ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿಗರಿಗೆ ಗುಡ್‌ನ್ಯೂಸ್‌; ನಮ್ಮ ಮೆಟ್ರೋದ ಮೊದಲ ಬ್ಲೂ ರೈಲು ಬಂದು ಬಿಡ್ತು: ಓಡಾಟ ಯಾವಾಗ?

Namma Metro: ಸಿಲ್ಕ್‌ ಬೋರ್ಡ್‌ನಿಂದ ನೇರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಬ್ಲೂ ಲೈನ್‌ ಮಾರ್ಗದ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಮಧ್ಯೆ ಬೆಂಗಳೂರಿನ ಬೆಮೆಲ್‌ ಮೊದಲ ಬ್ಲೂ ರೈಲನ್ನು ಹಸ್ತಾಂತರಿಸಿದೆ.

ಮೊದಲ ಬ್ಲೂ ಲೈನ್‌ ಮೆಟ್ರೋ ರೈಲು

ಬೆಂಗಳೂರು, ಜೂ. 4: ನೀವು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ (Namma Metro) ಓಡಾಡುವವರಾಗಿದ್ದರೆ ಇಲ್ಲಿದೆ ಗುಡ್‌ನ್ಯೂಸ್‌. ನಮ್ಮ ಮೆಟ್ರೋದ ಬಹುನಿರೀಕ್ಷಿತ ಬ್ಲೂ ಲೈನ್ (Blue Line Metro) ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ವರ್ಷದ ಡಿಸೆಂಬರ್​ನಲ್ಲಿ ಮೊದಲ ಹಂತದ ಮಾರ್ಗ ಓಪನ್ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL)​ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೀಗ ಈ ಲೈನ್‌ನ ಮೊದಲ ರೈಲು ಬೆಂಗಳೂರಿಗೆ ಬಂದಿದೆ. ಹೌದು, ಕೆಂಪೇಗೌಡ ಏರ್​ಪೋರ್ಟ್ ಮಾರ್ಗಕ್ಕೆ ಸಾಗುವ ಬ್ಲೂ ರೈಲು ಬಂದಿದೆ. ಗುರುವಾರ (ಜೂನ್‌ 4) ಬೆಳಗ್ಗೆ ಬೈಯಪ್ಪನಹಳ್ಳಿ ಡಿಪೋಗೆ ರೈಲು ಬಂದು ತಲುಪಿದೆ.

ಈ ಬ್ಲೂ ಲೈನ್‌ ಸಿಲ್ಕ್‌ ಬೋರ್ಡ್‌ನಿಂದ ನೇರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಸಿದ್ಧಗೊಂಡರೆ ಈ ಮಾರ್ಗದ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದಿದ್ದು ನಮ್ಮ ಸರ್ಕಾರವೇ ಎಂದ ಡಿ.ಕೆ. ಶಿವಕುಮಾರ್‌

ಸುಮಾರು 58.19 ಕಿಲೋ ಮೀಟರ್‌ ಉದ್ದದ ಈ ಮಾರ್ಗಕ್ಕಾಗಿ ಬೆಂಗಳೂರಿನ ಬೆಮೆಲ್‌ (BEMAL) ಕಂಪನಿಗೆ ಒಟ್ಟು 38 ಚಾಲಕರಹಿತ ರೈಲು ಪೂರೈಸಲು ಆರ್ಡರ್‌ ನೀಡಲಾಗಿದೆ. ಈ ಡಿಸೆಂಬರ್‌ನಲ್ಲಿ ಮೊದಲ ಹಂತವಾಗಿ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌. ಪುರವರೆಗಿನ 19.75 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಓಡಿಸಲು ಬಿಎಂಆರ್‌ಸಿಎಲ್‌ ಸಜ್ಜಾಗಿದೆ. 14,788 ಕೋಟಿ ರುಪಾಯಿಯ ಈ ಬೃಹತ್‌ ಯೋಜನೆಯಲ್ಲಿ ಒಟ್ಟು 30 ನಿಲ್ದಾಣ ನಿರ್ಮಿಸಲಾಗುತ್ತದೆ.

ಮೊದಲ ಹಂತದಲ್ಲಿ ಉದ್ಘಾಟನೆಗೊಳ್ಳಲಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದ 19.75 ಕಿ.ಮೀ. ಮಾರ್ಗದಲ್ಲಿ 13 ಸ್ಟೇಷನ್​​ಗಳಿರಲಿವೆ. ಸದ್ಯ ಕಾಮಗಾರಿ ಇನ್ನೂ ಮುಗಿಯದಿರುವುದರಿಂದ ಡಿಸೆಂಬರ್‌ನಲ್ಲಿ ಈ ಮಾರ್ಗ ತೆರೆಯುತ್ತ ಎನ್ನುವ ಅನುಮಾನವೂ ಮೂಡಿದೆ. 2ನೇ ಹಂತದ 37 ಕಿ.ಮೀ. ಉದ್ದದ ಕೆ.ಆರ್‌. ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗವು 2027ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ನಮ್ಮ ಮೆಟ್ರೋ ಪ್ರಕಟಣೆ:



ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ಸೇರ್ಪಡೆ

ಈ ಮಧ್ಯೆ ಯೆಲ್ಲೋ ಲೈನ್‌ಗೆ (ಆರ್‌.ವಿ. ರಸ್ತೆ-ಬೊಮ್ಮಸಂದ್ರ) ಹೆಚ್ಚುವರಿ ರೈಲುಗಳನ್ನು ಸೇರ್ಪಡೆ ಮಾಡಲಾಗಿದೆ. ಬಿಎಂಆರ್‌ಸಿಎಲ್‌ ಯೆಲ್ಲೋ ಮಾರ್ಗದಲ್ಲಿ ಜೂನ್‌ 3ರಂದು 2 ಹೆಚ್ಚುವರಿ ರೈಲುಗಳನ್ನು ಸೇರ್ಪಡೆಗೊಳಿಸಿದೆ. ಈ ಹೆಚ್ಚುವರಿ ರೈಲಿನೊಂದಿಗೆ ಪ್ರತಿದಿನ ಒಟ್ಟು 10 ರೈಲುಗಳು ಸಂಚರಿಸುತ್ತಿವೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಪೀಕ್‌ ಅವರ್‌ಗಳಲ್ಲಿ ಇನ್ನುಮುಂದೆ 7 ನಿಮಿಷಗಳ ಅಂತರದಲ್ಲಿ ರೈಲು ಸಂಚರಿಸಲಿವೆ. ಈ ಹಿಂದೆ 9 ನಿಮಿಷಗಳ ಅಂತರವಿತ್ತು. ಇನ್ನು ಸಾಮಾನ್ಯ ಸಮಯದಲ್ಲಿ 10 ನಿಮಿಷಗಳಿಗೊಂದರಂತೆ ರೈಲು ಚಲಿಸಲಿದೆ. ಈ ಹಿಂದೆ 14 ರೈಲುಗಳ ನಡುವೆ ನಿಮಿಷಗಳ ಅಂತರವಿತ್ತು. ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ರೈಲುಗಳು ದಿನವಿಡೀ 10 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ವಾರದ ಯಾವುದೇ ದಿನದಲ್ಲಿ ಆರ್‌.ವಿ. ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್‌ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author