ಸಿಎಲ್‌ಪಿ ಸಭೆಯಲ್ಲಿ ಚುನಾವಣೆ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಗುರುವಾರ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ. ಪರಿಷತ್ ಕಣದಲ್ಲಿ ಏಳನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆ ರಂಗೇರಿದೆ.
ಜೂನ್ 18ರಂದು 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿ ಕಣಕ್ಕಿಳಿಸಿದೆ. ಕಾಂಗ್ರೆಸ್‌ನ 4 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಏಳನೇ ಸ್ಥಾನಕ್ಕೆ ಜಟಾ ಪಟಿ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ನಡುವೆ ಸ್ಪರ್ಧೆ ಏರ್ಪಟ್ಟಿದೆ.
ರೆಸಾರ್ಟ್ ಪಾಲಿಟಿಕ್ಸ್: ಮೇಲ್ಮನೆ ಚುನಾವಣೆ ಸಂಬಂಧ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಜೆಡಿಎಸ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಬಿಡದಿಯ ಖಾಸಗಿ ರೆಸಾರ್ಟ್ʼನಲ್ಲಿ ಕರೆದಿದೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮಂಗಳವಾರ ರಾತ್ರಿ ನಡೆದಿದೆ. ಸಭೆಯಲ್ಲಿ ಕಾಂಗ್ರೆಸ್ ಯಾವ ಅಭ್ಯರ್ಥಿಗೆ ಎಷ್ಟು ಮೊದಲ ಪ್ರಾಶಸ್ತ್ಯ ಮತ ಹಾಕಬೇಕು, ಎರಡನೇ ಪ್ರಾಶಸ್ತ್ಯ ಮತ ಹಾಕಬೇಕು ಎಂಬ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಇದರ ಜತೆಗೆ ಕಾಂಗ್ರೆಸ್ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್‌ಗೆ ಎಷ್ಟು ಮತ ಹಾಕಬೇಕು. ಯಾವುದೇ ದೋಷವಿಲ್ಲದೆ, ಅಸಿಂಧುವಾಗದಂತೆ ಹೇಗೆ ಮತ ಹಾಕಬೇಕು ಎಂಬುದನ್ನು ಸಭೆಯಲ್ಲಿ ಶಾಸಕರಿಗೆ ಮನವರಿಕೆ ಮಾಡಿ ಕೊಡಲಾಗಿದೆ. ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕವೂ ಕೈ ಶಾಸಕರು ರೆಸಾರ್ಟ್‌ನ ತಂಗಲಿದ್ದಾರೆ.
ಇದನ್ನೂ ಓದಿ: Cabinet Expansion: ಮಾಸಾಂತ್ಯಕ್ಕೆ ʼಸಂಪುಟʼ ವಿಸ್ತರಣೆ
ಜೂನ್ 18ಕ್ಕೆ ಶಾಸಕರು ರೆಸಾರ್ಟ್ʼನಿಂದ ನೇರವಾಗಿ ಬಸ್ ಮೂಲಕ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾವಣೆ ಮಾಡಲಿದ್ದಾರೆ. ಜೆಡಿಎಸ್ ಶಾಸಕರೂ ರೆಸಾರ್ಟ್ ವಾಸ್ತವ್ಯ ಮಾಡಲಿzರೆ. ಜೆಡಿಎಸ್ ಗೋವಿಂದ ರಾಜ್ ಅವರನ್ನು ಕಣಕ್ಕಿಳಿಸಿದೆ.
ಗೋವಿಂದ ರಾಜ್ ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಬಳಿ ಸಂಖ್ಯಾಬಲ ಇಲ್ಲ. ಆದರೆ, ಬಿಜೆಪಿಯ ಉಳಿಕೆ ಮತ ಹಾಗೂ ಬಿಜೆಪಿ ಉಚ್ಛಾಟಿತ ಶಾಸಕರ ಮತಗಳ ಮೇಲೆ ಕಣ್ಣಿಟ್ಟಿದೆ. ಇದರ ಜತೆಗೆ ತನ್ನ 18 ಶಾಸಕರನ್ನೂ ಒಟ್ಟಾಗಿ ಹಿಡಿದಿಟ್ಟುಕೊಂಡು ತನ್ನ ಅಭ್ಯರ್ಥಿಗೇ ಮತ ಹಾಕಿಸುವ ಸವಾಲು ಜೆಡಿಎಸ್ ಮೇಲಿದೆ.
ಅಡ್ಡ ಮತದಾನದ ಭೀತಿ: ಏಳನೇ ಅಭ್ಯರ್ಥಿಗಳ ಹಣಾಹಣಿಯಲ್ಲಿ ಅಡ್ಡ ಮತದಾನ ಆಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇತ್ತ ಕೆಲ ಜೆಡಿಎಸ್ ಶಾಸಕರಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡ ಮತದಾನ ನಡೆಯಲಿದೆಯಾ ಎಂಬ ಆತಂಕ ಜೆಡಿಎಸ್ ಪಕ್ಷದಲ್ಲಿ ಎದ್ದು ಕಾಣುತ್ತಿದೆ. ಹೀಗಾಗಿ ಜೆಡಿಎಸ್‌ಗೆ ತನ್ನ 18 ಶಾಸಕರನ್ನೂ ಹಿಡಿದಿಟ್ಟುಕೊಳ್ಳುವ ಸವಾಲು ಎದುರಾಗಿದೆ. 18 ಶಾಸಕರೂ ತಮ್ಮ ಅಭ್ಯರ್ಥಿಗೇ ಮತ ಹಾಕುವುದನ್ನು ಖಚಿತಪಡಿಸುವ ಅಗ್ನಿಪರೀಕ್ಷೆ ಜೆಡಿಎಸ್‌ನದ್ದಾಗಿದೆ.
ಒಂದು ವೇಳೆ ಅಡ್ಡ ಮತದಾನ ಅಥವಾ ಮತದಾನದ ವೇಳೆ ಗೈರಾದರೆ ಜೆಡಿಎಸ್‌ಗೆ ಅದು ರಾಜಕೀ ಯವಾಗಿ ಹಿನ್ನಡೆಯಾಗಲಿದೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಜೆಡಿಎಸ್ ವಿಫಲವಾಗಿದೆ ಎನ್ನಬಹುದು. ಹೀಗಾಗಿ ಜೆಡಿಎಸ್‌ಗೆ ಮೇಲ್ಮನೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದಕ್ಕಾಗಿ ತಮ್ಮ ಶಾಸಕರನ್ನು ರೆಸಾರ್ಟ್‌ನಲ್ಲಿರಿಸಿದ್ದಾರೆ.
ಸಂಪುಟ ವಿಸ್ತರಣೆ ಚರ್ಚೆ
ವಿಧಾನ ಪರಿಷತ್ ಚುನಾವಣೆಯ ಬಳಿಕ ನಡೆಯಬಹುದಾದ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ರೆಸಾರ್ಟ್ ವಾಸ್ತವ್ಯದ ವೇಳೆ ಚರ್ಚೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಎಲ್ಲ ಶಾಸಕರು ಎರಡು ದಿನಗಳ ಕಾಲ ರೆಸಾರ್ಟ್‌ನಲ್ಲೇ ತಂಗಲಿದ್ದು, ಶಾಸಕರ ಜತೆ ಹಿರಿಯ ನಾಯಕರು ಮುಕ್ತ ಮಾತುಕತೆ ನಡೆಸಲಿzರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಿರಿಯ ನಾಯಕರು ರೆಸಾರ್ಟ್‌ನಲ್ಲಿ ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಮುಂದಿನ ಎರಡು ವರ್ಷಗಳ ಆಡಳಿತ, ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆಯಾಗಲಿದೆ. ಸಚಿವ ಸಂಪುಟ ಸೇರಲು ಬಹಳಷ್ಟು ನಾಯಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಅಂತಹ ಶಾಸಕರ ಜತೆ ಡಿ.ಕೆ.ಶಿವ ಕುಮಾರ್ ಹಾಗೂ ಹಿರಿಯ ನಾಯಕರು ಸಭೆ ನಡೆಸಿ ಸಂಪುಟ ಸೇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
*
ಜೆಡಿಎಸ್ ಬಳಿ ಸಂಖ್ಯಾಬಲ ಇಲ್ಲವಾದ್ದರಿಂದ ಬಿಜೆಪಿಯ ಉಳಿಕೆ ಮತ, ಬಿಜೆಪಿ ಉಚ್ಛಾಟಿತ ಶಾಸಕರ ಮತಗಳ ಮೇಲೆ ಕಣ್ಣ
ತನ್ನ 18 ಶಾಸಕರನ್ನೂ ಒಟ್ಟಾಗಿ ಹಿಡಿದಿಟ್ಟುಕೊಂಡು ತನ್ನ ಅಭ್ಯರ್ಥಿಗೇ ಮತ ಹಾಕಿಸುವ ಸವಾಲು ಎದುರಿಸುತ್ತಿರುವ ಜೆಡಿಎಸ್
ಸಚಿವಾಕಾಂಕ್ಷಿಗಳಿಗೆ ಪ್ರಮುಖ ನಿಗಮ ಮಂಡಳಿ ಸೇರಿದಂತೆ ಪರ್ಯಾಯ ಸ್ಥಾನಮಾನಗಳಿಗೆ ಮನವೊಲಿಸುವ ಸಾಧ್ಯತೆ