Voter Deletion Claims: ರಾಜ್ಯ ಕಾಂಗ್ರೆಸ್ ಪ್ರತಿಭಟನೆಗೆ ಚುನಾವಣಾ ಆಯೋಗ ಸ್ಪಂದನೆ; SIRನಲ್ಲಿ ಸುಳ್ಳು ಆಕ್ಷೇಪಣೆ ಮೂಲಕ ಫಾರಂ-7 ಸಲ್ಲಿಸಿದವರ ವಿರುದ್ಧ ಕ್ರಮಕ್ಕೆ ಆದೇಶ
Congress Protest: ಚುನಾವಣಾ ನೋಂದಣಿ ಅಧಿಕಾರಣಿಗಳಿಗೆ (ERO) ನಮೂನೆ 7 ರಲ್ಲಿ ಬೃಹತ್ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವ ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ. ಅರ್ಜಿಯಲ್ಲಿ ಲಿಖಿತವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆ ಅಥವಾ ಘೋಷಣೆ ನೀಡಿದ ಅರ್ಜಿದಾರರ ವಿರುದ್ಧ ಸಂಬಂಧಪಟ್ಟ EROಗಳು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೂಚನೆ ನೀಡಿದ್ದಾರೆ.
-
ಬೆಂಗಳೂರು: ಪೂರ್ವಮುದ್ರಿತ ವಿವರಗಳನ್ನು ಒಳಗೊಂಡ ಫಾರಂ-7 ಮೂಲಕ ರಾಜ್ಯದ ನಿರ್ದಿಷ್ಟ ಸಮುದಾಯಗಳ ಅಧಿಕೃತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಅಳಿಸುವ ಷಡ್ಯಂತ್ರದಲ್ಲಿ (Voter Deletion Claims) ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಗೆ (Congress Protest) ಚುನಾವಣಾ ಆಯೋಗ ಸ್ಪಂದಿಸಿದೆ.
ಬೆಂಗಳೂರಿನ ಗಾಂಧಿನಗರದಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿ ಎದುರು ಗುರುವಾರ ಮಧ್ಯಾಹ್ನ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು. ಆದರೆ, ತಮ್ಮ ಮನವಿಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿಗೆ ಸಿಎಂ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆಯನ್ನು ಚುನಾವಣಾ ಆಯೋಗ ನೀಡಿದೆ.
ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ನಡೆಸುತ್ತಿದ್ದು, ನಿರ್ದಿಷ್ಟ ಸಮುದಾಯಗಳ ಮತಗಳನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಿಸಲು ಪ್ರಯತ್ನ ನಡೆದಿದೆ ಎಂಬುವುದು ಕಾಂಗ್ರೆಸ್ ಆರೋಪವಾಗಿತ್ತು. ಸ್ವತಃ ಸಿಎಂ ಡಿ.ಕೆ ಶಿವಕುಮಾರ್ ಸಂಪುಟ ಸಹೋದ್ಯೋಗಿಗಳು ಹಾಗೂ ಶಾಸಕರ ಜತೆಗೂಡಿ ಚುನಾವಣಾ ಆಯೋಗದ ಕಚೇರಿ ಬಳಿ ಅಹೋರಾತ್ರಿ ಹೋರಾಟಕ್ಕೆ ಮುಂದಾಗಿದ್ದರು.
ಈ ಹೋರಾಟದ ಪರಿಣಾಮ ಹಕ್ಕು ಮತ್ತು ಸುಳ್ಳು ಆಕ್ಷೇಪಣೆ ಮೂಲಕ ಮತದಾರರ ಹೆಸರು ಕೈಬಿಡಲು ಅರ್ಜಿ ಕೊಟ್ಟವರ ಮೇಲೆ ಕ್ರಮಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. ಹೀಗಾಗಿ ಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರ ಅಹೋರಾತ್ರಿ ಧರಣಿ ಹಿಂಪಡೆಯಲಾಗಿದೆ.
ಮುಖ್ಯ ಚುನಾವಣಾಧಿಕಾರಿ ಆದೇಶದಲ್ಲಿ ಏನಿದೆ?
ಚುನಾವಣಾ ನೋಂದಣಿ ಅಧಿಕಾರಣಿಗಳಿಗೆ (ERO) ನಮೂನೆ 7 ರಲ್ಲಿ ಬೃಹತ್ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವ ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ. ಅಂತಹ ಅರ್ಜಿಗಳು ನಿಜವಾದವುಗಳಲ್ಲ ಎಂಬ ಆರೋಪವೂ ಇದೆ. ಈ ಸಂಬಂಧ, ಜನತಾ ಪ್ರಾತಿನಿಧ್ಯದ ಕಾಯಿದೆ, 1950ರ ಸೆಕ್ಷನ್ 31ರ ಅವಕಾಶಗಳ ಪ್ರಕಾರ, ಅರ್ಜಿಯಲ್ಲಿ (ನಮೂನೆ 6, 6A, 7 ಮತ್ತು 8) ಲಿಖಿತವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆ ಅಥವಾ ಘೋಷಣೆ ನೀಡಿದ ಅರ್ಜಿದಾರರ ವಿರುದ್ಧ ಸಂಬಂಧಪಟ್ಟ EROಗಳು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಇನ್ನು ಕ್ರಮಕ್ಕೆ ಮುಂಚಿತವಾಗಿ ಮತದಾರರ ನೋಂದಣಿ ನಿಯಮಗಳು, 1960ರ ನಿಯಮ 20ರ ಪ್ರಕಾರ ವಿಚಾರಣೆ ನಡೆಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೂಚನೆ ನೀಡಿದ್ದಾರೆ.