ಬೆಂಗಳೂರು: ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಆವರಣದಲ್ಲಿ ಸಿಎಂ ಹಾಗೂ ಸಚಿವರು ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ರಾಜಕೀಯ ಪ್ರತಿಭಟನೆ (Congress Protest) ನಡೆಸಲು ಪೊಲೀಸ್ ಇಲಾಖೆ ಅವಕಾಶ ನೀಡಿರುವ ಕುರಿತು ರಾಜ್ಯ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕು ಎಂದು ರಾಜ್ಯ ಬಿಜೆಪಿ (BJP Karnataka) ಆಗ್ರಹಿಸಿದೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಬಿಜೆಪಿ ನಿಯೋಗದಿಂದ ದೂರು ಸಲ್ಲಿಸಲಾಗಿದೆ.
ಅ.1ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಕಾಂಗ್ರೆಸ್ ರಾಜಕೀಯ ಮುಖಂಡರೊಂದಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಅತ್ಯಂತ ಗಂಭೀರವಾಗಿದ್ದು, ಈ ಕುರಿತು ನಮ್ಮ ತೀವ್ರ ಆಕ್ಷೇಪವನ್ನು ದಾಖಲಿಸುತ್ತಿದ್ದೇವೆ.
ಕರ್ನಾಟಕ ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠವು ಆದೇಶ ಮಾಡಿ ಫ್ರೀಡಂ ಪಾರ್ಕ್ ಹೊರತಾಗಿ ಬೇರೆ ಕಡೆ ಧರಣಿ/ಪ್ರತಿಭಟನೆ ನಡೆಸಲು ನಿರ್ಬಂಧ ಹೇರಿದೆ. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅಗೌರವವನ್ನು ತೋರಿಸಿ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳು ಚುನಾವಣಾ ಕಚೇರಿ ಆವರಣದಲ್ಲಿ ಯಾವುದೇ ಅನುಮತಿ ಇಲ್ಲದೆ ಧರಣಿ/ಪ್ರತಿಭಟನೆಯನ್ನು ನಡೆಸಿರುವುದು ನ್ಯಾಯಾಲಯ ಆದೇಶದ ಉಲ್ಲಂಘನೆ ಆಗಿರುತ್ತದೆ.
ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಲ್ಲ. ಅದು ಸಂವಿಧಾನಾತ್ಮಕವಾಗಿ ಸ್ವತಂತ್ರವಾದ ಚುನಾವಣಾ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಇಂತಹ ಸಂಸ್ಥೆಯ ಕಚೇರಿ ಆವರಣವನ್ನೇ ರಾಜಕೀಯ ಪ್ರತಿಭಟನೆಗೆ ಬಳಸಿಕೊಳ್ಳಲು ಅವಕಾಶ ನೀಡಿರುವುದು ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆ ಹಾಗೂ ಸಾರ್ವಜನಿಕರ ವಿಶ್ವಾಸದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಈ ಹಿನ್ನೆಲೆಯಲ್ಲಿ ಕೆಳಗಿನ ಪ್ರಶ್ನೆಗಳಿಗೆ ಪೊಲೀಸ್ ಆಯುಕ್ತರು ಸ್ಪಷ್ಟ ಉತ್ತರ ನೀಡಬೇಕು:
- ಇದೊಂದು ಉಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿದ್ದು, ನ್ಯಾಯಾಲಯ ಪ್ರಕರಣ ಆಗಿರುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು, ಸಚಿವರುಗಳ ಮೇಲೆ ಎಫ್‌ಐಆರ್ ದಾಖಲಿಸಿ ಬಂಧಿಸಬೇಕಾಗಿ ಕೋರುತ್ತೇವೆ.
- ಮುಖ್ಯಮಂತ್ರಿ ಹಾಗೂ ಸಚಿವರು ಚುನಾವಣಾ ಆಯೋಗದ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದು ಯಾರು?
- ಈ ಪ್ರತಿಭಟನೆಗೆ ಲಿಖಿತವಾಗಿ ಅನುಮತಿ ನೀಡಲಾಗಿತ್ತೇ? ನೀಡಿದ್ದರೆ, ಅದರ ಪ್ರತಿಯನ್ನು ಸಾರ್ವಜನಿಕಗೊಳಿಸಬೇಕು.
- ಸಾಮಾನ್ಯ ನಾಗರಿಕರು ಅಥವಾ ಪ್ರತಿಪಕ್ಷಗಳು ಇದೇ ರೀತಿ ಚುನಾವಣಾ ಕಚೇರಿ ಆವರಣದಲ್ಲಿ ಧರಣಿ ನಡೆಸಲು ಬಂದರೆ ಅವರಿಗೆ ಇದೇ ರೀತಿಯ ಅವಕಾಶ ಪೊಲೀಸ್ ಇಲಾಖೆ ನೀಡಲಾಗುತ್ತದೆಯೇ?
- ಮುಖ್ಯಮಂತ್ರಿ ಹಾಗೂ ಸಚಿವರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕೈಗೊಂಡ ಕ್ರಮಗಳ ಸಂಪೂರ್ಣ ವರದಿಯನ್ನು ಬಹಿರಂಗಪಡಿಸಬೇಕು.
- ಆದ್ದರಿಂದ ನಿನ್ನೆ ನಡೆದ ಘಟನೆಯ ಕುರಿತು ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ, ಪೊಲೀಸ್ ಬಂದೋಬಸ್ತ್ ವಿವರ, ಅನುಮತಿ ಪತ್ರ ಹಾಗೂ ಸಂಬಂಧಿತ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಕ್ರಮದ ವಿವರವನ್ನು ಲಿಖಿತವಾಗಿ ತಿಳಿಸಬೇಕೆಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.