19 ವಿಫಲ ಶಸ್ತ್ರಚಿಕಿತ್ಸೆಗಳ ನಂತರ, 31 ವರ್ಷದ ವ್ಯಕ್ತಿಗೆ ಹೊಸ ಜೀವನ
ಅಂಗರಚನಾ ವಿರೂಪ ಮತ್ತು ಪುನರಾವರ್ತಿತ ಶಸ್ತ್ರಚಿಕಿತ್ಸಾ ವೈಫಲ್ಯಗಳನ್ನು ಗಂಭೀರವಾಗಿ ಪರಿಗಣಿ ಸಿದ ಫೋರ್ಟಿಸ್‌ನ ಮೂತ್ರಶಾಸ್ತ್ರಜ್ಞರ ತಂಡವು, ಇಲಿಯಲ್ ನಾಳಗಳ ಮೂಲಕ ಶಾಶ್ವತ ಮೂತ್ರ ವಿಸರ್ಜನೆಗೆ ಅವಕಾಶ ಮಾಡಿಕೊಡುವ ವಿಶೇಷ ಹಾಗೂ ಸಂಕೀರ್ಣಮಯವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತು.
-
ಬೆಂಗಳೂರು: ಹುಟ್ಟಿನಿಂದಲೇ ಬಂದಿದ್ದ ಅತ್ಯಂತ ಅಪರೂಪದ ಮೂತ್ರನಾಳದ ಅಸ್ವಸ್ಥತೆಯಿಂದ (ಎಕ್ಸ್‌ಟ್ರೋಫಿ ಎಪಿಸ್ಪಾಡಿಯಸ್) ಬಳಲುತ್ತಿದ್ದ 31 ವರ್ಷದ ವ್ಯಕ್ತಿಗೆ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಸಂಕೀರ್ಣಮಯ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊಸ ಬದುಕು ನೀಡಿದ್ದಾರೆ.
ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಅನುಭವಿಸಿದ್ದ ನೋವು ಮತ್ತು 19 ವಿಫಲ ಶಸ್ತ್ರಚಿಕಿತ್ಸಾ ವಿಧಾನಗಳ ನಂತರ ಈ ವ್ಯಕ್ತಿಯ ಸಮಸ್ಯೆಗೆ ಈಗ ಅಂತಿಮ ಪರಿಹಾರ ದೊರೆತಿದೆ.
ಎಕ್ಸ್‌ಟ್ರೋಫಿ ಎಪಿಸ್ಪಾಡಿಯಸ್ (Extrophy Epispadias) ಒಂದು ಅಪರೂಪದ ಜನ್ಮ ದೋಷ ವಾಗಿದ್ದು, ಇದರಲ್ಲಿ ಮೂತ್ರಕೋಶ ಮತ್ತು ಮೂತ್ರನಾಳವು ಸಮರ್ಪಕ ರೀತಿಯಲ್ಲಿ ಬೆಳವಣಿಗೆ ಆಗಿರುವುದಿಲ್ಲ. ಇದು ಮೂತ್ರನಾಳ ಮತ್ತು ಬಾಹ್ಯ ಜನನಾಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸರಿಸುಮಾರು 30,000 ರಿಂದ 50,000 ಮಕ್ಕಳ ಜನನ ಪ್ರಮಾಣದಲ್ಲಿ ಒಂದು ಮಗುವಿ ನಲ್ಲಿ ಮಾತ್ರ ಕಂಡುಬರುವ ಈ ಸ್ಥಿತಿಯು ನಿರಂತರ ಮೂತ್ರ ಸೋರಿಕೆ, ಮರುಕಳಿಸುವ ಸೋಂಕು ಗಳು, ದೀರ್ಘಕಾಲದ ನೋವು, ಚರ್ಮದ ಹಾನಿ, ಮೂತ್ರಪಿಂಡದ ತೊಂದರೆಗಳಿಗೆ ಕಾರಣ ವಾಗಿರುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದರೆ ಸಾಮಾಜಿಕ ಮತ್ತು ಮಾನಸಿಕ ತೊಂದರೆಗಳಿಗೂ ಕಾರಣವಾಗಬಹುದು.
ಇದನ್ನೂ ಓದಿ: Bariatric Surgery: 230 ಕೆಜಿ ತೂಕವಿದ್ದ ಯುವಕನಿಗೆ ಯಶಸ್ವಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ!
ನಿಯಂತ್ರಿಸಲಾಗದ ಮೂತ್ರಶಂಕೆ, ಹದಗೆಡುತ್ತಿರುವ ಸೋಂಕುಗಳು, ಎಡಭಾಗದ ಕೆಳ ಬೆನ್ನು ನೋವು ಮತ್ತು ಗಮನಾರ್ಹ ಭಾವನಾತ್ಮಕ ಯಾತನೆಯಿಂದ ಬಳಲುತ್ತಿದ್ದ ರೋಗಿಯನ್ನು ನಾಗರ ಬಾವಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿವರವಾದ ತಪಾಸಣೆಯಲ್ಲಿ ಎಡ ಮೂತ್ರ ನಾಳದ ಅಡಚಣೆ, ಮೂತ್ರದ ಹಿಮ್ಮುಖ ಹರಿವಿನಿಂದ ಮೂತ್ರಪಿಂಡದ ಊತ ಮತ್ತು ಸೋಂಕಿಗೆ ಕಾರಣವಾಗಿರುವುದು, ಈ ಹಿಂದೆ ನಡೆದ ಶಸ್ತ್ರಚಿಕಿತ್ಸೆಗಳಿಂದ ಆಗಿರುವ ಗಾಯಗಳು, ಮೂತ್ರ ಪಿಂಡಕ್ಕೆ ಆಧಾರವಾಗಿರುವ ಪೆಲ್ವಿಕ್ ಅಂಗರಚನೆಯು ವಿರೂಪಗೊಂಡರುವುದು ಮತ್ತು ಕಾರ್ಯ ನಿರ್ವಹಿಸಬೇಕಾದ ಮೂತ್ರಕೋಶದ ಗೋಡೆ ಇಲ್ಲದಿರುವುದು ಆಸ್ಪತ್ರೆಯ ಪರಿಣತ ವೈದ್ಯರ ಗಮನಕ್ಕೆ ಬಂದಿತು. ಇದೊಂದು ಹೆಚ್ಚು ಅಪಾಯಕಾರಿಯಾದ ಮತ್ತು ವೈದ್ಯಕೀಯವಾಗಿ ಸಂಕೀರ್ಣ ಪರಿಸ್ಥಿತಿಯಾಗಿತ್ತು.
ಅಂಗರಚನಾ ವಿರೂಪ ಮತ್ತು ಪುನರಾವರ್ತಿತ ಶಸ್ತ್ರಚಿಕಿತ್ಸಾ ವೈಫಲ್ಯಗಳನ್ನು ಗಂಭೀರವಾಗಿ ಪರಿಗಣಿಸಿದ ಫೋರ್ಟಿಸ್‌ನ ಮೂತ್ರಶಾಸ್ತ್ರಜ್ಞರ ತಂಡವು, ಇಲಿಯಲ್ ನಾಳಗಳ ಮೂಲಕ ಶಾಶ್ವತ ಮೂತ್ರ ವಿಸರ್ಜನೆಗೆ ಅವಕಾಶ ಮಾಡಿಕೊಡುವ ವಿಶೇಷ ಹಾಗೂ ಸಂಕೀರ್ಣಮಯವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತು. ಈ ಶಸ್ತ್ರಚಿಕಿತ್ಸೆಯು ಹೊಟ್ಟೆಯ ಮೇಲಿನ ಸಣ್ಣ ರಂಧ್ರದ (stoma) ಮೂಲಕ ಬಾಹ್ಯ ಸಂಗ್ರಹ ಚೀಲಕ್ಕೆ ಮೂತ್ರವು ಸುರಕ್ಷಿತವಾಗಿ ಹರಿಯಲು ಹೊಸ ಮಾರ್ಗವನ್ನು ಸೃಷ್ಟಿಸಿತು. ಇದು ನಿರಂತರ ಮತ್ತು ನಿಯಂತ್ರಿತ ಮೂತ್ರದ ಹರಿವಿಗೆ ಅವಕಾಶ ಮಾಡಿಕೊಟ್ಟಿದೆ.
ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರದ ಹೆಚ್ಚುವರಿ ನಿರ್ದೇಶಕ ಮತ್ತು ಹಿರಿಯ ಸಲಹೆಗಾರ ಡಾ. ಪ್ರೇಮಕುಮಾರ್ ಕೃಷ್ಣಪ್ಪ ಅವರ ನೇತೃತ್ವದಲ್ಲಿನ ವೈದ್ಯರ ತಂಡವು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅಥವಾ ಶಸ್ತ್ರಚಿಕಿತ್ಸೆಯ ನಂತರದ ಯಾವುದೇ ತೊಡಕುಗಳಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ರೋಗಿಯನ್ನು ನಾಲ್ಕು ದಿನಗಳಲ್ಲಿ ಸ್ಥಿರ ಆರೋಗ್ಯಕರ ಸ್ಥಿತಿಯಲ್ಲಿ ಮನೆಗೆ ಕಳಿಸಿಕೊಡಲಾಯಿತು. ರೋಗಿಯು ಮನೆಯಲ್ಲಿಯೇ ಚೇತರಿಸಿಕೊಂಡಿದ್ದಾರೆ.
ಈ ಅಸ್ವಸ್ಥತೆಯ ಸಂಕೀರ್ಣತೆಯನ್ನು ವಿವರಿಸಿರುವ ಡಾ.ಪ್ರೇಮ್‌ಕುಮಾರ್ ಕೃಷ್ಣಪ್ಪ ಅವರು, "ರೋಗಿಯು ಮೂತ್ರಕೋಶದ ತೆರೆದ ಭಾಗದೊಂದಿಗೆ ಜನಿಸಿದ್ದರು. ಸಾಮಾನ್ಯ ಸ್ವರೂಪದ ಮೂತ್ರ ನಿಯಂತ್ರಣವು ಅವರಿಂದ ಸಾಧ್ಯವಿರಲಿಲ್ಲ. ಸುಮಾರು 12 ವರ್ಷಗಳಲ್ಲಿ, ಅವರು 19 ಶಸ್ತ್ರಚಿಕಿತ್ಸೆ ಗಳಿಗೆ ಒಳಗಾಗಿದ್ದರು. ಆದರೆ, ನಿರಂತರ ಸೋರಿಕೆ, ಮರುಕಳಿಸುವ ಸೋಂಕುಗಳು, ದೀರ್ಘಕಾಲದ ನೋವು ಮತ್ತು ಸಾಮಾಜಿಕ ಪ್ರತ್ಯೇಕತೆಯಿಂದ ಬಳಲುತ್ತಿದ್ದರು.
ಈ ಸ್ಥಿತಿಯು ತಕ್ಷಣವೇ ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ವಿಳಂಬ ಅಥವಾ ಅಸಮರ್ಪಕ ಚಿಕಿತ್ಸೆಯು ಮೂತ್ರಪಿಂಡ ವೈಫಲ್ಯ, ತೀವ್ರ ಸ್ವರೂಪದ ಸೋಂಕುಗಳು ಮತ್ತು ಮಾನಸಿಕ ಆಘಾತಕ್ಕೆ ಕಾರಣವಾಗಬಹುದು. ನಾವು ನಡೆಸಿದ ಈ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ, ಅವರು ಮುಕ್ತವಾಗಿ ಸಂಚರಿಸಲು, ಆತ್ಮವಿಶ್ವಾಸ ದಿಂದ ಕೆಲಸ ಮಾಡಲು ಮತ್ತು ಘನತೆಯಿಂದ ಬದುಕಲು ಸಾಧ್ಯವಾಗ ಲಿದೆ" ಎಂದು ಹೇಳಿದ್ದಾರೆ.
ತಾವು ಅನುಭವಿಸುತ್ತಿದ್ದ ದೀರ್ಘಕಾಲದ ನೋವಿಗೆ ಪರಿಹಾರ ಒದಗಿಸಿದ ವೈದ್ಯರ ತಂಡಕ್ಕೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿರುವ ರೋಗಿಯು ಪ್ರತಿಕ್ರಿಯಿಸಿ, "ನಾನು ಇದುವರೆಗಿನ ನನ್ನ ಬದುಕಿನ ಬಹುತೇಕ ಸಮಯವನ್ನು ಭಯ ಮತ್ತು ಅವಮಾನದಲ್ಲಿಯೇ ಕಳೆದಿರುವೆ. ಈ ಶಸ್ತ್ರಚಿಕಿತ್ಸೆಯ ನಂತರ, ನಾನು ನನ್ನ ಸಮಸ್ಯೆಯಿಂದ ಅಂತಿಮವಾಗಿ ಮುಕ್ತನಾಗಿದ್ದೇನೆ. ಇನ್ನು ಮುಂದೆ ನಾನು ಆತ್ಮವಿಶ್ವಾಸದಿಂದಲೇ ಹೊರಗೆ ಹೆಜ್ಜೆ ಹಾಕಬಹುದು, ಕೆಲಸ ಮಾಡಬಹುದು ಮತ್ತು ಯಾವುದೇ ಹಿಂಜರಿಕೆ ಇಲ್ಲದೆ ಜನರ ಜೊತೆ ಬರೆಯಬಹುದು. ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ಸಾಮಾನ್ಯನೆಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ರತೀಫ್ ನಾಯಕ್ ಅವರು ಮಾತನಾಡಿ, "ಈ ಪ್ರಕರಣವು ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯಲ್ಲಿನ ನಮ್ಮ ಬಹುಶಿಸ್ತೀಯ, ರೋಗಿ-ಕೇಂದ್ರಿತ ಚಿಕಿತ್ಸಾ ವಿಧಾನದ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ವರ್ಷಗಳ ಕಾಲ ದೈಹಿಕ ಮತ್ತು ಭಾವನಾತ್ಮಕ ನೋವನ್ನು ಸಹಿಸಿಕೊಂಡ ರೋಗಿಯಲ್ಲಿ ಸ್ವಾತಂತ್ರ್ಯ, ಆತ್ಮವಿಶ್ವಾಸ ಮತ್ತು ಘನತೆ ಪುನಃಸ್ಥಾಪಿಸಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಇಂತಹ ಯಶಸ್ವಿ ಫಲಿತಾಂಶಗಳು ಅಪರೂಪದ, ಹೆಚ್ಚು ಸಂಕೀರ್ಣವಾದ ಮೂತ್ರಪಿಂಡದ ಅಸ್ವಸ್ಥತೆಗಳನ್ನು ನಿರ್ವಹಿಸುವಲ್ಲಿನ ನಮ್ಮ ಪರಿಣತಿಯನ್ನು ಬಲಪಡಿಸಲಿವೆ. ಮೂತ್ರಪಿಂಡದ ಸುಧಾರಿತ ಪುನರ್‌ನಿರ್ಮಾಣಕ್ಕೆ ಉಲ್ಲೇಖ ಕೇಂದ್ರವಾಗಿ ನಮ್ಮ ಆಸ್ಪತ್ರೆಯು ಹೆಚ್ಚು ಗಮನ ಸೆಳೆಯಲಿದೆʼ ಎಂದು ಹೇಳಿದ್ದಾರೆ.