ಬೆಂಗಳೂರು: ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದೆ. ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ (Bengaluru Metro Pink Line) ಉದ್ಘಾಟನೆ ಕುರಿತು ಅಪ್ಡೇಟ್ ಸಿಕ್ಕಿದ್ದು, ನ.13ಕ್ಕೆ ಪಿಂಕ್ ಲೈನ್ ಸಂಚಾರಕ್ಕೆ ಮುಕ್ತವಾಗಲಿದೆ. ಈ ಕುರಿತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸುಳಿವು ನೀಡಿದ್ದಾರೆ.
ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕ ಕಲ್ಪಿಸುವ ಈ ಮಾರ್ಗವು 21.26 ಕಿ.ಮೀ. ಉದ್ದ ಹೊಂದಿದ್ದು, ಅದರಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಾಗಿದೆ. ಗುಲಾಬಿ ಮಾರ್ಗದಲ್ಲಿ ಸದ್ಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಎಲಿವೇಟೆಡ್ ವಿಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಇತ್ತೀಚೆಗೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಕ್ಲಿಯರೆನ್ಸ್ ದೊರೆತಿತ್ತು.
ಸದ್ಯ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಗೆ ರೈಲು ಸಂಚಾರ ಆರಂಭವಾಗಲಿದೆ. ಉದ್ಘಾಟನೆಗೆ ಸಿದ್ಧವಾಗಿರುವ ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಹಳದಿ ಮತ್ತು ಗುಲಾಬಿ ಮಾರ್ಗಗಳ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣ) ತಾವರೆಕೆರೆ ಸೇರಿ 6 ನಿಲ್ದಾಣಗಳು ಇವೆ.
ಈ ಮಾರ್ಗ ಕಾರ್ಯಾರಂಭಗೊಂಡರೆ ಬನ್ನೇರುಘಟ್ಟ ರಸ್ತೆ, ಐಐಎಂಬಿ, ಜೆಪಿ ನಗರ ಹಾಗೂ ಜಯದೇವ ಆಸ್ಪತ್ರೆ ಭಾಗದ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ. ಈಗಾಗಲೇ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ (CMRS) ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ತಾಂತ್ರಿಕವಾಗಿ ಮಾರ್ಗ ಸಿದ್ಧವಾಗಿದ್ದು, ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರದಿಂದ ಅಧಿಕೃತ ವೇಳಾಪಟ್ಟಿ ಮತ್ತು ಕಾರ್ಯಕ್ರಮದ ವಿವರಗಳು ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ.
ಪಿಂಕ್ ಲೈನ್ ಸಂಪೂರ್ಣ ಕಾಮಗಾರಿ ಮುಕ್ತಾಯ ಯಾವಾಗ?
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಪಿಂಕ್ ಲೈನ್ ಒಟ್ಟು 21.25 ಕಿ.ಮೀ ಉದ್ದವಿದ್ದು, ಇದರಲ್ಲಿ 7.5 ಕಿ.ಮೀ ಎಲಿವೇಟೆಡ್ ಮಾರ್ಗ ಹಾಗೂ 13.76 ಕಿ.ಮೀ ಭೂಗತ ಮಾರ್ಗ ಇರಲಿದೆ. ಸಂಪೂರ್ಣ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳು ಇರಲಿವೆ. ಭೂಗತ ಭಾಗದ ಕಾಮಗಾರಿ ಹಾಗೂ ವ್ಯವಸ್ಥೆಗಳ ಅಂತಿಮ ಹಂತದ ಕೆಲಸಗಳು ಮುಂದುವರಿದಿದ್ದು, ಈ ಮಾರ್ಗದಲ್ಲಿ 2027ರ ಮಾರ್ಚ್ ವೇಳೆಗೆ ರೈಲು ಸಂಚಾರ ಕಾರ್ಯಾಚರಣೆ ಆರಂಭಿಸುವ ಗುರಿ ಹೊಂದಲಾಗಿದೆ.