ಬಾಂಗ್ಲಾಅಕ್ರಮ ವಲಸಿಗರ ದೂರು ಆಧರಿಸಿ ನಗರದ ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರೊಬ್ಬರ ವಿರುದ್ಧ ಹಲ್ಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳಡಿ ಎರಡು ಎಫ್‌ಐಆರ್ ದಾಖಲಿಸಿದ ಪೊಲೀಸರ ನಡೆಯನ್ನು ಹೈಕೋರ್ಟ್ ಮಂಗಳವಾರ(ಜು.28) ತೀವ್ರ ತರಾಟೆಗೆ ತೆಗೆದುಕೊಂಡಿದೆ. ನಾಗೇಂದ್ರ ಎಂಬುವರು ಜುಲೈ 22ರ ರಾತ್ರಿ 11.30ಕ್ಕೆ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ದೂರು ನೀಡಿದ್ದರು. ಬಳಿಕ ಅಂದೇ 11.45ಕ್ಕೆ ದೂರು ನೀಡಿದ್ದ ನಾಗೇಂದ್ರ ವಿರುದ್ಧವೇ ಕೇಸ್ ದಾಖಲಿಸಿ ಬಂಧಿಸಲಾಗಿತ್ತು.
ಈ ಪ್ರಕರಣ ರದ್ದುಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಬೆಳ್ಳಂದೂರು ಪೊಲೀಸರ ಈ ನಡೆಗೆ ಅಸಮಾಧಾನಗೊಂಡಿದೆ. ಇದು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ. ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನೆಸಿ ಅರ್ಜಿದಾರರ ವಿರುದ್ಧದ ಕೇಸ್ಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ, "ಪೊಲೀಸರ ನಡೆ ನಿಜಕ್ಕೂ ರಾಷ್ಟ್ರದ ಭದ್ರತೆ ಮತ್ತು ಹಿತಾಸಕ್ತಿಗೆ ಬೆದರಿಕೆಯಾಗಿದ್ದು, ಸರ್ಕಾರವು ಅಕ್ರಮ ವಲಸಿಗರಿಗೆ ಸಹಕರಿಸುವುದು ಮತ್ತು ಓಲೈಕೆ ಮಾಡುವುದನ್ನು ನಿಲ್ಲಿಸಬೇಕು" ಎಂದು ತಾಕೀತು ಮಾಡಿದೆ.
ದೂರುದಾರರು ಹೇಳಿದ್ದೇನು?
ಅರ್ಜಿದಾರರ ಪರ ವಕೀಲ ಗಿರೀಶ್ ಭಾರದ್ವಾಜ್ , ''ಅರ್ಜಿದಾರರು ಅಕ್ರಮವಾಗಿ ನೆಲೆಸಿರುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಅದರಂತೆ, ಪ್ರಕರಣದಲ್ಲಿ ದೂರುದಾರರಾಗಿರುವ ಬೆಂಗಳೂರಿನ ಹೊಸ ಸಿದ್ದಾಪುರದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆ ನಸ್ರೀನಾ ಅವರ ಬಗ್ಗೆ ಮಾಹಿತಿ ನೀಡಿದ್ದರು. ದೂರುದಾರರು ಕಳೆದ 15 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದಾರೆ. ಈ ಬಗ್ಗೆ ಅರ್ಜಿದಾರರು ಜು.22ರಂದು ಬೆಳಗ್ಗೆ 11.30ಕ್ಕೆ ಮಾಹಿತಿ ನೀಡಿದ್ದರು.
ರಾಜ್ಯದಲ್ಲಿ 13,675 ಅಕ್ರಮ ವಲಸಿಗರು
ದೂರುದಾರರ ಬಗ್ಗೆ ತನಿಖಾಧಿಕಾರಿಯು ಎಫ್‌ಆರ್‌ಆರ್‌ಒಗೆ ಪತ್ರ ಬರೆದ ಕೇವಲ 15 ನಿಮಿಷಗಳಲ್ಲಿಯೇ ಬಾಂಗ್ಲಾಪ್ರಜೆಗಳು ನೀಡಿದ ದೂರು ದಾಖಲಿಸಿಕೊಂಡು ಹಲ್ಲೆ ಆರೋಪದ ಮೇರೆಗೆ ಎಫ್‌ಐಆರ್ ದಾಖಲಿಸಿ ಅರ್ಜಿದಾರರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮರು ದಿನ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಅದೇ ದಿನ ಮಧ್ಯಾಹ್ನ ಕೊಡತಿ ಗ್ರಾಮದ ಕಾರ್ಮಿಕರ ಗುಡಿಸಲಿನಲ್ಲಿದ್ದ ಬಾಂಗ್ಲಾ ನಿವಾಸಿ ಮೊಹಮ್ಮದ್ ಶೈದುಲ್ಲಾ ಇಸ್ಲಾಂ ನೀಡಿದ ದೂರು ಆಧರಿಸಿ ವರ್ತೂರು ಠಾಣಾ ಪೊಲೀಸರು ಮತ್ತೊಂದು ದೂರು ದಾಖಲಿಸಿದ್ದಾರೆ,'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪಕ್ರರಣವನ್ನು ಆಲಿಸಿದ ಕೋರ್ಟ್ ಅಕ್ರಮ ವಲಸಿಗರನ್ನು ಸರ್ಕಾರ, ಪೊಲೀಸರೇ ಬೆಂಬಲಿಸುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳಿಗಿಂತ ವಲಸಿಗರೇ ಮುಖ್ಯವಾಗಿದ್ದಾರಾ? ದೇಶದ ಭದ್ರತೆಗೇ ಬೆದರಿಕೆಯಿದ್ದರೂ ವಲಸಿಗರನ್ನು ಬೆಂಬಲಿಸುತ್ತಿದ್ದೀರಾ? ವಲಸಿಗರನ್ನು ಹೊರಗೆ ಕಳಿಸಿ ಅಂದರೆ ದೂರು ನೀಡಿದವರ ಮೇಲೇ ಕೇಸ್. ಅಕ್ರಮ ವಲಸಿಗರ ಓಲೈಕೆ ನಿಲ್ಲಬೇಕು. ಅಕ್ರಮ ವಲಸಿಗರ ಗಡಿಪಾರಿಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್, ಖಡಕ್ ಸೂಚನೆ ನೀಡಿದೆ.