ಬೆಂಗಳೂರು, ಜ. 3: ಯಲಹಂಕ (Yelahanka) ಬಳಿ ಅರಣ್ಯ ಇಲಾಖೆಗೆ ಸೇರಿದ 153 ಎಕ್ರೆಯಲ್ಲಿ ಬೃಹತ್ ಜೀವ ವೈವಿಧ್ಯ ಉದ್ಯಾನವನ (Biodiversity Park) ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ವಿಶ್ವಗುರು ಬಸವಣ್ಣ ಅವರ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ಈ ಉದ್ಯಾನ ಲಾಲ್‌ಬಾಗ್ (Lalbagh) ಮತ್ತು ಕಬ್ಬನ್ ಪಾರ್ಕ್ (Cubbon Park) ನಂತರ ಬೆಂಗಳೂರಿ (Bengaluru)ನ ಮೂರನೇ ಅತಿದೊಡ್ಡ ಉದ್ಯಾನವನ ಆಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ವೇಳೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, "ಉತ್ತರ ಬೆಂಗಳೂರು ಪ್ರದೇಶದಲ್ಲಿನ ಹಸಿರು ಪ್ರದೇಶಗಳ ಕೊರತೆಯನ್ನು ಈ ಉದ್ಯಾನವನ ಭರ್ತಿ ಮಾಡಲಿದ್ದು, ಸಾರ್ವಜನಿಕರಿಗೆ ಅಗತ್ಯವಾದ ವಿಶ್ರಾಂತಿ ಮತ್ತು ಪ್ರಕೃತಿಯ ಸೌಂದರ್ಯ ಸವೆಯುವ ಅವಕಾಶ ನೀಡಲಿದೆ" ಎಂದು ತಿಳಿಸಿದರು.
ʼʼಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕ್ರೆಯಲ್ಲಿ ತಲೆ ಎತ್ತಲಿರುವ ಈ ಉದ್ಯಾನವನ ರಾಜ್ಯ ರಾಜಧಾನಿಯ 3ನೇ ಅತಿದೊಡ್ಡ ಉದ್ಯಾನವನವೆಂಬ ಖ್ಯಾತಿಗೆ ಪಾತ್ರವಾಗಲಿದೆ. 265 ವರ್ಷಗಳ ಹಿಂದೆ (1760ರಲ್ಲಿ) 240 ಎಕ್ರೆಯಲ್ಲಿ ಲಾಲ್ ಬಾಗ್ ನಿರ್ಮಾಣವಾಗಿತ್ತು. 1870ರಲ್ಲಿ 197 ಎಕ್ರೆಯಲ್ಲಿ ಜನಾಕರ್ಷಣೆಯ ತಾಣ ಕಬ್ಬನ್ ಪಾರ್ಕ್ ನಿರ್ಮಿಸಲಾಯಿತು. ಆದಾದ ಬಳಿಕ ಬೆಂಗಳೂರಿನಲ್ಲಿ ಹಲವು ಸಣ್ಣ ಉದ್ಯಾನಗಳ ನಿರ್ಮಾಣವಾಗಿದೆಯಾದರೂ ಬೃಹತ್ ಉದ್ಯಾನ ನಿರ್ಮಾಣ ಆಗಿರಲಿಲ್ಲ. ಈಗ ಅಂತಹ ಒಂದು ಬೃಹತ್ ಜೀವವೈವಿಧ್ಯ ಉದ್ಯಾನವನ್ನು ನಮ್ಮ ಸರ್ಕಾರ ನೀಡಲಿದೆʼʼ ಅವರು ಹೇಳಿದರು.
ʼʼಈ ಉದ್ಯಾನದಲ್ಲಿ ದಿವ್ಯೌಷಧೀಯ ಸಸ್ಯ ವನ, ಪಕ್ಷಿ ಲೋಕ, ವೃಕ್ಷೋದ್ಯಾನ ಹಾಗೂ ಇಂಟರ್ ಪ್ರಿಟೇಷನ್ ಸೆಂಟರ್ ನಿರ್ಮಾಣ ಮಾಡಲು ಚಿಂತಿಸಲಾಗಿದ್ದು, ಅತಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿರುವ ಶಿವರಾಮ ಕಾರಂತ ಬಡಾವಣೆಗೆ ಅತ್ಯಂತ ಸಮೀಪದಲ್ಲಿದೆ. ಈ ಯೋಜನೆಗಾಗಿ ಆರಂಭಿಕವಾಗಿ 50 ಕೋಟಿ ರುಪಾಯಿ ಮಂಜೂರು ಮಾಡಿದ್ದು, 3 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ'' ಎಂದು ಖಂಡ್ರೆ ತಿಳಿಸಿದರು.
ʼʼಈ ಹಿಂದೆ 153 ಎಕ್ರೆಯಲ್ಲಿ ನೆಡುತೋಪು ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ಇದೀಗ ಅರಣ್ಯ ಇಲಾಖೆಯು ಈ ಜಾಗವನ್ನು ಮರಳಿ ಪಡೆದಿದ್ದು, ಇಲ್ಲಿರುವ ನೀಲಗಿರಿ ಮರಗಳನ್ನು ಹಂತಹಂತವಾಗಿ ತೆರವುಗೊಳಿಸಿ, ಇಲ್ಲಿ ಸಾಂಪ್ರದಾಯಿಕ ದೇಶೀ ಸಸ್ಯಗಳಾದ ನಂದಿ, ಹೊನ್ನೆ, ಬಿಲ್ವ, ಮಹಾಬಿಲ್ವವೇ ಮೊದಲಾದ ನೂರಾರು ಪ್ರಭೇದದ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ಹೀಗೆ ಬೆಳೆಸುವ ಎಲ್ಲ ಮರಗಳ ಬಳಿ ವೃಕ್ಷದ ಹೆಸರು, ಪ್ರಭೇದ ಇತ್ಯಾದಿ ವೈಜ್ಞಾನಿಕ ವಿವರದ ಫಲಕ ಹಾಕುವ ಮೂಲಕ ಮುಂದಿನ ಪೀಳಿಗೆ ಕನಿಷ್ಠ 50 ಮರಗಳನ್ನು ಗುರುತಿಸುವಂತೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ. ಇದರಿಂದ ಸ್ಥಳೀಯ ವಾಯು ಗುಣಮಟ್ಟ ಸುಧಾರಿಸಿ, ನಗರ ವ್ಯಾಪ್ತಿಯಲ್ಲೇ ಉತ್ತಮ ಪರಿಸರ ವ್ಯವಸ್ಥೆ ನಿರ್ಮಾಣವಾಗಲಿದೆʼʼ ಎಂದು ಅರಣ್ಯ ಸಚಿವರು ವಿವರಿಸಿದರು.