ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ 19 ಕಡೆ ಇಡಿ ದಾಳಿ
ಸೂಕ್ತ ದಾಖಲೆಗಳಿಲ್ಲದೆ ಚಿನ್ನ ಖರೀದಿಸಿದ ಆರೋಪ
ಮುಖ್ಯಸ್ಥ ಬಾಬು ಸೇರಿ ಕಂಪನಿ ಪ್ರಮುಖರು ನಾಪತ್ತೆ
ಬೆಂಗಳೂರು: ರಾಜ್ಯದ ಪ್ರಮುಖ ಚಿನ್ನ ಖರೀದಿ ಸಂಸ್ಥೆಗಳಲ್ಲಿ ಒಂದಾದ ಅಟ್ಟಿಕಾ ಗೋಲ್ಡ್ ಕಂಪನಿಗೆ ಮತ್ತೆ ಭಾರೀ ಸಂಕಷ್ಟ ಎದುರಾಗಿದೆ. ಕಳ್ಳತನವಾದ ಚಿನ್ನದ ಆಭರಣಗಳನ್ನು ಕಾನೂನು ಬಾಹಿರವಾಗಿ ಖರೀದಿ ಮಾಡಿ ಅಕ್ರಮವಾಗಿ ಹಣ ವರ್ಗಾಯಿಸಿದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ಕೈಗೊಂಡ ಬೆನ್ನ, ಶುಕ್ರವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 19ಕ್ಕೂ ಹೆಚ್ಚು ಕಡೆಗಳಲ್ಲಿ ಬೃಹತ್ ದಾಳಿ ನಡೆಸಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಅಟ್ಟಿಕಾ ಗೋಲ್ಡ್‌ನ ಒಟ್ಟು 19ಕ್ಕೂ ಹೆಚ್ಚು ಕಚೇರಿ, ಶೋರೂಂ ಹಾಗೂ ಮಾಲೀಕರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಒಟ್ಟಾಗಿ ಕಾರ್ಯಾ ಚರಣೆ ನಡೆಸಿದ್ದಾರೆ. ಅಟ್ಟಿಕಾ ಗೋಲ್ಡ್ ಸಂಸ್ಥೆಯು ಸಾರ್ವಜನಿಕರಿಂದ ಹಳೆಯ ಚಿನ್ನವನ್ನು ಪಡೆದು ತಕ್ಷಣದ ನಗದು ನೀಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಹಲವು ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.
ಇದನ್ನೂ ಓದಿ: Muthoot Gold Point: ಬೆಂಗಳೂರಿನಲ್ಲಿ ಮುತ್ತೂಟ್ ಗೋಲ್ಡ್ ಪಾಯಿಂಟ್‌ನ 9ನೇ ಶಾಖೆ ಆರಂಭ
ಚಿನ್ನದ ಅಕ್ರಮ ಸಾಗಣೆ ಆರೋಪ: ಕಳವು ಮಾಡಿದ ಹಾಗೂ ಅಕ್ರಮ ಮಾರ್ಗದಲ್ಲಿ ತಂದ ಚಿನ್ನವನ್ನು ಸೂಕ್ತ ದಾಖಲೆಗಳಿಲ್ಲದೆ ಖರೀದಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಇತ್ತೀಚೆಗೆ ದಾಳಿ ನಡೆಸಿ, ಪ್ರಮುಖ ದಾಖಲೆ ಗಳು ಹಾಗೂ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ಪಡೆದುಕೊಂಡಿತ್ತು. ನಗದು ರೂಪದ ಕೋಟ್ಯಂತರ ರೂ. ವ್ಯವಹಾರ ನಡೆಸಿ, ನೈಜ ಆದಾಯವನ್ನು ಮರೆಮಾಚಿ ತೆರಿಗೆ ವಂಚಿಸಲಾಗಿದೆ ಎಂಬ ಅನುಮಾನದ ಮೇರೆಗೆ ಐಟಿ ಇಲಾಖೆ ಈಗ ಅಖಾಡಕ್ಕಿಳಿದಿದೆ.
16 ಕಡೆ ಇಡಿ ದಾಳಿ: ಸೆ.23 ಮತ್ತು 24ರಂದು ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ವಿಶಾಖ ಪಟ್ಟಣಂನಲ್ಲಿರುವ ಕಂಪನಿಯ ಮುಖ್ಯ ಕಚೇರಿ, ಶಾಖೆಗಳು ಮತ್ತು ನಿರ್ದೇಶಕರ ನಿವಾಸಗಳು ಸೇರಿದಂತೆ ಒಟ್ಟು 16 ಸ್ಥಳಗಳ ಮೇಲೆ ಏಕಕಾಲಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೋಧನೆ ನಡೆಸಿದ್ದರು.
ವಿವಿಧ ಪೊಲೀಸ್ ಠಾಣೆಗಳಲ್ಲಿ ಸಾಗರೋಪಾದಿಯಲ್ಲಿ ದಾಖಲಾಗಿದ್ದ ಎಫ್ಐಆರ್, ದೋಷರೋಪ ಪಟ್ಟಿ ಆಧಾರದ ಮೇಲೆ ಈ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಪರಾಧ ಚಟುವಟಿಕೆಗಳಿಂದ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪ ಹೊತ್ತಿರುವ ಕಂಪನಿಯ ಮುಖ್ಯಸ್ಥ ಪಿ.ಎಸ್.ಆಯೂಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು, ಉಬೇದು ಎ., ಮೊಹಮ್ಮದ್ ಸಲ್ಮಾನ್ ಎ., ಅರ್ಬಿನ್ ತಾಜ್ ಎ. ಸೇರಿದಂತೆ ಪ್ರಮುಖರು ಮತ್ತು ಸಿಬ್ಬಂದಿಗಳು ವಿಚಾರಣೆಗೆ ಸಹಕರಿಸದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು 7.52 ಲಕ್ಷ ನಗದು ರು. ಹಣ, ವಿದೇಶಿ ಕರೆನ್ಸಿ, ಭಾರಿ ಪ್ರಮಾಣದ ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.