ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿಬಿಎ ಚುನಾವಣೆ; ನಾಳೆಯಿಂದ 369 ವಾರ್ಡ್‌ಗಳ ಆಕಾಂಕ್ಷಿಗಳ ಅರ್ಜಿ ಸ್ವೀಕಾರ: ಡಿ.ಕೆ. ಶಿವಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಮತ ಕಳ್ಳತನ ವಿರುದ್ಧ ನಾವು ಆರಂಭಿಸಿರುವ ಹೋರಾಟ ಮುಂದುವರಿಯಲಿದೆ. ಪ್ರತಿ ಕ್ಷೇತ್ರದಲ್ಲಿ ನಾವು ಲೀಗಲ್ ಬ್ಯಾಂಕ್ ಸ್ಥಾಪಿಸುತ್ತೇವೆ. ನಮ್ಮ ಪಕ್ಷದ ಪರ ಇರುವ ವಕೀಲರನ್ನು ಇದರಲ್ಲಿ ಸೇರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್‌ ಸುದ್ದಿಗೋಷ್ಠಿ.

ಬೆಂಗಳೂರು, ಡಿ.14: "ನಾಳೆಯಿಂದ ಜಿಬಿಎ ಚುನಾವಣೆಗೆ ಅರ್ಜಿ ಸ್ವೀಕಾರ ಮಾಡಲಾಗುವುದು. ಮೀಸಲಾತಿ ಇನ್ನು ಅಂತಿಮವಾಗಿಲ್ಲವಾದರೂ 369 ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಯಾರಿಗೆಲ್ಲಾ ಆಸಕ್ತಿ ಇದೆ ಎಂದು ತಿಳಿಯಲು ಅರ್ಜಿ ಕರೆಯಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಶಿವಕುಮಾರ್ ಅವರು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

"ನೆನ್ನೆ ಸಚಿವರ ಜತೆ ಚರ್ಚಿಸಿ ಈ ಅರ್ಜಿ ಜತೆಗೆ ಪಡೆಯುವ ಹಣವನ್ನು ಪಕ್ಷದ ಕಟ್ಟಡ ನಿಧಿಗೆ ಬಳಸಲು ತೀರ್ಮಾನಿಸಿದ್ದು, ಸಾಮಾನ್ಯವರ್ಗಕ್ಕೆ 50 ಸಾವಿರ ಹಾಗೂ ಮಹಿಳೆಯರು ಹಾಗೂ ಪರಿಶಿಷ್ಟ ಸಮುದಾಯದವರಿಗೆ 25 ಸಾವಿರ ರೂ. ನಿಗದಿಪಡಿಸಲಾಗಿದೆ. ಆನ್ಲೈನ್ ಅರ್ಜಿ ಹಾಕಲು ಅವಕಾಶ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.

ಮತ ಕಳ್ಳತನ ವಿರುದ್ಧದ ಹೋರಾಟ ಮುಂದುವರಿಯಲಿದೆ:

ಮತ ಕಳ್ಳತನ ವಿರುದ್ಧದ ಹೋರಾಟ ಇಲ್ಲಿಗೆ ಮುಗಿಯುವುದೇ ಎಂದು ಕೇಳಿದಾಗ, "ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಮತ ಕಳ್ಳತನ ವಿರುದ್ಧ ನಾವು ಆರಂಭಿಸಿರುವ ಹೋರಾಟ ಮುಂದುವರಿಯಲಿದೆ. ಪ್ರತಿ ಕ್ಷೇತ್ರದಲ್ಲಿ ನಾವು ಲೀಗಲ್ ಬ್ಯಾಂಕ್ ಸ್ಥಾಪಿಸುತ್ತೇವೆ. ನಮ್ಮ ಪಕ್ಷದ ಪರ ಇರುವ ವಕೀಲರನ್ನು ಇದರಲ್ಲಿ ಸೇರಿಸಲಾಗುವುದು. ಇವರು ನಮ್ಮ ಕಾರ್ಯಕರ್ತರಿಗೆ ಕಾನೂನು ಸಲಹೆ ನೀಡಲಾಗುವುದು.

ಜಿ.ಸಿ.ಚಂದ್ರಶೇಖರ್ ಅವರು ಬಿಎಲ್‌ಎ ಗುರುತಿನ ಚೀಟಿ ನೀಡಲು ತಯಾರು ಮಾಡಿಕೊಂಡಿದ್ದಾರೆ. ಎಐಸಿಸಿಯಿಂದ ಒಪ್ಪಿಗೆ ಪಡೆಯಲು ತೆಗೆದುಕೊಂಡು ಹೋಗಲಾಗುವುದು. ನಾವು ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸಹಿ ಸಂಗ್ರಹ ಮಾಡಿದ್ದೇವೆ.

ಜನರ ಉತ್ಸಾಹ ಮುಂದಿನ ಚುನಾವನೆಗಳಿಗೆ ನಾಂದಿ:

ಇಂದಿನ ಪ್ರತಿಭಟನೆಯಲ್ಲಿ ಜನರಲ್ಲಿ ಇದ್ದ ಉತ್ಸಾಹ 2028 ಹಾಗೂ 2029ರ ಚುನಾವಣೆಗೆ ನಾಂದಿಯಾಡಿದೆ. ಈ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಇದೆ ಎಂದು ಪಕ್ಷ ಉಳಿಸಿಕೊಳ್ಳಲು ಕಾರ್ಯಕರ್ತರು ಸಜ್ಜಾಗಿದ್ದಾರೆ. ಇದರಿಂದ ಸಂತೋಷವಾಗಿದೆ, ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದೆ. ಅಧಿಕಾರ ಸಿಗದ ಕಾರ್ಯಕರ್ತರು ಕೂಡ ತಮ್ಮ ಹಣದಲ್ಲಿ ಈ ಪ್ರತಿಭಟನೆಗೆ ಆಗಮಿಸಿದ್ದಾರೆ.

ನಗರ ಭಾಗದಲ್ಲಿ ಮತ ಕಳ್ಳತನ ಹೆಚ್ಚಾಗಿದೆ ಎಂದು ಕೇಳಿದಾಗ, "ಆಳಂದ ಕ್ಷೇತ್ರದಲ್ಲಿ ಹಳ್ಳಿಗಳಲ್ಲಿ ಹೊರ ರಾಜ್ಯಗಳ ಫೋನ್ ನಂಬರ್ ಬಳಸಿ ಮತದಾರರ ಹೆಸರು ತೆಗೆಸಲಾಗಿದೆ" ಎಂದು ತಿಳಿಸಿದರು.

ನನ್ನನ್ನು ನೋಡಿದರೆ ನಮ್ಮ ನಾಯಕರು ಕುಶಲೋಪರಿ ವಿಚಾರಿಸುತ್ತಾರೆ

ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, "ನಮ್ಮ ನಾಯಕರಿಗೆ ನನ್ನನ್ನು ನೋಡಿದ ತಕ್ಷಣ ಅರ್ಥವಾಗುತ್ತದೆ. ನನ್ನ ಕುಶಲೋಪರಿ ವಿಚಾರಿಸುತ್ತಾರೆ. ಇದು ಸೌಹಾರ್ದಯುತ ಭೇಟಿ, ವೈಯಕ್ತಿಕ ಭೇಟಿ ಅಲ್ಲ. ಇದರ ಹೊರತಾಗಿ ಬೇರೆ ವಿಚಾರಗಳನ್ನು ನಿಮ್ಮ ಮುಂದೆ ಬಹಿರಂಗಪಡಿಸಲು ಆಗುವುದಿಲ್ಲ. ಅದರ ಅವಶ್ಯಕತೆ ಇಲ್ಲ" ಎಂದರು.

ಬಹಳ ವರ್ಷಗಳ ನಂತರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೀರಿ ಎಂದು ಕೇಳಿದಾಗ, "ಇದು ಸುಳ್ಳು, ನಾವು ಭೇಟಿಯಾಗಿದ್ದಾಗ ಹೇಳಿಕೊಳ್ಳುವುದಿಲ್ಲ" ಎಂದರು.

ಇಂದಿನ ಭೇಟಿಯಲ್ಲಿ ನಿಮಗೆ ಅಭಯ ಸಿಕ್ಕಿದೆಯಂತೆ, ಸಮಸ್ಯೆ ಬಗೆಹರಿಯಲಿದೆ ಎಂದು ಕೇಳಿದಾಗ, "ನಿಮ್ಮ ಅರ್ಥ ಏನಿದೆಯೋ, ನನಗೆ ಯಾವ ಸಮಸ್ಯೆ ಇಲ್ಲ. ನೀವು (ಮಾಧ್ಯಮಗಳು) ಸಮಸ್ಯೆ ಸೃಷ್ಟಿಸುತ್ತಿದ್ದೀರಿ" ಎಂದು ಹೇಳಿದರು.

ನಾಳೆ ಹೈಕಮಾಂಡ್ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, "ನಾಳೆ ದೆಹಲಿ ಪೊಲೀಸರ ನೋಟೀಸ್ ಗೆ ಉತ್ತರ ನೀಡಬೇಕು. ನಾಯಕರ ಭೇಟಿ ಬಗ್ಗೆ ನೋಡೋಣ. ನಿಮಗೆ ತಿಳಿಸುತ್ತೇನೆ" ಎಂದರು.