ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣಿಸಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಪ್ರಯಾಣದ ವೇಳೆ ಸಹ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದ ಸಚಿವರು, ಬಸ್ ಸೇವೆಯ ಗುಣಮಟ್ಟ, ಸಿಬ್ಬಂದಿಯ ವರ್ತನೆ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಪರಿಶೀಲನೆ ವೇಳೆ ಬಸ್ ನಿಲ್ಲಿಸದ ಬಸ್ ಡ್ರೈವರ್, ಕಂಡಕ್ಟರ್ ಅಮಾನತಿಗೆ ಸಚಿವರು ಸೂಚಿಸಿದ್ದಾರೆ.
ಶನಿವಾರ ರಾತ್ರಿ 7.10 ಯಿಂದ 9.10 ರವರೆಗೆ ಜಯಮಹಲ್‌ನಿಂದ ಟಿವಿ ಟವರ್, ಟಿವಿ ಟವರ್‌ನಿಂದ ಆರ್ ಟಿ ನಗರ, ಆರ್ ಟಿ ನಗರದಿಂದ ಸಿಬಿಐ ರಸ್ತೆ, ಸಿಬಿಐ ಜಂಕ್ಷನ್‌ನಿಂದ ಮುಂದಿನ ನಿಲ್ದಾಣ, ಸಿಬಿಐ ಸ್ಟಾಪ್‌ನಿಂದ ಮಸೀದಿ ಸ್ಟಾಪ್‌ನಿಂದ ಬಳ್ಳಾರಿ ಮುಖ್ಯರಸ್ತೆ, ಅಲ್ಲಿಂದ ಆಟೋದಲ್ಲಿ ಹೆಬ್ಬಾಳಕ್ಕೆ, ಹೆಬ್ಬಾಳ ದಿಂದ ಭೂಪಸಂದ್ರ, ಹೆಬ್ಬಾಳ ರಿಂಗ್ ರಸ್ತೆಯಿಂದ ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ನಾಗವಾರ ದಿಂದ ಹೆಣ್ಣೂರು, ಹೆಣ್ಣೂರಿನಿಂದ ಹೆಣ್ಣೂರು ಬಂಡೆ, ಬಂಡೆಯಿಂದ ಬೈರತಿ ಬಂಡೆ, ಬೈರತಿ ಬಂಡೆಯಿಂದ ಗೆದ್ಲಹಳ್ಳಿವರೆಗೆ 10 ಕ್ಕೂ ಹೆಚ್ಚು ಬಸ್ ಗಳಲ್ಲಿ ಪ್ರಯಾಣ ಮಾಡಿ, ಬಿಎಂಟಿಸಿ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಪರಿಶೀಲಿಸಿದರು.
ಮಾಸ್ಕ್ ಹಾಕಿ ಪ್ರಯಾಣ ಮಾಡಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗಾಗಲೀ ಅಥವಾ ಚಾಲಕ, ಕಂಡಕ್ಟರ್‌ಗೆ ಆಗಲೀ ಅವರು ಸಚಿವರು ಎಂಬುದು ಗಮನಕ್ಕೆ ಬರಲಿಲ್ಲ. ಪ್ರತಿಯೊಂದು ಬಸ್ ಗೂ ನಿಗದಿತ ಹಣ ನೀಡಿ ಪ್ರಯಾಣಿಸಿದ ಸಚಿವರು, ಕೆಲವು ಪ್ರಯಾಣಿಕ ರೊಂದಿಗೆ ಬಸ್ ಸಂಚಾರದ ಬಗ್ಗೆ ವಿಚಾರಿಸಿದರು.
ಚಿಲ್ಲರೆ ನೀಡದ್ದಕ್ಕೆ ಸಚಿವರನ್ನೇ ಇಳಿಸಿಬಿಟ್ಟ ನಿರ್ವಾಹಕ!
ಹೆಬ್ಬಾಳ–ನಾಗಶೆಟ್ಟಿಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರು ಎದುರಿಸುವ ಚಿಲ್ಲರೆ ಸಮಸ್ಯೆಯನ್ನು ಸಚಿವರು ಸ್ವತಃ ಅನುಭವಿಸಿದರು. 100 ನೋಟು ನೀಡಿ ಟಿಕೆಟ್ ಕೇಳಿದಾಗ, ಚಿಲ್ಲರೆ ಇಲ್ಲ ಎಂಬ ಕಾರಣ ನೀಡಿ ನಿರ್ವಾಹಕರು ಬಸ್‌ನಿಂದ ಇಳಿಯುವಂತೆ ಹೇಳಿದ ಘಟನೆ ನಡೆಯಿತು. ಈ ಕುರಿತು ಸಚಿವರು ಅಧಿಕಾರಿಗಳ ಗಮನ ಸೆಳೆದರು.
ಇದನ್ನೂ ಓದಿ: Byrathi Suresh: ಸರ್ಕಾರದಿಂದ ಗಾಯಾಳುಗಳ ಚಿಕಿತ್ಸಾ ವೆಚ್ಚ: ಬೈರತಿ ಸುರೇಶ್
ಚಾಲಕ, ಕಂಡಕ್ಟರ್ ಅಮಾನತಿಗೆ ಸೂಚನೆ
ಇನ್ನು ಜಯಮಹಲ್‌ನಿಂದ ಸಾಗುತ್ತಿದ್ದ ಕೆಎ 57 ಎಫ್ 3372 ಸಂಖ್ಯೆಯ ಬಸ್ ಫನ್ ವರ್ಲ್ಡ್ ಸ್ಟಾಪ್‌ನಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ನಿಲುಗಡೆ ಮಾಡಲಿಲ್ಲ. ಹಿಂದಿನ ಬಸ್‌ನಲ್ಲಿದ್ದ ಸಚಿವ ಬೈರತಿ ಸುರೇಶ್ ಅವರು, ಸದರಿ ಬಸ್‌ನ ಕಂಡಕ್ಟರ್ ದಯಾನಂದ್ ಮತ್ತು ಚಾಲಕ ಮುಸ್ತಾಕ್ ಅವರನ್ನು ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
30 ರೂಪಾಯಿ ಬದಲು 36 ಕೇಳಿದ ಆಟೋ ಚಾಲಕ
ನಾಗಶೆಟ್ಟಿಯಲ್ಲಿ ಆಟೋ ಏರಿದ ಸಚಿವರು ಸುಮಾರು ಒಂದು ಕಿಲೋಮೀಟರ್ ಪ್ರಯಾಣಿಸಿ ಇಳಿದುಕೊಂಡರು. ಈ ಸಂದರ್ಭದಲ್ಲಿ ಆಟೋ ಮೀಟರ್ ನಲ್ಲಿ 30 ರೂಪಾಯಿ ತೋರಿಸಿದರೂ ಚಾಲಕ 36 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟ. ಯಾಕೆ ಹೆಚ್ಚು ಎಂದು ಸಚಿವರು ಪ್ರಶ್ನಿಸಿದ್ದಕ್ಕೆ, ಮೀಟರ್ ಅನ್ನು ಸರಿಪಡಿಸುವುದಾಗಿ ತಿಳಿಸಿದ. ಕಡೆಗೆ 40 ರೂಪಾಯಿಗಳನ್ನು ನೀಡಿ ಸಚಿವರು ಕೆಳಗಿಳಿದರು.
ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್
ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಹೋಗುವ ಬಸ್ ಹತ್ತಿದ ಸಚಿವ ಬೈರತಿ ಸುರೇಶ್ ಅವರು ಬಸ್ ಸಂಚಾರ ಮಾಡುವಾಗ ಎರಡು ಟಿಕೆಟ್ ನೀಡುವಂತೆ ಕೇಳಿ, 100 ರೂಪಾಯಿ ನೋಟನ್ನು ನೀಡಿದರು. ಆಗ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದರು. ಇದಕ್ಕೆ ಪ್ರತಿಯಾಗಿ ಸಚಿವರು ಚಿಲ್ಲರೆ ಇಲ್ಲ ಎಂದಿದ್ದಕ್ಕೆ, ತನ್ನ ಬಳಿ ಚಿಲ್ಲರೆ ಇಲ್ಲದಿರುವುದನ್ನು ಬ್ಯಾಗ್ ತೋರಿಸಿ ಹೇಳಿದ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಕೆಳಗೆ ಇಳಿಯುವಂತೆ ಸಚಿವರಿಗೆ ಸೂಚಿಸಿದ. ಇದಕ್ಕೆ ಮರುಮಾತಾನಾಡದೇ ಸಚಿವರು ಕೆಳಗಿಳಿದರು.