ಬೆಂಗಳೂರು: ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ಹಾಗೂ ಮಾನವ ಸಂಪನ್ಮೂಲ (ಎಚ್‌ಆರ್) ನಿಯಮ ಉಲ್ಲಂಘಿಸಿ ಗ್ರೂಪ್ 'ಎ' ವೃಂದದ ಎ. ಆರ್. ರವಿ ಅವರನ್ನು ( ಗೆಜೆಟೆಡ್ ಅಧಿಕಾರಿ) ನೇಮಿಸಲಾಗಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ.
ಹಣಕಾಸು ಇಲಾಖೆ 2022ರ ನ.25ರಂದು ಅನುಮೋದಿಸಿದ ಮಾನವ ಸಂಪನ್ಮೂಲ ಮಾದರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2023ರ ಜ.11ರಂದು ಹೊರಡಿಸಿದ ಸರ್ಕಾರಿ ಆದೇಶ ಪ್ರಕಾರ, ಕೆಎಸ್‌ಎಂಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ನಿಯೋಜನೆ ಆಧಾರದ ಮೇಲೆ ಐಎಎಸ್ ಅಧಿಕಾರಿಗೆ ಮೀಸಲಾಗಿರಬೇಕು. ಆದರೆ, ನಿಯಮ ಮೀರಿ ರವಿ ಅವರನ್ನು ಎಂಡಿ ಹುದ್ದೆಗೆ ನೇಮಿಸಲಾಗಿದೆ. ಹಾಗಾಗಿ, ಈ ನೇಮಕಾತಿಯನ್ನು ತಕ್ಷಣ ರದ್ದುಗೊಳಿಸಿ ಐಎಎಸ್ ಅಧಿಕಾರಿಯನ್ನು ನೇಮಿಸಬೇಕೆಂದು ರಾಜ್ಯಪಾಲರಿಗೆ, ಇ-ಮೇಲ್ ಮೂಲಕ ಕೊಟ್ಟಿರುವ ದೂರಿ ನಲ್ಲಿ ಬಿ.ವಿ.ಗೌತಮ್ ಎಂಬುವರು ಉಲ್ಲೇಖಿಸಿದ್ದಾರೆ.
ಔಷಧಗಳು, ವೈದ್ಯಕೀಯ ಉಪಕರಣಗಳ ಖರೀದಿ, ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವ ಪ್ರಮುಖ ಜವಾಬ್ದಾರಿಯನ್ನು ನಿಗಮ ಹೊಂದಿದೆ.2022ರ ನ.25ರಂದು ಹಣಕಾಸು ಇಲಾಖೆಯು, ನಿಗಮಕ್ಕೆ ಒಟ್ಟು 331 ಹುದ್ದೆಗಳನ್ನು (ಮುಖ್ಯ ಕಚೇರಿಗೆ 83 ಮತ್ತು ಉಗ್ರಾಣಗಳಿಗೆ 248) ಮಂಜೂರು ಮಾಡಿ ಮಾನವ ಸಂಪನ್ಮೂಲ ಮಾದರಿಯನ್ನು ಅನುಮೋದಿಸಿತ್ತು. ಇದರಲ್ಲಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ನಿಯೋಜನೆ ಆಧಾರದಲ್ಲಿ ಐಎಎಸ್ ಅಧಿಕಾರಿಯನ್ನೇ ಭರ್ತಿ ಮಾಡಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು.
ಈ ಅನುಮೋದನೆ ಆಧಾರದಲ್ಲಿ ಆರೋಗ್ಯ ಇಲಾಖೆಯು 2023ರ ಜ.11ರಂದು ಸರ್ಕಾರಿ ಆದೇಶ ಹೊರಡಿಸಿ, ಎಂಡಿ ಹುದ್ದೆಯು ‘ಐಎಎಸ್’ ವೃಂದದ ಹುದ್ದೆಯಾಗಿದ್ದು, ನಿಯೋಜನೆ ಮೂಲಕವೇ ಭರ್ತಿ ಮಾಡಬೇಕೆಂದು ಅಧಿಕೃತಗೊಳಿಸಿತ್ತು ಎಂದು ದೂರುದಾರರು ದೂರಿನಲ್ಲಿ ವಿವರಿಸಿದ್ದಾರೆ.
ಸರ್ಕಾರದಿಂದ ವಿವರ ಪಡೆಯಿರಿ: 2026ರ ಫೆ.20ರ ಆದೇಶದಂತೆ, ಟೆಂಡರ್ ಸ್ವೀಕಾರ ಸಮಿತಿಯ ಅಧ್ಯಕ್ಷರಾಗಿ ಕಮಿಷನರ್ ದರ್ಜೆಗಿಂತ ಮೇಲ್ಪಟ್ಟ ಐಎಎಸ್ ಅಧಿಕಾರಿ ಇರಬೇಕು. ಆದರೆ, ಐಎಎಸ್ ಅಧಿಕಾರಿಯಲ್ಲದವರ ನೇಮಕದಿಂದ ಆಡಳಿತಾತ್ಮಕ ಪಾರದರ್ಶಕತೆ ಮತ್ತು ಜವಾಬ್ದಾರಿಗೆ ಧಕ್ಕೆಯುಂಟಾಗುತ್ತದೆ. ಹಾಗಾಗಿ, ರವಿ ಅವರ ನೇಮಕಾತಿ ಕುರಿತು ರಾಜ್ಯ ಸರ್ಕಾರದಿಂದ ತಕ್ಷಣವೇ ವಿವರ ಪಡೆಯಬೇಕು. ನಿಯಮಾವಳಿ ಉಲ್ಲಂಘನೆಗೆ ಅವಕಾಶ ನೀಡಿದ ಯಾವುದೇ ತಿದ್ದುಪಡಿ ಅಥವಾ ಅನುಮೋದಿತ ಸರ್ಕಾರಿ ಆದೇಶಗಳಿದ್ದರೆ ಅದನ್ನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು.
ನಿಯಮ ಪ್ರಕಾರ ಐಎಎಸ್ ಅಧಿಕಾರಿಯನ್ನು ತಕ್ಷಣವೇ ಎಂಡಿ ಹುದ್ದೆಗೆ ನೇಮಿಸಲು ಶಿಫಾರಸು ಮಾಡಬೇಕು. ಈ ಅಕ್ರಮ ನೇಮಕಾತಿಯ ಹಿಂದಿನ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ದೂರುದಾರರು ರಾಜ್ಯಪಾಲರನ್ನು ಮನವಿ ಮಾಡಿದ್ದಾರೆ. ಎಂಡಿ ಹುದ್ದೆಗೆ ಐಎಎಸ್ ಅಧಿಕಾರಿಯನ್ನೇ ನೇಮಿಸಬೇಕು ಎಂಬ ನಿಯಮವನ್ನು ಮಾರ್ಪಡಿಸುವ ಯಾವುದೇ ಸರ್ಕಾರಿ ಆದೇಶ, ಗೆಜೆಟ್ ಅಧಿಸೂಚನೆ, ಡಿಪಿಎಆಆರ್ ಆದೇಶ ಅಥವಾ ಸಂಪುಟದ ಅನುಮೋದನೆ ಲಭ್ಯವಿಲ್ಲ.
ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ವಿನಿಯೋಗಿಸಿ ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡುವ ಪ್ರಮುಖ ಸಂಸ್ಥೆಯಲ್ಲಿ ನಿಯಮ ಮೀರಿ ನೇಮಕಾತಿ ಮಾಡಿರುವುದು ಆಡಳಿತಾತ್ಮಕ ಪಾರದರ್ಶಕತೆ, ಜವಾಬ್ದಾರಿ,ಕಾನೂನಿನ ಆಡಳಿತಕ್ಕೆ ಧಕ್ಕೆ ತರಲಿದೆ ಎಂದು ದೂರುದಾರರು ಆತಂಕ ವ್ಯಕ್ತಪಡಿಸಿದ್ದಾರೆ.