ಬೆಂಗಳೂರು, ಜ.26: ಸಂವಿಧಾನದ ಮುಖ್ಯಸ್ಥರಾದ ರಾಜ್ಯದ ಗೌರವಾನ್ವಿತ ರಾಜ್ಯಪಾಲರಿಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಜ.27ರಂದು ನಾಳೆ ಬೆಳಗ್ಗೆ 10.30 ಗಂಟೆಗೆ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಬಿಜೆಪಿ ಮತ್ತು ಜೆಡಿಎಸ್ ಪ್ರತಿಪಕ್ಷದವರೆಲ್ಲ ಸೇರಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ (N Ravikumar) ತಿಳಿಸಿದ್ದಾರೆ.
ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜಂಟಿ ಅಧಿವೇಶನವನ್ನು ಮುಗಿಸಿ ವಾಪಸ್ ಹೋಗುವ ಸಂದರ್ಭದಲ್ಲಿ ವಿಧಾನಸೌಧದ ಅಸೆಂಬ್ಲಿ ಸಭಾಂಗಣದಲ್ಲಿ ರಾಜ್ಯಪಾಲರಿಗೆ ಬೆರಳು ತೋರಿಸಿ, ಎಚ್ಚರಿಕೆ ಸಂದೇಶ ನೀಡಿ ಅಪಮಾನ ಮಾಡಿದ್ದಾರೆ. ಅಲ್ಲದೇ ಅಗೌರವವನ್ನು ತೋರಿಸಿದ್ದಾರೆ. ಅವರಿಗೆ ಧಿಕ್ಕಾರ ಕೂಗಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್, ಎಸ್. ರವಿ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸುವುದಾಗಿ ತಿಳಿಸಿದರು.
ಕರ್ನಾಟಕದಲ್ಲಿ ಪೌರಾಯುಕ್ತೆ ಅಮೃತಾ ಗೌಡರಿಗೆ ಅವಾಚ್ಯ ಶಬ್ದಗಳಿಂದ ಹೀಯಾಳಿಸಿದ, ಅವರ ಗೌರವಕ್ಕೆ ಕುಂದು ಬರುವ ರೀತಿ ಅಪಮಾನ ಮಾಡಿದ ಕಾಂಗ್ರೆಸ್ಸಿನ ನಾಯಕ ರಾಜೀವ್ ಗೌಡ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿದರು.
ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯವರ ಮನೆಗೆ ಫೈರಿಂಗ್ ಮಾಡಿ, ಸುರಕ್ಷತೆಗೆ ಧಕ್ಕೆ ಉಂಟು ಮಾಡಿದ, ಅವರ ಮನೆಮಂದಿಯನ್ನು ಭಯಪಡಿಸಿದ ಬಳ್ಳಾರಿ ಶಾಸಕ ಭರತ್ ರೆಡ್ಡಿಯವರನ್ನು ಇನ್ನೂ ಬಂಧಿಸಿಲ್ಲ. ಫೈರಿಂಗ್ ಘಟನೆಯ ತನಿಖೆಯನ್ನು ಸಿಬಿಐಗೆ ಕೊಟ್ಟಿಲ್ಲ. ಮೊನ್ನೆ ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯವರ ‘ಮಾಡೆಲ್ ಹೌಸ್ʼ ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಅಪ್ರಾಪ್ತ ವಯಸ್ಕ ಹುಡುಗರನ್ನು ಆಯೋಜನೆ ಮಾಡಿ, ಈ ಕೆಲಸಕ್ಕೆ ಅಣಿಗೊಳಿಸಿ, ಆ ಮನೆ ಸುಟ್ಟು ಹಾಕಿದ ತಂತ್ರ, ಕುತಂತ್ರ ಯಾರು ಮಾಡಿದ್ದಾರೋ ಅದನ್ನು ತನಿಖೆಗೆ ಒಳಪಡಿಸಬೇಕು. ಆ ಘಟನೆಯಲ್ಲಿ ಭಾಗವಹಿಸಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತದೆ ಎಂದರು.
2 ಸಾವಿರಕ್ಕೆ ಮರುಳಾಗಬೇಡಿ, 5 ವರ್ಷ ಒಂದು ಅವಕಾಶ ಕೊಡಿ: ಗೃಹಲಕ್ಷ್ಮಿಯರಿಗೆ ಎಚ್.ಡಿ. ಕುಮಾರಸ್ವಾಮಿ ಮನವಿ
ವಿಬಿ ಜಿ ರಾಮ್ ಜಿ ಬಗ್ಗೆ ನಾಳೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಹಳ್ಳಿಗಳು, ದೇಶಾದ್ಯಂತ ಇರುವ ಗ್ರಾಮಾಂತರ ಪ್ರದೇಶದ ಜನರಿಗೆ, ಕೂಲಿ ಕಾರ್ಮಿಕರಿಗೆ ಹಿಂದಿಗಿಂತಲೂ ಹೆಚ್ಚು ಉದ್ಯೋಗ ಕೊಡಲು ಕಾಯ್ದೆ ಮಾರ್ಪಾಡು ಮಾಡಲಾಗಿದೆ. ಆದರೂ, ಕಾಂಗ್ರೆಸ್ಸಿನವರು ಇದು ಉದ್ಯೋಗ ಕಸಿಯುವ ಯೋಜನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಸುಳ್ಳು ಉತ್ಪಾದನಾ ಪಕ್ಷವಾದ ಕಾಂಗ್ರೆಸ್ ವಿರುದ್ಧ ಈ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ತಿಳಿಸಿದರು.