ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

7.11 ಕೋಟಿ ದರೋಡೆ ಕೇಸ್‌ನಲ್ಲಿ ಚಾರ್ಚ್‌ಶೀಟ್‌; ಗೋವಾ ಕ್ಯಾಸಿನೋಗಳಲ್ಲಿ ಮೋಜು ಮಸ್ತಿ ಮಾಡಲು ಪ್ಲ್ಯಾನ್‌ ಮಾಡಿದ್ದ ಆರೋಪಿಗಳು!

Bengaluru ATM Van Robbery Case: ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಎಟಿಎಂ ವಾಹನದಿಂದ 7.11 ಕೋಟಿ ದರೋಡೆ ಪ್ರಕರಣದಲ್ಲಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಆರೋಪಿಗಳು ಸಾಲ ತೀರಿಸಲು ಹಾಗೂ ಐಷಾರಾಮಿ ಜೀವನಕ್ಕಾಗಿ ಹಣ ದರೋಡೆ ಮಾಡಿದ್ದಾರೆ ಎಂಬುವುದು ತನಿಖೆ ವೇಳೆ ಬಯಲಾಗಿದೆ.

ಬೆಂಗಳೂರಿನಲ್ಲಿ ದರೋಡೆಗೊಳಗಾಗಿದ್ದ ಎಟಿಎಂಗಳಿಗೆ ಹಣ ತುಂಬಿಸುವ ವ್ಯಾನ್‌.

ಬೆಂಗಳೂರು: ನಗರದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಎಟಿಎಂ ವಾಹನದಿಂದ 7.11 ಕೋಟಿ ದರೋಡೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, 56ನೇ ಸಿಸಿಎಚ್ ನ್ಯಾಯಾಲಯಕ್ಕೆ 1,328 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಕೇಸ್‌ನಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಅಣ್ಣಪ್ಪ ನಾಯ್ಕ ಸೇರಿ 9 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಕರಣದ ಎಲ್ಲಾ ಆರೋಪಿಗಳು ಒಟ್ಟಾಗಿ ಸಂಚು ರೂಪಿಸಿ ಸಿಎಂಎಸ್ ವಾಹನದಲ್ಲಿ ಎಟಿಎಂ ಕೇಂದ್ರಕ್ಕೆ ತುಂಬಲು ಕೊಂಡೊಯ್ಯುತ್ತಿದ್ದ ಹಣವನ್ನು ದರೋಡೆ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಇನ್ನು ಆರೋಪಿಗಳು ಮಾಡಿದ್ದ ಸಾಲ ತೀರಿಸಲು ಹಾಗೂ ಐಷಾರಾಮಿ ಜೀವನಕ್ಕಾಗಿ ಹಣ ದರೋಡೆ ಮಾಡಿದ್ದಾರೆ. ಹಣ ದರೋಡೆ ಬಳಿಕ ಆರೋಪಿಗಳು ಗೋವಾಗೆ ತೆರಳಿ ಕ್ಯಾಸಿನೋಗಳಿಗೆ ಹೋಗಿ ಮೋಜು ಮಸ್ತಿ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದರು. ಆದರೆ, ಅದಕ್ಕೂ ಮೊದಲೇ ಸಿಕ್ಕಿಬಿದ್ದಿದ್ದಾರೆ.

2025ರ ನ.19ರಂದು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಡೇರಿ ವೃತ್ತದ ಮೇಲ್ಸೇತುವೆಯಲ್ಲಿ ಎಟಿಎಂಗೆ ಸಾಗಿಸುವ ವಾಹನ ಅಡ್ಡಗಟ್ಟಿದ್ದ ಆರೋಪಿಗಳು, ಅದರಲ್ಲಿದ್ದ 7.11 ಕೋಟಿ ಹಣ ದರೋಡೆ ಮಾಡಿ ಪರಾರಿ ಆಗಿದ್ದರು. ಹೀಗಾಗಿ ಚೆನ್ನೈ, ಆಂಧ್ರ ಪ್ರದೇಶ ಸೇರಿ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್ ಅಣ್ಣಪ್ಪನಾಯ್ಕ, ಸಿಎಂಎಸ್ ಏಜೆನ್ಸಿ ಮಾಜಿ ಉದ್ಯೋಗಿ ಕ್ಸೇವಿಯರ್, ಸಹಚರರಾದ ರವಿ, ನೆಲ್ಸನ್, ಗೋಪಾಲ್, ಮಂಜುನಾಥ್ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದರು.

ಆರೋಪಿಗಳ ಬಂಧನಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಮತ್ತು ಜಯನಗರ ಎಸಿಪಿ ವಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಇದೀಗ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಒಂಟಿಯಾಗಿದ್ದ ವೃದ್ಧೆಯನ್ನು ಕೊಂದು 73 ಗ್ರಾಂ ಚಿನ್ನಾಭರಣ ದರೋಡೆ

ಆರೋಪಿಗಳ ವಿರುದ್ಧ ದರೋಡೆ, ಅಕ್ರಮ ತಡೆ, ಸಾಕ್ಷ್ಯ ನಾಶಪಡಿಸುವುದು, ಅಪರಾಧದ ಒಳಸಂಚು, ಬೆದರಿಕೆ ಹಾಕುವುದು ಸೇರಿ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಒಟ್ಟು 129 ಸಾಕ್ಷಾಧಾರಗಳನ್ನು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ.