ಬೆಂಗಳೂರು: ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ವಲಯಕ್ಕೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳನ್ನು ತಯಾರಿಸುವ ಬೆಂಗಳೂರು ಮೂಲದ ಪ್ರತಿಷ್ಠಿತ 'ಹಿಕಲ್ ಟೆಕ್ನಾಲಜೀಸ್' ತಮಿಳುನಾಡಿನ ಹೊಸೂರಿನಲ್ಲಿ ಬೃಹತ್ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದೆ. 1,60,000 ಚದರ ಅಡಿ ವಿಸ್ತೀರ್ಣದ ಘಟಕ ಇದಾಗಿದೆ.
ಜಾಗತಿಕ ಮಟ್ಟದ 'ಒರಿಜಿನಲ್ ಎಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರರ್ಸ್' (ಒಇಎಂ) ಗ್ರಾಹಕರಿಗೆ ಬೇಕಾದ ಅತ್ಯಂತ ನಿಖರವಾದ ಯಂತ್ರೋಪಕರಣಗಳು, ಫ್ಯಾಬ್ರಿಕೇಶನ್ ಮತ್ತು ವಿಶೇಷ ಬಿಡಿಭಾಗ ಗಳನ್ನು ಪೂರೈಸುವ ಉದ್ದೇಶದಿಂದ ಹಿಕಲ್ ಟೆಕ್ನಾಲಜೀಸ್ ತನ್ನ ಸಾಮರ್ಥ್ಯವನ್ನು ವಿಸ್ತರಿಸಿ ಕೊಳ್ಳುತ್ತಿದೆ. ಈ ಹೊಸ ಘಟಕವು ಕಂಪನಿಯ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಪ್ರಮುಖ ಹೆಜ್ಜೆಯಾಗಿದೆ.
ಅತ್ಯಾಧುನಿಕ ಸೌಲಭ್ಯ, ಗುಣಮಟ್ಟದ ಉತ್ಪಾದನೆ
ಹೊಸೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಘಟಕವು ಸಂಪೂರ್ಣವಾಗಿ 'ಏರೋಸ್ಪೇಸ್ ಕ್ವಾಲಿ ಫೈಡ್' ಕೇಂದ್ರವಾಗಿರಲಿದೆ. ಆಟೊಮೇಷನ್, ಡಿಜಿಟಲೀಕರಣ, ಸುಧಾರಿತ ಉತ್ಪಾದನಾ ಕೌಶಲ್ಯ ಹಾಗೂ ಸುಸ್ಥಿರತೆಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಇದನ್ನೂ ಓದಿ: KIADB: ಜಿಲ್ಲೆಯಲ್ಲಿ ಬಂಧನ ಖಂಡಿಸಿ ಬೀದಿಗಿಳಿದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು
ಜಾಗತಿಕ ಏರೋಸ್ಪೇಸ್ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿರುವ NADCAP ಪ್ರಮಾಣೀಕರಣದ ಮಾನದಂಡಗಳನ್ನು ಪೂರೈಸುವ ರೀತಿಯಲ್ಲಿ ಈ ಘಟಕವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಇದು ಜಾಗತಿಕ ಗ್ರಾಹಕರ ವಿಶ್ವಾಸಾರ್ಹ ಪೂರೈಕಾ ಸರಪಳಿಯ ಪಾಲುದಾರನಾಗಿ ಹೊರಹೊಮ್ಮಲು ಭಾರತಕ್ಕೆ ನೆರವಾಗಲಿದೆ.
ಈ ಮಹತ್ವದ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಹಿಕಲ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಯಶಸ್ ಜೈವೀರ್, "ಹೊಸೂರಿನಲ್ಲಿ ನಮ್ಮ ಈ ಹೊಸ ಘಟಕದ ಶಂಕುಸ್ಥಾಪನೆ ನೆರವೇರಿರುವುದು ಹಿಕಲ್ ಕಂಪನಿಯ ನಾಲ್ಕು ದಶಕಗಳ ಯಶಸ್ವಿ ಪಯಣದಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ. ಜಾಗತಿಕ ಗುಣಮಟ್ಟದಲ್ಲಿ ಸಂಕೀರ್ಣ ಹಾಗೂ ನಿಖರವಾದ ಉಪಕರಣಗಳನ್ನು ತಯಾರಿಸುವ ಭಾರತದ ಸಾಮರ್ಥ್ಯದ ಮೇಲೆ ಜಾಗತಿಕ ಗ್ರಾಹಕರು ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ಆಟೊಮೇಷನ್ ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತಿರುವ ಈ ಘಟಕವು, ಜಾಗತಿಕ ಏರೋಸ್ಪೇಸ್ ಪೂರೈಕಾ ಸರಪಳಿಯಲ್ಲಿ ಭಾರತದ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸೂರಿನಲ್ಲೇ ಯಾಕೆ?
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 'ಹೊಸೂರು', ಇತ್ತೀಚೆಗೆ ಪ್ರಮುಖ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಹೊರಹೊಮ್ಮುತ್ತಿದೆ. ಬೆಂಗಳೂರಿನ ಏರೋಸ್ಪೇಸ್ ಮತ್ತು ರಕ್ಷಣಾ ವ್ಯವಸ್ಥೆಗೆ ಹತ್ತಿರವಿರುವ ಕಾರಣ, ಇಲ್ಲಿ ಅತ್ಯುತ್ತಮ ಕೈಗಾರಿಕಾ ಮೂಲಸೌಕರ್ಯ ಹಾಗೂ ಕೌಶಲ್ಯಭರಿತ ತಾಂತ್ರಿಕ ಕಾರ್ಮಿಕರು ಸುಲಭವಾಗಿ ಲಭ್ಯವಿದ್ದಾರೆ. ಈ ಕಾರಣಕ್ಕಾಗಿ ಹಿಕಲ್ ತನ್ನ ನೂತನ ಘಟಕವನ್ನು ಇಲ್ಲಿ ಸ್ಥಾಪಿಸುತ್ತಿದೆ.