Bomb threat: ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್
Bengaluru airport: ಅನಾಮಧೇಯ ವ್ಯಕ್ತಿ ಬಾಂಬ್ ಬೆದರಿಕೆ ಹಾಕಿದ್ದು, ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್-1ರ ತೀವ್ರ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಕೆಲ ದಿನಗಳ ಹಿಂದೆಯೂ ಇಂಥಹದ್ದೇ ಘಟನೆ ನಡೆದಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಹ್ಮದಾಬಾದ್ಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಪತ್ರ ಬಂದಿತ್ತು. ಇದೀಗ ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದಿರುವುದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
-
ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ (Bomb threat) ಸಂದೇಶ ಬಂದಿದೆ. ಇದರಿಂದ ಟರ್ಮಿನಲ್-1ರಲ್ಲಿ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಲಖನೌದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ 6E-231 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ.
ಅನಾಮಧೇಯ ವ್ಯಕ್ತಿ ಬಾಂಬ್ ಬೆದರಿಕೆ ಹಾಕಿದ್ದು, ಟರ್ಮಿನಲ್-1ರ ಟರ್ಮಿನಲ್ ಮ್ಯಾನೇಜರ್ ಕಚೇರಿಯಲ್ಲಿ BTAC ಸಭೆ ನಡೆಸಿದೆ. ಬೆದರಿಕೆ ಆಧರಿಸಿ ಅಗತ್ಯ ಭದ್ರತಾ ಕ್ರಮ ಜಾರಿ ಮಾಡಲಾಗಿದೆ. ವಿಮಾನ ಹಾಗೂ ಟರ್ಮಿನಲ್ ಪ್ರದೇಶದಲ್ಲಿ ತೀವ್ರ ಭದ್ರತಾ ಪರಿಶೀಲನೆ ನಡೆಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಕೊಂಚ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೆಲ ದಿನಗಳ ಹಿಂದೆಯೂ ಇಂಥಹದ್ದೇ ಘಟನೆ ನಡೆದಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಹ್ಮದಾಬಾದ್ಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಪತ್ರ ಬಂದಿತ್ತು. ಟೇಕ್ಆಫ್ಗೆ ಹೊರಟ್ಟಿದ್ದ ವಿಮಾನದಲ್ಲಿ ಪತ್ರ ಕಂಡು ಸಿಬ್ಬಂದಿ ಬೆಚ್ಚಿಬಿದ್ದಿದ್ದರು. ತಕ್ಷಣ ಪ್ರಯಾಣಿಕನ್ನು ಕೆಳಗೆ ಇಳಿಸಿ, ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ವಿಮಾನವನ್ನು ಪರಿಶೀಲನೆ ನಡೆಸಿದ್ದರು.