು ಕಾರಿನಲ್ಲಿ ಹೋಗುವಾಗ ಬೈಕ್‌ನಲ್ಲಿ ಹಿಂದಿನಿಂದ ಬಂದ ಒಬ್ಬ ವ್ಯಕ್ತಿ ನಮ್ಮ ಕಾರನ್ನು ನಿಲ್ಲಿಸಿ, ಏಕಾಏಕಿ ಕನ್ನಡದಲ್ಲಿ ಅವಾಚ್ಯ ಶಬ್ದಗಳಿಂದ ಬೈಯಲು ಶುರು ಮಾಡಿದ. ಕಾರಿನ ಮೇಲಿನ ಸ್ಟಿಕ್ಕರ್ ನೋಡಿ ನೀವು ಡಿಆರ್‌ಡಿಒಗೆ ಸೇರಿದವರಾ? ಎಂದು ಕೇಳಿದ. ಈ ವೇಳೆ ನಾನು ಕೆಳಗಿಳಿದಾಗ, ವ್ಯಕ್ತಿಯೊಬ್ಬ ನನ್ನ ಮೇಲೆ ಬೈಕ್ ಕೀಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ | IAF officer Attacked: ಐಎಎಫ್ ಅಧಿಕಾರಿ ಮೇಲೆ ಹಲ್ಲೆ; ಬೈಯಪ್ಪನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಘಟನೆ ನಡೆದಾಗ, ನಿಮ್ಮನ್ನು ರಕ್ಷಿಸುವ ಜನರನ್ನು ನೀವು ಹೇಗೆ ರಕ್ಷಿಸುತ್ತೀರಿ, ಸೈನಿಕರನ್ನು ಯಾರಾದರೂ ಈ ರೀತಿ ನಡೆಸಿಕೊಳ್ಳುತ್ತಾರಾ? ಎಂದು ಅಲ್ಲಿದ್ದ ಜನರನ್ನು ಕೇಳಿದೆ. ಆದರೆ, ಅಲ್ಲಿದ್ದವರು ನಮ್ಮನ್ನೇ ನಿಂದಿಸಲು ಪ್ರಾರಂಭಿಸಿದರು. ಹಲ್ಲೆ ಮಾಡಿದ್ದ ವ್ಯಕ್ತಿ ಮತ್ತೆ ಒಂದು ಕಲ್ಲನ್ನು ಎತ್ತಿಕೊಂಡು ನನ್ನ ಕಾರಿಗೆ ಹೊಡೆಯಲು ಯತ್ನಿಸಿದ. ಅದು ನನ್ನ ತಲೆಗೆ ಬಡಿಯಿತು ಎಂದು ಅಧಿಕಾರಿ ಹೇಳಿದ್ದರು.