ಬೆಂಗಳೂರು: ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital wall collapse) ಬುಧವಾರ ಸಂಜೆ ಕಾಂಪೌಂಡ್ ಗೋಡೆ ಕುಸಿದು ನಡೆದ ದುರಂತದಲ್ಲಿ ಸಾವಿನ ಸಂಖ್ಯೆ 8 ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಮೃತರು ಹಾಗೂ ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಕುಸಿದ ಪರಿಣಾಮ ಬೀದಿಬದಿ ವ್ಯಾಪಾರ ಮಾಡ್ತುದ್ದ ಐವರು ಹಾಗೂ ಇಬ್ಬರು ಪಾದಚಾರಿಗಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಬೆಂಗಳೂರಿನಲ್ಲಿ ಗೋಡೆ ಕುಸಿತದಿಂದ ಸಂಭವಿಸಿದ ಅನಾಹುತವು ಅತ್ಯಂತ ದುರದೃಷ್ಟಕರ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುವೆ ಎಂದು ಪ್ರಧಾನ ಮಂತ್ರಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ. ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಮೃತರ ಗುರುತು ಪತ್ತೆಯಾಗಿದ್ದು, ಬೌರಿಂಗ್ ಆಸ್ಪತ್ರೆ ದುರಂತದಲ್ಲಿ ಮೃತರಾದವರ ಗುರುತು ಪತ್ತೆಯಾಗಿದೆ. ಮಾಯಾ (51), ಮುಬಿನ್ ತಾಜ್ (49), ತಬೀನ್ ತಾಜ್ (47), ಸಿಜಿ (47), ಅಜು (35), ಸಾಜಿದ್ (20), ಪ್ರೀತಿ(5) ಎಂದು ಹೇಳಲಾಗಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದ ಸ್ಥಳ ಪರೀಶಲನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಬೌರಿಂಗ್ ಆಸ್ಪತ್ರೆ ಬಳಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ಗೋಡೆ ಕುಸಿದ ಘಟನೆ ಬಗ್ಗೆ ಆಕ್ರೋಶಗೊಂಡ ಸಿಎಂ, ಹಳೆ ಗೋಡೆ ನೋಡೋಕಾಗಲ್ವಾ...? ನಿಮ್ಮ ಮಧ್ಯೆ ಕೋ ಆರ್ಡಿನೇಷನ್ ಇರಲ್ವಾ? ಎಚ್ಚರವಹಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.