ಬೆಂಗಳೂರು, ಅ.14: ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿಯ 5ನೇ ಸಭೆಯು ಮಂಡಳಿಯ ಅಧ್ಯಕ್ಷರೂ ಆಗಿರುವ ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರ (Priyank Kharge) ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು. ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಂದ ತಯಾರಿಸಲಾಗುತ್ತಿರುವ ವಿವಿಧ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ, ಆಕರ್ಷಕ ಪ್ಯಾಕೇಜಿಂಗ್ನೊಂದಿಗೆ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸಚಿವರು, ಅಧಿಕಾರಿಗಳಿಗೆ ಸೂಚಿಸಿದರು.
ಕೈದಿಗಳ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದು, ಅವುಗಳ ಮಾರಾಟವನ್ನು ಹೆಚ್ಚಿಸುವುದು ಹಾಗೂ ಈ ಮೂಲಕ ಕಾರಾಗೃಹ ಅಭಿವೃದ್ಧಿ ಮಂಡಳಿಯನ್ನು ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ನಿರ್ದೇಶನ ನೀಡಿದರು.
ಕೈದಿಗಳ ಕೌಶಲಾಭಿವೃದ್ಧಿ ಮತ್ತು ಪುನರ್ವಸತಿಗೆ ಪೂರಕವಾದ ಚಟುವಟಿಕೆಗಳನ್ನು ಬಲಪಡಿಸುವುದರ ಜತೆಗೆ, ಅವರು ತಯಾರಿಸುವ ಉತ್ಪನ್ನಗಳಿಗೆ ಸ್ಥಿರವಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ಉತ್ಪನ್ನಗಳ ಗುಣಮಟ್ಟ, ಆಕರ್ಷಕ ಪ್ಯಾಕೇಜಿಂಗ್ ಮತ್ತು ಪರಿಣಾಮಕಾರಿ ಮಾರುಕಟ್ಟೆ ವ್ಯವಸ್ಥೆಯ ಮೂಲಕ ಅವುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಕಾರಾಗೃಹಗಳಲ್ಲಿ ಕಲಾ ಚಿಕಿತ್ಸಾ ಕಾರ್ಯಕ್ರಮಗಳ ಅನುಷ್ಠಾನ, ಕೈದಿಗಳ ಮಾನಸಿಕ ಪರಿವರ್ತನೆ ಮತ್ತು ಪುನರ್ವಸತಿಗಾಗಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗ, ವ್ಯಸನಮುಕ್ತ ಕೇಂದ್ರಗಳ ಸ್ಥಾಪನೆ ಹಾಗೂ ಕಾರಾಗೃಹಗಳಲ್ಲಿ ಉತ್ಪಾದನೆಯಾಗುವ ವಸ್ತುಗಳ ಮಾರಾಟ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು.
ಇದಲ್ಲದೆ, ಕಾರಾಗೃಹಗಳ ಮೂಲಸೌಕರ್ಯ ಅಭಿವೃದ್ಧಿ, ಕೈದಿಗಳ ಕೌಶಲಾಭಿವೃದ್ಧಿಗೆ ಆಧುನಿಕ ವೃತ್ತಿಪರ ತರಬೇತಿ ಒದಗಿಸುವುದು ಹಾಗೂ ವಿವಿಧ ಕಾರಾಗೃಹಗಳಲ್ಲಿ ಉತ್ಪಾದನಾ ಮತ್ತು ಮಾರಾಟ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಪರಿಶೀಲಿಸಲಾಯಿತು.
ಕೈದಿಗಳ ಪುನರ್ವಸತಿ, ಕೌಶಲಾಭಿವೃದ್ಧಿ ಮತ್ತು ಉತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜತೆಗೆ, ಕಾರಾಗೃಹ ಅಭಿವೃದ್ಧಿ ಮಂಡಳಿಯ ಆದಾಯವನ್ನು ಹೆಚ್ಚಿಸಿ, ಮಂಡಳಿಯು ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಯೋಜನೆಗಳನ್ನು ರೂಪಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ಗೈರಾದ ಇಲಾಖಾ ಮುಖ್ಯಸ್ಥರ ವಿರುದ್ಧ ಸಚಿವರ ಅಸಮಾಧಾನ
ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿಯ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ, ಆರೋಗ್ಯ, ಪಶುಸಂಗೋಪನೆ, ಕೃಷಿ, ತೋಟಗಾರಿಕೆ ಹಾಗೂ ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಗೆ ಗೈರುಹಾಜರಾಗಿ, ತಮ್ಮ ಬದಲಿಗೆ ಕಿರಿಯ ಅಧಿಕಾರಿಗಳನ್ನು ಕಳುಹಿಸಿದ್ದಕ್ಕೆ ಮಂಡಳಿಯ ಅಧ್ಯಕ್ಷರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ಮಹತ್ವವನ್ನು ಅರಿತು ಇಲಾಖಾ ಮುಖ್ಯಸ್ಥರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಸಭೆಗಳಿಗೆ ಖುದ್ದು ಹಾಜರಾಗಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು, ಸಭೆಗೆ ಹಾಜರಾಗಿದ್ದ ಕಿರಿಯ ಅಧಿಕಾರಿಗಳನ್ನು ಸಭೆಯಿಂದ ಹೊರಗೆ ಕಳುಹಿಸಿದರು.
KSRTC Bus: ಸರ್ಕಾರಿ ಬಸ್ಗಳಿಗೆ ADAS ರಕ್ಷೆ; ಅಪಘಾತ ತಡೆಗೆ ಹೈಟೆಕ್ ಸುರಕ್ಷತಾ ತಂತ್ರಜ್ಞಾನ ಅಳವಡಿಕೆ
ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯ, ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಡಾ.ಎ.ಸಲೀಂ, ಪೊಲೀಸ್ ಮಹಾ ನಿರ್ದೇಶಕ (ಕಾರಾಗೃಹ) ಅಲೋಕ್ ಕುಮಾರ್, ಗೃಹ ಇಲಾಖೆಯ ಕಾರ್ಯದರ್ಶಿ ಶರಶ್ಚಂದ್ರ ಹಾಗೂ ಇನ್ನಿತರ ಅಧಿಕಾರಿಗಳು ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.