ತುಮಕೂರು: ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ಇತ್ತೀಚೆಗೆ 44 ನವಿಲುಗಳು ಸಾವನ್ನಪ್ಪಿದ್ದು, ಹಕ್ಕಿಜ್ವರ H5N1 ಸೋಂಕು (Bird flu) ದೃಢಪಟ್ಟಿದೆ. ಏಪ್ರಿಲ್ 16 ರಂದು ಘಟನೆ ಮೊದಲಿಗೆ ವರದಿಯಾಗಿತ್ತು. ತದನಂತರ ಒಂದು ವಾರದ ಅವಧಿಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 44 ನವಿಲುಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದವು. ಇದೀಗ ಅದೇ ವ್ಯಾಪ್ತಿಯಲ್ಲಿ ಕೋಳಿಗಳ ಸಾವೂ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಸಾವನ್ನಪ್ಪಿದ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ಪರಿಶೀಲನೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ತಾಪಮಾನ ಏರುತ್ತಿದ್ದ ಕಾರಣ, ಅತಿಯಾದ ಶಾಖ ಮತ್ತು ನಿರ್ಜಲೀಕರಣದಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು. ಆದರೆ ನಂತರ ಬಂದ FSL ವರದಿಯಲ್ಲಿ ಹಕ್ಕಿ ಜ್ವರದ ಸೋಂಕಿನಿಂದಲೇ ನವಿಲುಗಳು ಸಾವನ್ನಪ್ಪಿವೆ ಎಂದು ದೃಢಪಟ್ಟಿದೆ. ಇದೀಗ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ಏಕಾಕಾಲದಲ್ಲಿ ಸುಮಾರು 30 ಕೋಳಿಗಳು ಸಾವನ್ನಪ್ಪಿದ್ದು, ಈ ಘಟನೆ ಹಕ್ಕಿಜ್ವರದ ಅನುಮಾನಕ್ಕೆ ಕಾರಣವಾಗಿದೆ. ಪಶು ಸಂಗೋಪನಾ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ.
ಮೃತಪಟ್ಟ ನವಿಲುಗಳಿಂದ ಸಂಗ್ರಹಿಸಲಾದ ಮಾದರಿಗಳನ್ನು ಭೋಪಾಲ್‌ನಲ್ಲಿರುವ ICAR (National Institute of High Security Animal Diseases)ಕಳುಹಿಸಲಾಗಿತ್ತು. ಇದು H5N1 ಸಾವಿಗೆ ಕಾರಣ ಎಂದು ದೃಢಪಡಿಸಿದೆ. ಸೋಂಕನ್ನು ತಡೆಗಟ್ಟಲು ಅರಣ್ಯ ಇಲಾಖೆಯು ಆರೋಗ್ಯ ಮತ್ತು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ.
ರಾಜ್ಯದ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದೆ. ತುಮಕೂರು ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ. ಆ ಕ್ರಮಗಳ ಭಾಗವಾಗಿ ಕಲ್ಲಳ್ಳಿ ಸೇರಿ ಆ 5 ಗ್ರಾಮಗಳನ್ನು ಕಂಟೋನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಚಿಕನ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.