Vande Bharat Sleeper Express: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಹೊಸ ಎಕ್ಸ್ಪ್ರೆಸ್ ರೈಲಿಗೆ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಚಾಲನೆ
Bengaluru-Mumbai Vande Bharat Sleeper Express: ರಾಜ್ಯದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ಗಳ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ತುಮಕೂರು, ಹಾವೇರಿ, ರಾಣೆಬೆನ್ನೂರು, ಬೆಳಗಾವಿ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗಳಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
-
ಬೆಂಗಳೂರು: ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಲ್ಲಿ ಭಾನುವಾರ, ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಹೊಸ ಎಕ್ಸ್ ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್. ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ತೇಜಸ್ವಿ ಸೂರ್ಯ, ಡಾ. ಸಿ. ಎನ್. ಮಂಜುನಾಥ್, ಪಿ. ಸಿ. ಮೋಹನ್, ರಾಜ್ಯಸಭಾ ಸಂಸದರಾದ ಲೆಹರ್ ಸಿಂಗ್ ಸಿರೋಯ ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, 'ದೇಶದಲ್ಲಿ ರೈಲ್ವೆ ಕ್ರಾಂತಿಯಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದಕರ ಬಾಂಬ್, ಬುಲೆಟ್ಗಳ ಸದ್ದಡಗಿಸಿ ಬುಲೆಟ್ ರೈಲುಗಳ ಯುಗಕ್ಕೆ ನಾಂದಿ ಹಾಡಿದೆ" ಎಂದು ಹೇಳಿದರು.
ರೈಲು ಪ್ರಯಾಣದ ಸುರಕ್ಷತೆಗಾಗಿ 'ಕವಚ್' ಸ್ವಯಂ ಚಾಲಿತ ರೈಲು ರಕ್ಷಣಾ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ರೈಲು ಅಪಘಾತ ತಡೆಯುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ದೇಶಾದ್ಯಂತ ವಂದೇ ಭಾರತ್ ರೈಲುಗಳ ಸೇವೆ ವಿಸ್ತರಣೆಯಾಗಿದ್ದು, ಈಗಾಗಲೇ 150ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿವೆ. ರೈಲ್ವೆ ಸಾರಿಗೆಯಲ್ಲಿ ವೇಗ, ಸುರಕ್ಷತೆ ಮತ್ತು ಆಧುನಿಕ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಭಾರತದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾದ ಬೆಂಗಳೂರು ಮತ್ತು ಮುಂಬೈ ನಗರಗಳ ಸಂಪರ್ಕಕ್ಕೆ 'ವಂದೇ ಭಾರತ್ ಸ್ಲೀಪರ್ ರೈಲು' ಮಹತ್ವದ ಸೇರ್ಪಡೆಯಾಗಲಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸುಮಾರು 1,118 ಕಿ.ಮೀ. ದೂರವನ್ನು ಕೇವಲ 16 ಗಂಟೆಗಳಲ್ಲಿ ಕ್ರಮಿಸಲಿದೆ. ಸುಮಾರು ಅರ್ಧದಷ್ಟು ಸಮಯ ಉಳಿಯುತ್ತದೆ ಎಂದು ಹೇಳಿದರು.
ಕರ್ನಾಟಕಕ್ಕೆ ಹೈಸ್ಪೀಡ್ ಕಾರಿಡಾರ್:
ರಾಜ್ಯದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ಗಳ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ತುಮಕೂರು, ಹಾವೇರಿ, ರಾಣೆಬೆನ್ನೂರು, ಬೆಳಗಾವಿ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಗಳಿವೆ ಎಂದು ತಿಳಿಸಿದರು.
ರಾಜ್ಯದ ರೈಲ್ವೆ ವಲಯಕ್ಕೆ ಹೆಚ್ಚಿನ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. 2008ರಲ್ಲಿ ರಾಜ್ಯಕ್ಕೆ ಸುಮಾರು ₹ 700 ಕೋಟಿ ರೈಲ್ವೆ ಅನುದಾನ ನೀಡಲಾಗುತ್ತಿತ್ತು. ಆದರೆ ಈಗ ವಾರ್ಷಿಕವಾಗಿ ₹7,000ರಿಂದ ₹8,000 ಕೋಟಿ ವರೆಗೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯಕ್ಕೆ 7748 ಕೋಟಿ ಹಂಚಿಕೆ:
ಕೇಂದ್ರ ಸರ್ಕಾರ 2026-27ರಲ್ಲಿ ರಾಜ್ಯಕ್ಕೆ ₹7,748 ಕೋಟಿ ಹಂಚಿಕೆ ಮಾಡಿದೆ. ರಾಜ್ಯದ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.
ಇದೇ ವೇಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಇವರು ತಾಂತ್ರಿಕ ಹಿನ್ನೆಲೆ ಮತ್ತು ಆಡಳಿತಾತ್ಮಕ ಅನುಭವ ಹೊಂದಿದ್ದು, ರೈಲ್ವೆ ಕ್ಷೇತ್ರದಲ್ಲಿ ಅನನ್ಯ ಅನನ್ಯ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಹೇಳಿದರು.
170 gw ಮೀರಿದ ಸೌರ ಶಕ್ತಿ: ದೇಶದ ಸೌರಶಕ್ತಿ ಉತ್ಪಾದನೆ ಬಗ್ಗೆ ವಿವರಿಸುತ್ತಾ, ಭಾರತ ಸೌರಶಕ್ತಿ ಉತ್ಪಾದನೆಯಲ್ಲಿ ಸಹ ಅದ್ಭುತ ಪ್ರಗತಿ ಹೊಂದಿದೆ. ಹಿಂದೆ ಕೇವಲ 2.6 gw ಇದ್ದ ಸೌರ ಸಾಮರ್ಥ್ಯವೀಗ ಸುಮಾರು 170gw ಮೀರಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಅಣಕು ಸಂಸತ್ ಅಧಿವೇಶನ; ಜ್ಞಾನೇಶ್ ಕುಮಾರ್ ವಿರುದ್ಧ ಜನತಾ ದೋಷಾರೋಪಣೆ
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ಲೆಹರ್ ಸಿಂಗ್ ಸಿರೋಯ, ಜಗ್ಗೇಶ್, ಮಾಜಿ ಸಂಸದ ಉಮೇಶ ಜಾಧವ್ ಸೇರಿದಂತೆ ಗಣ್ಯರು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.