ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರು ಸರಣಿ ಸ್ಫೋಟ ಕೇಸ್‌; ಜೈಲಿನಲ್ಲಿದ್ದ ಶಂಕಿತ ಉಗ್ರ ಸಾವು

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದ (Serial Bomb Blast) ಶಂಕಿತ ಉಗ್ರ ಅಬ್ದುಲ್ ಖಾದರ್ (60) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆಯವನಾದ ಅಬ್ದುಲ್ ಖಾದರ್ ಎಂದು ತಿಳಿದು ಬಂದಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದ (Serial Bomb Blast) ಶಂಕಿತ ಉಗ್ರ ಅಬ್ದುಲ್ ಖಾದರ್ (60) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆಯವನಾದ ಅಬ್ದುಲ್ ಖಾದರ್ (Abdul Khader) 2008ರಲ್ಲಿ ಬೆಂಗಳೂರಿನ ಮಡಿವಾಳ ಸೇರಿದಂತೆ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳದಿಂದ (NIA) ಬಂಧಿತನಾಗಿದ್ದನು.

2010ರಿಂದ ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದನು. ನಿನ್ನೆ ಮಧ್ಯಾಹ್ನದ ಸುಮಾರಿಗೆ ಜೈಲಿನಲ್ಲಿದ್ದ ಅಬ್ದುಲ್ ಖಾದರ್ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿತ್ತು. ತೀವ್ರ ಅಸ್ವಸ್ಥಗೊಂಡ ಆತನನ್ನು ಜೈಲಿನ ಸಿಬ್ಬಂದಿ ತಕ್ಷಣವೇ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯದಲ್ಲೇ ಆತನಿಗೆ ತೀವ್ರ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಮೃತನ ದೇಹವನ್ನು ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ಅಬ್ದುಲ್ ಖಾದರ್ ಕುಟುಂಬದ ಸದಸ್ಯರಿಗೆ ಅಧಿಕೃತ ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ. ಅಬ್ದುಲ್ ಖಾದರ್ ವಿರುದ್ಧದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇತ್ತು. ಆದರೆ ನ್ಯಾಯಾಲಯದ ತೀರ್ಪು ಹೊರಬೀಳುವ ಮುನ್ನವೇ ಅಬ್ದುಲ್ ಖಾದರ್ ಕೊನೆಯುಸಿರೆಳೆದಿದ್ದಾನೆ.

ಉಗ್ರನ ಬಂಧನ

ಶಂಕಿತ ಉಗ್ರನನ್ನು ಬಂಧಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ದಾವಣಗೆರೆಯ ಬಿಡಿ ಲೇಔಟ್‌ನ ಜಮೀರ್ ಖಾನ್ (22) ಬಂಧಿತ ಶಂಕಿತ ಉಗ್ರನಾಗಿದ್ದಾನೆ. ಈತ ಐಎಸ್‌ಎಸ್ ಫಂಡಿಂಗ್ ಮಾಡುತ್ತಿದ್ದ ಉಗ್ರರಾದ ಶಾಬಾಸ್ ಭುಟ್ಟಿ ಹಾಗೂ ರಾಣಾ ಉನೇನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದನ್ನಾಧರಿಸಿ ತುಮಕೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ವಾಟ್ಸಾಪ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಉಗ್ರರ ಸಂಪರ್ಕದಲ್ಲಿದ್ದ. ದೇಶದಲ್ಲಿ ಸಂಚು ನಡೆಸಲು ಭಾರತದ ಮುಸ್ಲಿಂ ಯುವಕರನ್ನು ಬಳಕೆ ಮಾಡಿಕೊಂಡು ಐಎಸ್‌ಎಸ್ ಭಯೋತ್ಪಾದಕ ಸಂಘಟನೆ ವಿಸ್ತರಿಸಲು ಸಂಚು ರೂಪಿಸಿದ್ದ ಎನ್ನಲಾಗಿದೆ.

Vishakha Bhat Heggar

View all posts by this author