ಬೆಂಗಳೂರು, ನ.8: ನಗರದ ಅನಕೃ ಪ್ರತಿಷ್ಠಾನ ಕೊಡಮಾಡುವ ಅನಕೃ ಪ್ರಶಸ್ತಿ (2024-2025) ಗೆ ಪ್ರೊ. ಎಲ್.ವಿ. ಶಾಂತಕುಮಾರಿ ಹಾಗೂ ಶತಾವಧಾನಿ ಆರ್. ಗಣೇಶ್ ಆಯ್ಕೆಯಾಗಿದ್ದಾರೆ. ಈ ಬಾರಿ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭವು (Anakru Award) ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ 5ನೇ ಕನ್ನಡ ಪುಸ್ತಕ ಹಬ್ಬ ವೇದಿಕೆಯಲ್ಲಿ ನಡೆಯಲಿದೆ. ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 9 ರಂದು ಸಂಜೆ 5 ಗಂಟೆಗೆ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಲೇಖಕ, ʼಪ್ರೇಕ್ಷಾʼ ಅಂತರ್ಜಾಲ ಪತ್ರಿಕೆಯ ಸಹಸಂಪಾದಕ ಶಶಿಕಿರಣ ಬಿ.ಎನ್. ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮಾಜಿ ಅಡ್ವೊಕೇಟ್ ಜನರಲ್, ನ್ಯಾಯವಾದಿ ಅಶೋಕ್ ಹಾರನಹಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾದಂಬರಿ ಸಾರ್ವಭೌಮ ಎಂದೇ ಖ್ಯಾತಿ ಪಡೆದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರ ಹೆಸರಿನಡಿಯಲ್ಲಿ ಕೊಡ ಮಾಡುವ ಈ ಪ್ರಶಸ್ತಿಯು ಸಾಹಿತ್ಯ ಕ್ಷೇತ್ರದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದು.
ಪ್ರೊ. ಎಲ್.ವಿ. ಶಾಂತಕುಮಾರಿ ಅವರ ಪರಿಚಯ
2024ನೇ ಸಾಲಿನ ಅನಕೃ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದ ಜೀವಮಾನ ಸಾಧನೆಗಾಗಿ ಪ್ರೊ. ಎಲ್.ವಿ. ಶಾಂತಕುಮಾರಿ ಆಯ್ಕೆಯಾಗಿದ್ದಾರೆ. ಪ್ರೊ. ಎಲ್.ವಿ. ಶಾಂತಕುಮಾರಿ ಅವರು ನಾಡಿನ ಹಿರಿಯ ವಿಮರ್ಶಕರು, ಅನುವಾದಕರಾಗಿದ್ದಾರೆ. ಸ್ಮೃತಿ ಚರಿತ್ರೆ, ಜೀವನಚರಿತ್ರೆಗಳೂ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳನ್ನು ಸಮೃದ್ಧಗೊಳಿಸಿದ್ದಾರೆ. ಋಜುತೆ, ಮೌಲ್ಯನಿಷ್ಠೆ, ವ್ಯಾಪಕ ಚಿಂತನೆ, ತೌಲನಿಕ ಅಧ್ಯಯನ ಇವರ ಎಲ್ಲಾ ಬರಹಗಳ ಗುಣಲಕ್ಷಣ. ʼಯುಗಸಾಕ್ಷಿʼ ʼಪ್ರತಿಭಾನʼ ತಾಯ್ತನದ ತೆರೆಗಳು ಎಂಬ ವಿಮರ್ಶ ಸಂಪುಟಗಳು ಭೈರಪ್ಪನವರ ಕೃತಿಗಳ ಅಧ್ಯಯನಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟು ಹೊಸತೊಂದು ಸಂಚಲನವನ್ನೇ ಮೂಡಿಸಿವೆ. ಭೈರಪ್ಪನವರ ಕಾದಂಬರಿಗಳ ವಿವೇಚನೆಗೆ ಇವರ ಕೃತಿಗಳು ಅನಿವಾರ್ಯ ಆಲಂಬನಗಳಾಗಿವೆ. ಸಹಜವಾತ್ಸಲ್ಯದ ಮಾತೃಮೂರ್ತಿ ಶಾಂತಕುಮಾರಿ ಸಾಹಿತ್ಯದಿಂದೊದಗುವ ಜೀವೋನ್ನತ್ತಿಗೆ ಪ್ರತ್ಯಕ್ಷ ನಿದರ್ಶನವಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Kannada Rajyotsava award 2025: ಪ್ರಕಾಶ್ ರಾಜ್ ಸೇರಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಪ್ರಶಸ್ತಿಗೆ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ ಎಂದ ಸಿಎಂ
ಶತಾವಧಾನಿ ಡಾ. ಆರ್ ಗಣೇಶ್ ಅವರ ಪರಿಚಯ
2025ನೇ ಸಾಲಿನ ಅನಕೃ ಪ್ರಶಸ್ತಿಗೆ ಶತಾವಧಾನಿ ಡಾ. ಆರ್ ಗಣೇಶ್ ಆಯ್ಕೆಯಾಗಿದ್ದಾರೆ. ಡಾ. ಆರ್ ಗಣೇಶ್ ಅವರು ನಾಡಿನ ಏಕೈಕ ಶತಾವಧಾನಿಗಳು ಹಾಗೂ ಬಹುಶ್ರುತ ಕವಿ-ವಿದ್ವಾಂಸರು. ಇದುವರೆಗೆ ಸಾವಿರದ ಮುನ್ನೂರಕ್ಕೂ ಹೆಚ್ಚು ಅಷ್ಟಾವಧಾನಗಳನ್ನೂ ಐದು ಶತಾವಧಾನಗಳನ್ನೂ ದೇಶ-ವಿದೇಶಗಳಲ್ಲಿ ನಿರ್ವಹಿಸಿದ ಖ್ಯಾತಿ ಇವರದ್ದು. ವಿವಿಧ ವಿಷಯಗಳನ್ನು ಆಧರಿಸಿ ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಇವರು ಬುದ್ಧಿ-ಭಾವಗಳ ಬಿರುಕಿಲ್ಲದ ಬೆಸುಗೆ ಎನ್ನಿಸಿದ್ದಾರೆ. ಕಾವ್ಯ, ಸಣ್ಣಕತೆ, ಕಾದಂಬರಿ, ಸಂಶೋಧನೆ, ವ್ಯಕ್ತಿಚಿತ್ರ, ಜೀವನಚರಿತ್ರೆ, ಅನುವಾದ, ವಿಮರ್ಶೆ, ಗ್ರಂಥಸಂಪಾದನೆ ಮೊದಲಾದ ಸಾಹಿತ್ಯಪ್ರಕಾರಗಳು ಇವರ ಬರಹಗಳಿಂದ ಮೆರಗನ್ನು ಕಂಡಿದೆ. ಅಲಂಕಾರಶಾಸ್ತ್ರ, ಛಂದಃಶಾಸ್ತ್ರ, ಅಧ್ಯಾತ್ಮ, ಸಂಸ್ಕೃತಿ ಹೀಗೆ ಹಲವಾರ ವಿಷಯಗಳ ಕುರಿತು ಇವರ ಕೃತಿಗಳು ಪಥದರ್ಶಕಗಳಾಗಿದೆ.