ರಾಜ್ಯ ಸಚಿವ ಸಂಪುಟ (Cabinet Minister) ಖಾತೆ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಜಲಸಂಪನ್ಮೂಲ ಖಾತೆ ನೀಡಿರುವುದಕ್ಕೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. "ನನಗೆ ಬೆಂಗಳೂರು ಉಸ್ತುವಾರಿ ಖಾತೆ ನೀಡುವುದಾಗಿ ಡಿ.ಕೆ.ಶಿವಕುಮಾರ್ (DK Shivakumar) ಅವರೇ ಹೇಳಿದ್ದರು. ಆದರೆ ನೀಡಿಲ್ಲ.. ನಾನು ಆತ್ಮ ಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮುಂದುವರೆದು, ನನಗೆ ಯಾರ ಮೇಲೂ ಬೇಸರವಿಲ್ಲ. ಯಾರು ಕರೆದು ಮಾತನಾಡಿದರೂ ರಾಜೀನಾಮೆ ವಾಪಾಸ್ ಪಡೆಯುವುದಿಲ್ಲ' ಎಂದು ತಮ್ಮ ಅಭಿಪ್ರಾಯ ಹೇಳಿದರು. "ನಾನು ಹೋಗಿ ರಾಜೀನಾಮೆ ನೀಡುವುದಿಲ್ಲ ಪ್ರಿನ್ಸಿಪಾಲ್ ಸೆಕ್ರೆಟರಿ ತುಷಾರ್ಗಿರಿನಾಥ್ ಅವರಿಗೆ ಮಾಜಿ ಮೇಯರ್ ಮಂಜುನಾಥ್ ಅವರು ಹೋಗಿ ರಾಜೀನಾಮೆ ಪತ್ರ ನೀಡಲಿದ್ದಾರೆ" ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಚಿವ ಸ್ಥಾನಕ್ಕಷ್ಟೇ ರಾಜೀನಾಮೆ ಸಚಿವ ಸ್ಥಾನಕ್ಕಲ್ಲ
ನನಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಾಗಲಿ ಅಥವಾ ಸಿದ್ದರಾಮಯ್ಯ ಅವರ ಮೇಲಾಗಲಿ ಯಾವುದೇ ವೈಯಕ್ತಿಕ ಕೋಪವಿಲ್ಲ. ನಾನು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂಬ ಸತ್ಯ ಜನರಿಗೆ ಗೊತ್ತಾಗಬೇಕಷ್ಟೇ. ನಾನು ಕಳೆದ 53 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ನನಗೆ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟಿದೆ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಯೇ ಹೊರತು, ಕಾಂಗ್ರೆಸ್ ಪಕ್ಷಕ್ಕಲ್ಲ. ನನ್ನ ಜೀವನದಲ್ಲಿ ಎಂದಿಗೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಗೃಹ, ರಾಮಲಿಂಗಾ ರೆಡ್ಡಿಗೆ ಜಲ ಸಂಪನ್ಮೂಲ; ನೂತನ ಸಚಿವರಿಗೆ ಖಾತೆ ಹಂಚಿಕೆ
ನಾನು ಸತತ 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವನಾಗಿದ್ದೆ. ಆ ಬಳಿಕ ಸಿದ್ದರಾಮಯ್ಯ ಅವರ ಸಂಪುಟದಲ್ಲಿ 2 ಬಾರಿ ಸಚಿವರಾಗಿ ಕೆಲಸ ಮಾಡಿದ್ದೇನೆ. ಈ ಹಿಂದೆ ನನಗೆ ನೀಡಲಾಗಿದ್ದ ಎಲ್ಲಾ ಇಲಾಖೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಇತಿಹಾಸ ನನಗಿದೆ. ನಾನು ಯಾವತ್ತೂ ಯಾವುದೇ ಮುಖ್ಯಮಂತ್ರಿಗಳ ಬಳಿ ಹೋಗಿ ಮಂತ್ರಿ ಮಾಡಿ ಎಂದಾಗಲಿ ಅಥವಾ ಇಂತಹದ್ದೇ ಇಲಾಖೆ ಬೇಕು ಎಂದಾಗಲಿ ಕೇಳಿರಲಿಲ್ಲ. ಈ ಬಾರಿಯೂ ನಾನು ಶಿವಕುಮಾರ್ ಅವರ ಬಳಿಯಾಗಲಿ ಅಥವಾ ಹೈಕಮಾಂಡ್ ಬಳಿಯಾಗಲಿ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಹಿಂದೆ ಡಿಕೆ ಶಿವಕುಮಾರ್, ‘ನಾನು ಎರಡೂವರೆ ವರ್ಷಗಳ ಆದ ಮೇಲೆ ಮುಖ್ಯಮಂತ್ರಿಯಾಗುತ್ತೇನೆ, ಆ ಸಂದರ್ಭದಲ್ಲಿ ನನ್ನ ಬಳಿ ಇರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೇ ಕೊಡುತ್ತೇನೆ’ ಎಂದು ಮಾತು ಕೊಟ್ಟಿದ್ದರು ಎಂದು ಹೇಳಿದ್ದಾರೆ.