ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್(Minister Byrati Suresh) ಅವರು ಸೋಮವಾರ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಧ್ಯಾಹ್ನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು, ವಿವಿಧ ಪ್ರದೇಶಗಳಿಗೆ ತೆರಳುವ ಸ್ಥಳಗಳನ್ನು ಪರಿಶೀಲಿಸಿದರು. ಅಲ್ಲಿದ್ದ ಪ್ರಯಾಣಿಕರ ಬಳಿಯೇ ಹೋಗಿ ಏನಾದರೂ ಸಮಸ್ಯೆಗಳಿವೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಹುತೇಕ ಪ್ರಯಾಣಿಕರು, ನಿಲ್ದಾಣದಲ್ಲಿರುವ ಸ್ವಚ್ಛತೆ ಮತ್ತು ಮೂಲ ಸೌಕರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಇದನ್ನೂ ಓದಿ: BMTC reality check: ಬಿಎಂಟಿಸಿಯಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್; ಬಸ್ ನಿಲ್ಲಿಸದ ಡ್ರೈವರ್, ಕಂಡಕ್ಟರ್ ಅಮಾನತು
ಜನಸಾಮಾನ್ಯರಂತೆ ಕುಳಿತು ಸಮಸ್ಯೆ ಆಲಿಸಿದ ಸಚಿವರು, ಬಿಎಂಟಿಸಿ ಬಸ್ ನಿಲ್ದಾಣಕ್ಕೂ ಭೇಟಿ ನೀಡಿದ ಸಚಿವರು, ಪ್ರಯಾಣಿಕರು ಕುಳಿತುಕೊಳ್ಳುವ ಕಲ್ಲು ಬೆಂಚಿನ ಮೇಲೆ ಕುಳಿತು ಬಸ್ ಗಾಗಿ ಕಾಯ್ದು ಕುಳಿತ್ತಿದ್ದ ಪ್ರಯಾಣಿಕರೊಂದಿಗೆ ಕೆಲ ಕಾಲ ಚರ್ಚೆ ನಡೆಸಿದರು.
ಕುಂದುಕೊರತೆಗಳೇನಾದರೂ ಇವೆಯೇ ಎಂದು ಪ್ರಶ್ನಿಸಿದ ಸಚಿವರಿಗೆ ಯಾವುದೇ ತೊಂದರೆ, ಸಮಸ್ಯೆಗಳಿಲ್ಲ ಎಂದು ಪ್ರಯಾಣಿಕರಿಂದ ಉತ್ತರ ಲಭಿಸಿತು.
ವೈದ್ಯರಿಲ್ಲದ್ದಕ್ಕೆ ಗರಂ: ಆರೋಗ್ಯ ಇಲಾಖೆ ಸ್ಥಾಪಿಸಿರುವ ನಮ್ಮ ಕ್ಲಿನಿಕ್ ನಲ್ಲಿ ವೈದ್ಯರು ಇಲ್ಲದೇ ಇರುವುದನ್ನು ಗಮನಿಸಿದ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಆರೋಗ್ಯ ಇಲಾಖೆ ಆಯುಕ್ತರೊಂದಿಗೆ ಚರ್ಚೆ ನಡೆಸಿ ವೈದ್ಯರ ನಿಯೋಜನೆಗೆ ಕ್ರಮ ಕೈಗೊಳ್ಳಬೇಕೆಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಆದೇಶ ನೀಡಿದರು.
ಹೆಚ್ಚುವರಿ ದರ ವಸೂಲಿ ಮಾಡದಂತೆ ಸೂಚನೆ: ಕೆಲವು ಅಂಗಡಿ ಮುಗ್ಗಟ್ಟುಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿದರು. ಅಲ್ಲದೇ, ಯಾವುದೇ ಕಾರಣಕ್ಕೂ ಉತ್ಪನ್ನಗಳಿಗೆ ಪ್ರಯಾ ಣಿಕರಿಂದ ಹೆಚ್ಚುವರಿ ಬೆಲೆ ವಸೂಲಿ ಮಾಡಬಾರದು ಎಂದು ಸೂಚನೆ ನೀಡಿದರು.
ಅದೇರೀತಿ, ಲಗೇಜ್ ಕೌಂಟರ್ʼನಲ್ಲಿ ನಿಗದಿಗಿಂತ ಹೆಚ್ಚುವರಿ ಹಣ ಪಡೆಯಲಾಗುತ್ತಿದೆಯೇ ಎಂದು ಪ್ರಯಾಣಿಕರನ್ನು ಪ್ರಶ್ನಿಸಿದರು. ಯಾವುದೇ ಹೆಚ್ಚುವರಿ ಹಣ ಪಡೆಯುತ್ತಿಲ್ಲ ಎಂದು ತಿಳಿಸಿದರು.
ನಂತರ ಬಿಎಂಟಿಸಿ ವಿದ್ಯಾರ್ಥಿ ಪಾಸ್ ಕೌಂಟರ್ ಗೆ ಭೇಟಿ ನೀಡಿ, ಪಾಸ್ ವಿತರಣೆ ಮಾಡುವ ಕಂಪ್ಯೂಟರ್ ಬಳಿ ಕುಳಿತುಕೊಂಡು ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಬೈರತಿ ಸುರೇಶ್ ಅವರು, ಬಿಎಂಟಿಸಿಯ ನಮ್ಮ ಕ್ಲಿನಿಕ್ ನಲ್ಲಿ ಕೂಡಲೇ ವೈದ್ಯರನ್ನು ನಿಯೋಜನೆ ಮಾಡಬೇಕು ಮತ್ತು ಅಗತ್ಯವಿರುವ ಕಡೆಗಳಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
*
- ನಿಲ್ದಾಣದಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತು ಪ್ರಯಾಣಿಕರೊಂದಿಗೆ ಕುಂದುಕೊರತೆ ವಿಚಾರಣೆ
- ಸ್ಥಳದಲ್ಲೇ ಸಮಸ್ಯೆಗಳ ಆಲಿಕೆ, ಸ್ಪಂದನೆ
- ಬಿಎಂಟಿಸಿ ನಿಲ್ದಾಣದಲ್ಲಿರುವ ನಮ್ಮ ಕ್ಲಿನಿಕ್ ನಲ್ಲಿ ವೈದ್ಯರು ಇಲ್ಲದಿರುವುದರ ಬಗ್ಗೆ ಸಿಡಿಮಿಡಿ
- ತಕ್ಷಣವೇ ವೈದ್ಯರ ನಿಯೋಜನೆ ಮಾಡುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ
- ಆರೋಗ್ಯ ಇಲಾಖೆ ಆಯುಕ್ತರೊಂದಿಗೆ ಚರ್ಚಿಸುವಂತೆ ಆದೇಶ
- ಪ್ರಯಾಣಿಕರಿಗೆ ತೊಂದರೆ ಆಗದ ರೀತಿಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ
- ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ವಿತರಣೆಯಲ್ಲಿ ಲೋಪ ಮತ್ತು ವಿಳಂಬವಾಗದಂತೆ ಕ್ರಮಕ್ಕೆ ಆದೇಶ