ನಾವು ಇಲ್ಲದಿದ್ದರೆ ಬೆಂಗಳೂರು ಬಿಗ್ ಝೀರೋ; ʼಗ್ರೇಟ್ ಕೇರಳʼ ಎಕ್ಸ್ ಪೋಸ್ಟ್‌ಗೆ ರೊಚ್ಚಿಗೆದ್ದ ಕನ್ನಡಿಗರು
ಗ್ರೇಟ್ ಕೇರಳ ಎನ್ನುವ ಎಕ್ಸ್ ಪೇಜ್‌ನಲ್ಲಿ ಬೆಂಗಳೂರಿನ ಬಗ್ಗೆ ಆಕ್ಷೇಪಾರ್ಹ ಬರಹ ಕಂಡು ಬಂದಿದ್ದು ಕನ್ನಡಿಗರು ರಿಚ್ಚಗೆದ್ದಿದ್ದಾರೆ. ʼʼಬೆಂಗಳೂರಿನಲ್ಲಿರುವ ಇತರ ರಾಜ್ಯದವರನ್ನು ಕಳಿಸಿಕೊಟ್ಟರೆ ಬೆಂಗಳೂರು ದೊಡ್ಡ ಝೀರೋ ಆಗಲಿದೆ. ಗಮನಿಸಿ ಬೆಂಗಳೂರಿನಲ್ಲಿ ಶೇಕಡಾ 30ರಷ್ಟು ಮಾತ್ರ ಕನ್ನಡಿಗರಿದ್ದಾರೆʼʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದ್ದು, ಕನ್ನಡಿಗರು ಬೆಂಡೆತ್ತಿದ್ದಾರೆ.
ಬೆಂಗಳೂರು ನಗರ (ಸಾಂದರ್ಭಿಕ ಚಿತ್ರ) -
ಬೆಂಗಳೂರು, ಜ. 11: ಸಿಲಿಕಾನ್ ಸಿಟಿ ಬೆಂಗಳೂರಿನ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬದುಕು ಅರಸಿಕೊಂಡು ದೇಶದ ವಿವಿಧ ಭಾಗಗಳ ಜನರು ಇಲ್ಲಿಗೆ ಆಗಮಿಸುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತದೆ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಪರಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದು ಖಂಡಿತಾ ಅತಿಶಯೋಕ್ತಿಯಲ್ಲ. ಪರಭಾಷಿಕರು ಇಲ್ಲಿಗೆ ಬಂದು ಕನ್ನಡ ಕಲಿತು ಇಲ್ಲಿನವರೊಂದಿಗೆ ಹೊಂದಿಕೊಂಡು ಹೋದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಲ್ಲಿ ಬದುಕು ಕಟ್ಟಿಕೊಂಡು ಇಲ್ಲಿನ ಜನ ಜೀವನ, ಭಾಷೆಯ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಕನ್ನಡಿಗರನ್ನು ಕೆರಳಿಸಿದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ʼಗ್ರೇಟ್ ಕೇರಳʼ (Great Kerala) ಎನ್ನುವ ಎಕ್ಸ್ ಪೇಜ್‌ನಲ್ಲಿ ಇದೀಗ ಬೆಂಗಳೂರಿನ ಬಗ್ಗೆ ಆಕ್ಷೇಪಾರ್ಹ ಬರಹ ಕಂಡು ಬಂದಿದೆ. ಸದ್ಯ ಈ ಪೋಸ್ಟ್ ಬಾರಿ ಚರ್ಚೆಗೆ ಕಾರಣವಾಗಿದೆ. ʼʼಬೆಂಗಳೂರಿನಲ್ಲಿರುವ ಇತರ ರಾಜ್ಯದವರನ್ನು ಕಳಿಸಿಕೊಟ್ಟರೆ ಬೆಂಗಳೂರು ದೊಡ್ಡ ಝೀರೋ ಆಗಲಿದೆ. ಗಮನಿಸಿ ಬೆಂಗಳೂರಿನಲ್ಲಿ ಶೇಕಡಾ 30ರಷ್ಟು ಮಾತ್ರ ಕನ್ನಡಿಗರಿದ್ದಾರೆʼʼ ಎಂದು ಬರೆಯಲಾಗಿದೆ.
ಗ್ರೇಟ್ ಕೇರಳ ಖಾತೆಯ ಎಕ್ಸ್ ಪೋಸ್ಟ್:
If you send all others in BLR to their respective states, BLR will become a big ZERO.
— Great Kerala (@GreatKerala1) January 8, 2026
Note that, only 30% of BLR people are Kannadigas https://t.co/WOJqFjZxPH
ಸದ್ಯ ಈ ಪೋಸ್ಟ್ ಕಿಚ್ಚು ಹಚ್ಚಿದ್ದು, ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಹಲವರು ಈ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ʼʼದಯವಿಟ್ಟು ಎಲ್ಲ ಮಲಯಾಳಿಗಳು ಬೆಂಗಳೂರು ಬಿಟ್ಟು ಹೋಗಿ. ಊರಿಗೆ ತೆರಳುವ ನಿಮ್ಮ ನಿರ್ಧಾರ ಸರಿಯಾಗಿದೆ. ಹೋಗಿ ಬಿಡಿʼʼ ಎಂದು ಒಬ್ಬರು ಬರೆದಿದ್ದಾರೆ. ʼʼನಾವು ಹಳೆಯ ಬೆಂಗಳೂರನ್ನು ನೋಡಲು ಬಯಸುತ್ತೇವೆ. ಹೀಗಾಗಿ ಬೆಂಗಳೂರಿನಿಂದ ಹೊರಟು ಹೋಗಿʼʼ ಎಂದು ಇನ್ನೊಬ್ಬರು ಬರೆದಿದ್ದಾರೆ.
ಬೆಂಗಳೂರಲ್ಲಿ ಕನ್ನಡ ಮಾತಾಡೋದೇ ತಪ್ಪಾ?; ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಉಪನ್ಯಾಸಕ ವಜಾ!
ʼʼಈ ರೀತಿಯ ಮನಸ್ಥಿತಿಯೇ ದೊಡ್ಡ ಸಮಸ್ಯೆ. ಭಿಕ್ಷೆ ಪಾತ್ರೆ ಹಿಡಿದುಕೊಂಡು ಬಂದವರು ನಮ್ಮ ನೆಲದಲ್ಲೇ ಬದುಕಿ ನಮ್ಮ ವಿರುದ್ಧವೇ ಮಾತನಾಡುತ್ತಿದ್ದಾರೆ. ಬದುಕಿ ಕಟ್ಟಿಕೊಂಡ ನೆಲದ ಸಂಸ್ಕೃತಿಯನ್ನು ಗೌರವಿಸುವುದನ್ನು ಕಲಿಯಿರಿʼʼ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ʼʼಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಮಲೆಯಾಳಿಗಳು ತುಂಬುತ್ತಿದ್ದಾರೆ. ಈಗ ಮೈಸೂರಿನಲ್ಲೂ ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು ಗ್ರೇಟ್. ಇದೇ ಕಾರಣಕ್ಕೆ ಇಲ್ಲಿಗೆ ಉದ್ಯೋಗ ಅರಸಿ ಹಲವರು ಬರುತ್ತಿದ್ದಾರೆʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ.
ʼʼಒಂದುವೇಳೆ ಕೇರಳವೇ ಅದ್ಭುತವಾಗಿದ್ದರೆ ಬಹುಸಂಖ್ಯಾತ ಮಲಯಾಳಿಗಳು ನಮ್ಮ ಕರ್ನಾಟಕ, ನಮ್ಮ ಬೆಂಗಳೂರು ಅಥವಾ ದುಬೈಗೆ ಯಾಕೆ ವಲಸೆ ಬರುತ್ತಿದ್ದರು? ನಿಮ್ಮ ರಾಜ್ಯದಿಂದ ವಲಸೆ ಹೋಗುವುದನ್ನು ನಿಲ್ಲಿಸಿ ಮತ್ತು ನಿಮ್ಮ ರಾಜ್ಯವನ್ನು ಅಭಿವೃದ್ಧಿ ಮಾಡಿ. ಇದನ್ನು ಯಾಕೆ ನೀವು ಮಾಡುತ್ತಿಲ್ಲʼʼ ಎಂದು ನೆಟ್ಟಿಗರೊಬ್ಬರು ಖಾರವಾಗಿ ಕಮೆಂಟ್ ಮಾಡಿದ್ದಾರೆ.
ʼʼಬದ್ರರ್ ನೀವು ಹೇಳಿದ್ದು ನಿಜ. ವಲಸಿಗರು ಬರುವುದಕ್ಕಿಂತ ಮೊದಲು ಬೆಂಗಳೂರು ಚೆನ್ನಾಗಿತ್ತು. ಆಗ ಝೀರೋ ಟ್ರಾಫಿಕ್, ಝೀರೋ ಮಾಲಿನ್ಯ, ಝೀರೋ ಕ್ರೈಂ, ಝೀರೋ ನೀರಿನ ಸಮಸ್ಯೆ, ಝೀರೋ ಭಾಷಾ ಸಮಸ್ಯೆ, ಝೀರೋ ಅಸಹಿಷ್ಣುತೆ, ಝೀರೋ ಕಸದ ಸಮಸ್ಯೆ ಇತ್ತುʼʼ ಎಂದು ಕನ್ನಡಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಸದ್ಯ ಈ ಪೋಸ್ಟ್ ಭಾರಿ ಸಂಚಲನ ಸೃಷ್ಟಿಸಿದೆ.