ಬೆಂಗಳೂರು: ಜೂ. 3ರಂದು ಚೊಚ್ಚಲ ಐಪಿಎಲ್ ಕಪ್ (IPL) ಗೆದ್ದುಕೊಳ್ಳುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹೊಸದೊಂದು ಇತಿಹಾಸ ಬರೆದಿದೆ. 18 ವರ್ಷಗಳಲ್ಲಿ ಮೊದಲ ಬಾರಿ ಚಾಂಪಿಯನ್ ಆದ ಆರ್‌ಸಿಬಿ ತಂಡ ಜೂ. 4ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವ ಆಯೋಜಿಸಲಾಗಿತ್ತು. ಆದರೆ ಈ ವೇಳೆ ದೊಡ್ಡ ದುರಂತವೊಂದು ಸಂಭವಿಸಿದ್ದು, ಕಾಲ್ತುಳಿತಕ್ಕೆ ಸಿಲುಕಿ ಸುಮಾರು 10 ಮಂದಿ ಅಭಿಮಾನಿಗಳು ಅಸುನೀಗಿದ್ದಾರೆ. ಈ ಮೂಲಕ ಕಪ್ ಗೆದ್ದ ಬೆಂಗಳೂರಿನಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ. ಅಷ್ಟಕ್ಕೂ ಕಾಲ್ತುಳಿತ ಸಂಭವಿಸಿದ್ದು ಹೇಗೆ?
ತಮ್ಮ ನೆಚ್ಚಿನ ತಾರೆಯರನ್ನು ನೋಡಲು ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಜನ ಸಾಗರವೇ ನೆರೆದಿತ್ತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ನಡೆಸಿದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Stampede at Chinnaswamy Stadium: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ
ಕಾಲ್ತುಳಿತದಲ್ಲಿ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೂ ದಾಖಲಿಸಲಾಗಿದ್ದ ನಾಲ್ವರು ಆರ್‌ಸಿಬಿ ಅಭಿಮಾನಿಗಳು ಸೇರಿದಂತೆ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ. ಇನ್ನು 10 ಮಂದಿ ಅಭಿಮಾನಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಎದುರು ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಬ್ಯಾರಿಕೇಡ್ ಬಿದ್ದು ಮೂವರ ಕಾಲು ಮುರಿದಿದೆ.
ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಆರ್‌ಸಿಬಿ ವಿಜಯೋತ್ಸವ ಪರೇಡ್ ಭದ್ರತಾ ದೃಷ್ಟಿಯಿಂದ ಕೈಬಿಡಲಾಗಿತ್ತು. ಬದಲಾಗಿ ಚಿನ್ನಸ್ವಾಮಿಯಂ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಲು ಅನುಮತಿ ನೀಡಲಾಗಿತ್ತು. ವಿಧಾನಸೌಧದ ಬಳಿ ತಂಡದ ಸದಸ್ಯರಿಗೆ ಸರ್ಕಾರದಿಂದ ಸನ್ಮಾನಿಸಿ, ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸಾವಿರಾರು ಅಭಿಮಾನಿಗಳು ಸ್ಟೇಡಿಯಂನತ್ತ ಬಂದಿದ್ದರಿಂದ ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಇದರಿಂದ ಸಂಭ್ರಮ ಮುಗಿಲು ಮುಟ್ಟಿದ್ದ ಬೆಂಗಳೂರಿನಲ್ಲಿ ಸೂತಕದ ವಾತಾವರಣ ಕಂಡು ಬಂದಿದೆ.