ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಬಂಗಾಳ ಚುನಾವಣಾ ಎಫೆಕ್ಟ್‌; 10 ಸಾವಿರ ಕಾರ್ಮಿಕರು ಊರಿಗೆ, ಪಿಂಕ್-ಬ್ಲೂ ಲೈನ್ ಕಾಮಗಾರಿ ಸ್ಥಗಿತ

ಬಹು ನಿರೀಕ್ಷಿತ ನಮ್ಮ ಮೆಟ್ರೋ (BMRCL) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಉದ್ಘಾಟನೆ ವಿಳಂಬವಾಗಲಿದೆ. ಪಶ್ಚಿಮ ಬಂಗಾಳದ ಚುನಾವಣೆಯ ಹಿನ್ನೆಲೆ ಮತದಾನ ಮಾಡಲು ಊರಿಗೆ ತೆರಳಿದ್ದ 10 ಸಾವಿರಕ್ಕೂ ಹೆಚ್ಚು ಬಂಗಾಳಿ ಕಾರ್ಮಿಕರು ಇನ್ನು ಬೆಂಗಳೂರಿಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಮೆಟ್ರೋ ಕಾಮಗಾರಿಗಳು ನಿಧಾನಗೊಂಡಿದೆ.

10 ಸಾವಿರ ಕಾರ್ಮಿಕರು ಊರಿಗೆ,   ಪಿಂಕ್-ಬ್ಲೂ ಲೈನ್ ಕಾಮಗಾರಿ ಸ್ಥಗಿತ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 28, 2026 3:38 PM

ಬೆಂಗಳೂರು: ಬಹು ನಿರೀಕ್ಷಿತ ನಮ್ಮ ಮೆಟ್ರೋ (BMRCL) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಉದ್ಘಾಟನೆ ವಿಳಂಬವಾಗಲಿದೆ. ಪಶ್ಚಿಮ ಬಂಗಾಳದ ಚುನಾವಣೆಯ ಹಿನ್ನೆಲೆ ಮತದಾನ ಮಾಡಲು ಊರಿಗೆ ತೆರಳಿದ್ದ 10 ಸಾವಿರಕ್ಕೂ ಹೆಚ್ಚು ಬಂಗಾಳಿ ಕಾರ್ಮಿಕರು ಇನ್ನು ಬೆಂಗಳೂರಿಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಮೆಟ್ರೋ ಕಾಮಗಾರಿಗಳು ನಿಧಾನಗೊಂಡಿದೆ. ನಮ್ಮ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಕಾರ್ಮಿಕರು ಪಶ್ಚಿಮ ಬಂಗಾಳದವರಾಗಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸಲು ಬೆಂಗಳೂರಿನಿಂದ ಹೋದ ಸಾವಿರಾರು ಕಾರ್ಮಿಕರು ವಾರಗಳು ಕಳೆದರೂ ಇನ್ನು ಕೆಲಸಕ್ಕೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರಮುಖ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು BMRCL ಸಜ್ಜಾಗಿತ್ತು. ಜೂನ್ ತಿಂಗಳೊಳಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್‌ಗಳನ್ನು (ಪಿಂಕ್ ಲೈನ್) ಓಪನ್ ಮಾಡಲು ಪ್ಲಾನ್ ಮಾಡಲಾಗಿತ್ತು. ಈ ವರ್ಷದ ಡಿಸೆಂಬರ್ ವೇಳೆಗೆ ಮೊದಲ ಹಂತದ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ವರೆಗಿನ 19.75 ಕಿ.ಮೀ ಮಾರ್ಗವನ್ನು ( ಬ್ಲೂ ಲೈನ್) ಸಾರ್ವಜನಿಕರಿಗೆ ಮುಕ್ತಗೊಳಿಸಲು ಗಡುವು ವಿಧಿಸಲಾಗಿತ್ತು. ಆದರೆ ಇದೀಗ ಬಂಗಾಳ ಚುನಾವಣೆಗೆಂದು ತೆರಳಿದ ಕಾರ್ಮಿಕರು ನಾಪತ್ತೆಯಾಗಿರುವುದರಿಂದ ಕಾಮಗಾರಿ ವಿಳಂಬಗೊಳ್ಳಲಿದೆ.

ಪಿಂಕ್ ಲೈನ್ 21 ಕಿ.ಮೀ ಉದ್ದವಿದ್ದು, ಕಾಳೇನ ಅಗ್ರಹಾರದಿಂದ ತವರೇಕೆರೆ (ಸ್ವಾಗತ್ ಕ್ರಾಸ್ ರಸ್ತೆ)ವರೆಗೆ 7.5 ಕಿ.ಮೀ ಎತ್ತರಿಸಿದ ಮಾರ್ಗ ಮತ್ತು ಡೈರಿ ಸರ್ಕಲ್‌ನಿಂದ ನಾಗವಾರವರೆಗೆ 13.76 ಕಿ.ಮೀ ಭೂಗತ ಮಾರ್ಗವನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ ಆರು ನಿಲ್ದಾಣಗಳು ಅಂದರೆ, ಕಾಳೇನ ಅಗ್ರಹಾರ, ಹುಳಿಮಾವು, IIM-ಬೆಂಗಳೂರು, ಜೆಪಿ ನಗರ 4ನೇ ಹಂತ, ಜಯದೇವ ಮತ್ತು ತವರೇಕೆರೆ ನಿಲ್ದಾಣಗಳು ಇರಲಿದೆ.

ಬ್ಲೂ ಲೈನ್‌ ಮಾರ್ಗವು ಸುಮಾರು 17.75 ಕಿ.ಮೀ.ಗಳಷ್ಟು ವಿಸ್ತರಿಸಲಿದೆ. ಒಟ್ಟು 13 ನಿಲ್ದಾಣಗಳನ್ನು ಒಳಗೊಂಡಿದ್ದು, ಬೆಂಗಳೂರಿನ ಆಗ್ನೇಯ ಮತ್ತು ಪೂರ್ವ ಭಾಗಗಳಲ್ಲಿನ ಪ್ರಮುಖ ಐಟಿ ಮತ್ತು ವಸತಿ ಕೇಂದ್ರಗಳನ್ನು ಸಂಪರ್ಕಸಲಿದೆ. ಸಂಪೂರ್ಣ ಬ್ಲೂ ಲೈನ್ ಅಂತಿಮವಾಗಿ 58.19 ಕಿ.ಮೀ ದೂರವನ್ನು ಹೊಂದಿರಲಿದೆ. ಮೊದಲ ಹಂತದಲ್ಲಿ ಸಿಲ್ಕ್‌ಬೋರ್ಡ್‌ - ಕೆಆರ್‌ ಪುರ ಮಾರ್ಗವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್.ಎಸ್.ಆರ್‌ ಲೇಔಟ್, ಅಗಾರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬೀಸನಹಳ್ಳಿ, ಮಾರತಹಳ್ಳಿ, ಇಸ್ರೋ, ದೊಡ್ಡನೆಕುಂದಿ, ಡಿ.ಆರ್.ಡಿ.ಓ ಕ್ರೀಡಾ ಸಂಕೀರ್ಣ, ಸರಸ್ವತಿ ನಗರ, ಕೆ.ಆರ್. ಪುರ, 2ನೇ ಹಂತದಲ್ಲಿ ಕೆಆರ್‌ ಪುರ - ವಿಮಾನ ನಿಲ್ದಾಣ ಮಾರ್ಗವಾಗಿ ಕೆ.ಆರ್. ಪುರ, ಕಸ್ತೂರಿ ನಗರ, ಹೊರಮಾವು, ಎಚ್.ಆರ್.ಬಿ.ಆರ್‌ ಲೇಔಟ್, ಕಲ್ಯಾಣ್ ನಗರ, ಎಚ್.ಬಿ.ಆರ್‌ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟಹಲಸೂರು, ದೊಡ್ಡಜಾಲ, ವಿಮಾನ ನಿಲ್ದಾಣ ನಗರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ ನಿಲ್ದಾಣಗಳನ್ನು ಹೊಂದಲಿದೆ.