ಬೆಂಗಳೂರು: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ತಮಗೆ ಹೃದಯ ಸಂಬಂಧಿ ಸಮಸ್ಯೆ ಇದೆ (MLA Byrathi Basavaraj) ಎಂದು ತಿಳಿಸಿದ್ದು, ಈ ಹಿನ್ನೆಲೆ 2 ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಹಾಗೂ ಪರೀಕ್ಷೆ ನಡೆಸಲಾಗಿತ್ತು. ಇದೀಗ ಬೆಂಗಳೂರಿನ ಜಯದೇವ ಆಸ್ಪತ್ರೆಯ ವೈದ್ಯರು ವರದಿಯನ್ನು ನೀಡಿದ್ದು, ಬೈರತಿ ಅವರ ಆರೋಗ್ಯ ಸರಿಯಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಈ ಕುರಿತು ತೀರ್ಪು ನೀಡಿದ್ದು ಬೈರತಿ ಬಸವರಾಜ್ ಅವರನ್ನು 7 ದಿನಗಳ CID ಕಸ್ಟಡಿಗೆ ನೀಡಲು ಆದೇಶಿಸಿದೆ.
42 ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಸಿಐಡಿ ಪರವಾಗಿ ಎಸ್‌ಪಿಪಿ ಅಶೋಕ್ ನಾಯ್ಕ್, ಸಿಐಡಿ ತನಿಖಾಧಿಕಾರಿ ಡಿವೈಎಸ್ ಪಿ ಗೌತಮ್ ಹಾಜರಿದ್ದರು. ಜಯದೇವ ಆಸ್ಪತ್ರೆಯ ವೈದ್ಯರು ನೀಡಿದ ವರದಿ ಆಧಾರದ ಮೇಲೆ ಏಳು ದಿನಗಳ ಕಾಲ (ಫೆಬ್ರವರಿ 21ರವರೆಗೆ) ಕಸ್ಟಡಿಗೆ ನೀಡಿ ಆದೇಶ ನೀಡಲಾಗಿದೆ. ಎಸ್‌ಪಿಪಿ ಅವರು 9 ದಿನಗಳ ಕಾಲ ಕಸ್ಟಡಿಗೆ ಮನವಿ ಮಾಡಿದ್ರು. ಇದಕ್ಕೆ ಬೈರತಿ ಬಸವರಾಜ್ ಪರ ವಕೀಲ ಆಕ್ಷೇಪಣೆ ಸಲ್ಲಿಸಿದ್ರು. ಬಳಿಕ ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಬೈರತಿ ಬಸವರಾಜ್ ಅವರನ್ನ ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.
ಬೈರತಿ ಬಸವರಾಜುಗೆ ಹೃದಯ ಸಮಸ್ಯೆ, ಬೌರಿಂಗ್ ಆಸ್ಪತ್ರೆಗೆ ದಾಖಲು
ಫೆ.12 ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಬೈರತಿ ಬಸವರಾಜ್ ಅವರನ್ನು ಪೊಲೀಸರು ಬಂಧಿಸಿದ್ದರು. ಮರುದಿನ ಆರೋಗ್ಯ ತಪಾಸಣೆ ನಡೆಸಿದ್ದ ವೇಳೆ ಅವರಿಗೆ ಇಸಿಜಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರಿಗೆ ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಮ್ ಮಾಡಿಸಲಾಗಿತ್ತು.