ಬೆಂಗಳೂರು, ಜ. 22: ಈಗಾಗಲೇ ಟ್ರಾಫಿಕ್‌ಗೆ ಕುಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರು (Bengaluru), ಇತ್ತೀಚಿನ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ (TomTom Traffic Index) ಬಿಡುಗಡೆ ಮಾಡಿದ ವರದಿಯಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರವಾಗಿ ಹೊರಹೊಮ್ಮಿದೆ. ನಗರದ ಸರಾಸರಿ ಸಂಚಾರ ದಟ್ಟಣೆ ಪ್ರಮಾಣವು ಶೇಕಡ 74.4ರಷ್ಟಿದ್ದು, ಇದು 2024ಕ್ಕಿಂತ ಶೇಕಡ 1.7ರಷ್ಟು ಹೆಚ್ಚಾಗಿದೆ.
ವಿಶ್ವದಾದ್ಯಂತ 3.65 ಟ್ರಿಲಿಯನ್ ಕಿಲೋ ಮೀಟರ್‌ಗಳ ಪ್ರಯಾಣ ದತ್ತಾಂಶವನ್ನು ಆಧರಿಸಿ ಸಿದ್ಧಪಡಿಸಲಾದ ಈ ಸೂಚ್ಯಂಕದಲ್ಲಿ ಮೆಕ್ಸಿಕೋ ಸಿಟಿ (Mexico City) ಮೊದಲ ಸ್ಥಾನದಲ್ಲಿದ್ದು, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಡಬ್ಲಿನ್ (ಐರ್ಲೆಂಡ್) ಮೂರನೇ ಸ್ಥಾನ ಪಡೆದುಕೊಂಡಿದೆ.
10 ಕಿ.ಮೀ. ಪ್ರಯಾಣಿಸಲು ಬೇಕು 36 ನಿಮಿಷ
2025ರಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ 10 ಕಿ.ಮೀ. ದೂರ ಪ್ರಯಾಣಿಸಲು ಸರಾಸರಿ 36 ನಿಮಿಷ 9 ಸೆಕೆಂಡ್ ಬೇಕಾಗಿತ್ತು. 2024ರಲ್ಲಿ ಇಷ್ಟೇ ದೂರವನ್ನು ಕ್ರಮಿಸಲು 34 ನಿಮಿಷ 5 ಸೆಕೆಂಡ್ ತಗುಲುತ್ತಿತ್ತು.
ಬೆಳಗ್ಗೆ-ಸಂಜೆ ಪೀಕ್ ಅವರ್
ಬೆಳಗಿನ ಸಮಯದಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 14.6 ಕಿ.ಮೀ. ಇದ್ದರೆ, ಸಂಜೆಯ ಸಮಯದಲ್ಲಿ ಇದು 13.2 ಕಿ.ಮೀ.ಗೆ ಕುಸಿಯುತ್ತದೆ. ಅಂದರೆ ಸೈಕಲ್‌ನಲ್ಲಿ ಹೋಗುವ ವೇಗಕ್ಕಿಂತಲೂ ನಿಧಾನವಾಗಿ ವಾಹನಗಳು ಚಲಿಸುತ್ತಿವೆ. 2025ರ ಮೇ 17ರಂದು ನಗರವು ಅತ್ಯಂತ ಕೆಟ್ಟ ಟ್ರಾಫಿಕ್ ದಿನವನ್ನು ಕಂಡಿದ್ದು, ಅಂದು ದಟ್ಟಣೆಯ ಮಟ್ಟ ಶೇ.101 ಕ್ಕೆ ತಲುಪಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರೇಟರ್ ಬೆಂಗಳೂರು ಚುನಾವಣೆ; ಮತದಾರರ ಕರಡು ಪಟ್ಟಿ ಪ್ರಕಟ
ವರ್ಷಕ್ಕೆ 7 ದಿನ ಟ್ರಾಫಿಕ್‌ನಲ್ಲೇ ವ್ಯರ್ಥ
ಈ ವರದಿಯಲ್ಲಿರುವ ಅತ್ಯಂತ ಆಘಾತಕಾರಿ ಅಂಶವೆಂದರೆ, ಬೆಂಗಳೂರಿನ ವಾಹನ ಸವಾರರು ವರ್ಷವೊಂದಕ್ಕೆ ಬರೋಬ್ಬರಿ 168 ಗಂಟೆಗಳನ್ನು ಕೇವಲ ರಶ್ ಅವರ್ (Rush Hour) ಟ್ರಾಫಿಕ್‌ನಲ್ಲಿಯೇ ಕಳೆಯುತ್ತಿದ್ದಾರೆ. ಇದನ್ನು ದಿನಗಳ ಲೆಕ್ಕದಲ್ಲಿ ನೋಡುವುದಾದರೆ, ಒಬ್ಬ ವ್ಯಕ್ತಿ ತನ್ನ ಜೀವನದ ಅಮೂಲ್ಯವಾದ 7 ದಿನ, 40 ನಿಮಿಷಗಳನ್ನು ರಸ್ತೆಯಲ್ಲೇ ವ್ಯರ್ಥ ಮಾಡುತ್ತಿದ್ದಾನೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ 12 ಗಂಟೆ 46 ನಿಮಿಷಗಳನ್ನು ಜನರು ಟ್ರಾಫಿಕ್‌ನಲ್ಲಿ ಕಳೆದಿದ್ದಾರೆ.
ಚಿಕ್ಕ ಪ್ರಯಾಣಕ್ಕೂ ಟ್ರಾಫಿಕ್ ಕಾಟ
15 ನಿಮಿಷಗಳಲ್ಲಿ ಬೆಂಗಳೂರಿನಲ್ಲಿ ಸರಾಸರಿ 4.2 ಕಿ.ಮೀ. ಮಾತ್ರ ಸಾಗಲು ಸಾಧ್ಯವಾಗುತ್ತಿದ್ದು, ಇದು ಹಿಂದಿನ ವರ್ಷದಿಗಿಂತ 0.2 ಕಿ.ಮೀ ಕಡಿಮೆ. ದಿನನಿತ್ಯದ ಸಂಚಾರದ ಮೇಲೆಯೇ ಟ್ರಾಫಿಕ್ ಹೇಗೆ ಪರಿಣಾಮ ಬೀರುತ್ತಿದೆ ಎಂಬುದಕ್ಕೆ ಇದು ಸಾಕ್ಷಿ.
ವಿಶ್ವದ ಟಾಪ್ 5 ಸಂಚಾರ ದಟ್ಟಣೆಯ ನಗರಗಳು
- ಮೆಕ್ಸಿಕೋ ಸಿಟಿ, ಮೆಕ್ಸಿಕೋ
- ಬೆಂಗಳೂರು, ಭಾರತ
- ಡಬ್ಲಿನ್, ಐರ್ಲೆಂಡ್
- ಲೋಜ್, ಪೋಲೆಂಡ್
- ಪುಣೆ, ಭಾರತ
ವಿಶ್ವದ ಪಟ್ಟಿಯಲ್ಲಿ ಭಾರತದೇ ಮೇಲುಗೈ
ಜಾಗತಿಕ ಮಟ್ಟದ ಟಾಪ್ 35 ನಗರಗಳ ಪಟ್ಟಿಯಲ್ಲಿ ಭಾರತದ 7 ನಗರಗಳು ಸ್ಥಾನ ಪಡೆದಿರುವುದು ದೇಶದ ನಗರ ಯೋಜನೆಗಳ ವೈಫಲ್ಯಕ್ಕೆ ಹಿಡಿದ ಕನ್ನಡಿ. ಬೆಂಗಳೂರು (2ನೇ ಸ್ಥಾನ) ಮತ್ತು ಪುಣೆ (5ನೇ ಸ್ಥಾನ) ಟಾಪ್ 5ರಲ್ಲಿದ್ದರೆ, ಮುಂಬೈ (18), ನವದೆಹಲಿ (23), ಕೋಲ್ಕತ್ತಾ (29), ಜೈಪುರ (30) ಮತ್ತು ಚೆನ್ನೈ (32) ಕೂಡ ಈ ಪಟ್ಟಿಯಲ್ಲಿವೆ.
ನೆದರ್‌ಲ್ಯಾಂಡ್ಸ್‌ನಲ್ಲಿರುವ ಟಾಮ್‌ಟಾಮ್ ಸಂಸ್ಥೆ ಡಿಜಿಟಲ್ ನಕ್ಷೆ, ನ್ಯಾವಿಗೇಶನ್ ಸಾಫ್ಟ್‌ವೇರ್ ಮತ್ತು ರಿಯಲ್-ಟೈಮ್ ಟ್ರಾಫಿಕ್ ಸೇವೆಗಳಿಗೆ ಹೆಸರುವಾಸಿ. ಜಗತ್ತಿನ ನಗರಗಳ ಸಂಚಾರ ದಟ್ಟಣೆ ಮತ್ತು ಪ್ರಯಾಣ ಸಮಯಗಳನ್ನು ಹೋಲಿಸಲು ಸಂಸ್ಥೆ ಪ್ರತಿವರ್ಷ ಟ್ರಾಫಿಕ್ ಇಂಡೆಕ್ಸ್ ಅನ್ನು ಪ್ರಕಟಿಸುತ್ತದೆ.